ಮರಗೋಡು, ಜು. 12: ಕಳೆದ 50ಕ್ಕೂ ಅಧಿಕ ವರ್ಷಗಳಿಂದ ಸಂಪರ್ಕ ರಸ್ತೆಯನ್ನು ಉನ್ನತೀಕರಣ ಮಾಡದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಮೊಕದ್ದಮೆ ಹೂಡಿ ಅಧಿಕಾರಿಗಳನ್ನು ಮರಗೋಡು ಗ್ರಾಮಸ್ಥರು ಹೈಕೋರ್ಟ್ ಕಟಕಟೆಗೆ ಎಳೆದಿರುವ ಘಟನೆ ವರದಿಯಾಗಿದೆ. ಮರಗೋಡು ಗ್ರಾಮದಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ, ದುರಸ್ತಿ ಕಂಡು ಎಷ್ಟೋ ದಶಕಗಳೇ ಕಳೆದುಹೋಗಿವೆ. ತೀರಾ ಕಿರಿದಾಗಿರುವ ಈ ರಸ್ತೆ ಸಂಪೂರ್ಣ ಹಾಳಾಗಿಹೋಗಿದೆ.

ಒಂದು ಕಾರು ಮಾತ್ರ ಸಂಚರಿಸಬಹುದಾದ ಈ ರಸ್ತೆಯಲ್ಲಿ ಎದುರಿನಿಂದ ಬೈಕ್ ಬಂದರೆ ದಾರಿಯಿಲ್ಲದೆ ಗುಂಡಿಗೆ ಬೀಳುವದು ಖಂಡಿತ. ಮಳೆಗಾಲದಲ್ಲಂತೂ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಎಲ್ಲಿದೆ ಎಂಬದೇ ಅರಿವಾಗುವದಿಲ್ಲ. ಹಾಗಾಗಿ ಅಪಘಾತಗಳು ಈ ರಸ್ತೆಯಲ್ಲಿ ಸರ್ವೇಸಾಮಾನ್ಯವಾಗಿದೆ. ಈ ರಸ್ತೆಯಲ್ಲಿ ಓಡಾಡುವ ವಾಹನಗಳು ಅವಧಿಗೆ ಮೊದಲೇ ಆಯಸ್ಸು ಕಳೆದುಕೊಂಡು ಗುಜರಿ ಸೇರುತ್ತಿವೆ. ಪದೇ ಪದೇ ರಿಪೇರಿಯಿಂದಾಗಿ ವಾಹನ ಮಾಲೀಕರು ಹೈರಾಣಾಗಿದ್ದಾರೆ.

ಹಾಗಾಗಿ ಈ ರಸ್ತೆಯನ್ನು ಅಗಲೀಕರಿಸಿ ಅಭಿವೃದ್ಧಿಗೊಳಿಸುವಂತೆ ಮರಗೋಡು ಗ್ರಾಮದ ಮಂಡಿರ ದೇವಯ್ಯ, ಕಟ್ಟೆಮನೆ ಪ್ರಣಮ್ ಸೇರಿದಂತೆ ಹಲವು ಮಂದಿ ಸರ್ಕಾರಕ್ಕೆ ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೂ ಜಿಲ್ಲಾಡಳಿವಾಗಲೀ ಜನಪ್ರತಿನಿಧಿಗಳಾಗಲೀ, ರಾಜ್ಯ ಸರ್ಕಾರವಾಗಲೀ ಈ ಮನವಿಯನ್ನು ಪುರಸ್ಕರಿಸಲೇ ಇಲ್ಲ. ಇದರಿಂದ ಬೇಸೆತ್ತ ಇವರು ಸ್ಥಳೀಯ ಮರಗೋಡು, ಅರೆಕಾಡು ಹಾಗೂ ಅಭ್ಯತ್ ಮಂಗಲ ಗ್ರಾಮ ಪಂಚಾಯಿತಿ ಪಿಡಿಓಗಳು, ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಪಂಚಾಯತ್ ಮುಖ್ಯ ಇಂಜಿನಿಯರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹೈಕೋರ್ಟ್‍ನಲ್ಲಿ ದೂರು ದಾಖಲಿಸಿದ್ದಾರೆ. ಮಾತ್ರವಲ್ಲ ರಸ್ತೆ ಅಭಿವೃದ್ಧಿಗೊಳಿಸುವಂತೆ ಈ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದೂರುದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇವರ ಪರವಾಗಿ ಮೊಟ್ಟನ ರವಿಕುಮಾರ್ ಹೈಕೋರ್ಟ್‍ನಲ್ಲಿ ವಕಾಲತ್ತು ವಹಿಸಿದ್ದಾರೆ. ಈಗಾಗಲೇ ಮೊದಲ ವಿಚಾರಣೆ ನಡೆದಿದ್ದು ಸರ್ಕಾರಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಮಂಡಿರ ದೇವಯ್ಯ ಮತ್ತು ಕಟ್ಟೆಮನೆ ಪ್ರಣಮ್ ಅವರ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಡಿರ ದೇವಯ್ಯ, ದೂರುದಾರ

ಈ ಐದೂ ಗ್ರಾಮಗಳಲ್ಲಿ ನೂರಾರು ವಾಹನಗಳಿದ್ದು ಪ್ರತಿಯೊಬ್ಬರು ಲಕ್ಷಾಂತರ ರೂಪಾಯಿ ರಸ್ತೆ ತೆರಿಗೆ ಪಾವತಿಸಿದ್ದಾರೆ. ಆದರೆ ನಮಗೆ ಉತ್ತಮ ದರ್ಜೆಯ ರಸ್ತೆಗಳಿಲ್ಲ.

ಕಳೆದ ಮೂರು ನಾಲ್ಕು ದಶಕಗಳಿಂದ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಿಲ್ಲ. ಈ ಕುರಿತ ನಮ್ಮ ಮನವಿಯನ್ನು ಸರ್ಕಾರಗಳು, ಅಧಿಕಾರಿಗಳು ಪರಿಗಣಿಸಿಲ್ಲ. ಹಾಗಾಗಿ ನಾವು ನಮ್ಮ ಹಕ್ಕನ್ನು ಪಡೆಯಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ.

ಕೆಂಜನ ಕೆಂಚಪ್ಪ: ನಿವೃತ್ತ ಪ್ರಾಂಶುಪಾಲರು, ಹೊಸ್ಕೇರಿ ಗ್ರಾಮ ಮರಗೋಡು ಸಿದ್ದಾಪುರ ರಸ್ತೆ, ಪಿರಿಯಾಪಟ್ಟಣ ಮೂಲಕ ಮೈಸೂರು ತೆರಳಲು ಅನುಕೂಲವಾಗಿರುವ ಉತ್ತಮ ಸಂಪರ್ಕ ರಸ್ತೆಯಾಗಿದೆ. ಕೇರಳಕ್ಕೂ ಕೂಡ ಇದು ಸಮೀಪದ ರಸ್ತೆಯಾಗಿದೆ. ಆದರೆ ಇಂದು ವಾಹನ ಸವಾರರು ಪ್ರಾಣಭಯದಲ್ಲಿ ಈ ರಸ್ತೆಯಲ್ಲಿ ಸಂಚರಿಸುವಂತಹ ಪರಿಸ್ಥಿತಿ ಇದೆ. ಹಾಗಾಗಿ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ದೂರು ದಾಖಲಿಸಿರುವದು ಸರಿಯಾಗಿಯೇ ಇದೆ. ನ್ಯಾಯಾಲಯದ ಮೂಲಕವಾದರೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ.

-ಗೋಪಾಲ್ ಸೋಮಯ್ಯ