ಬೆಂಗಳೂರು, ಜು. 12: ವಿರೋಧ ಪಕ್ಷದ ಬೇಡಿಕೆಯಂತೆ ಬಜೆಟ್ ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕರ ಜತೆ ಚರ್ಚೆ ನಡೆಸಿದ ನಂತರ ರಮೇಶ್ ಕುಮಾರ್ ಅವರು ಸದನದಲ್ಲಿ ಅಧಿವೇಶನ ವಿಸ್ತರಿಸುವ ಮಾಹಿತಿ ನೀಡಿದ್ದಾರೆ. ಇಂದು ಕೊನೆಗೊಳ್ಳಬೇಕಿದ್ದ ಅಧಿವೇಶನ ನಾಳೆ ಶುಕ್ರವಾರವೂ ನಡೆಯಲಿದ್ದು, ವಿವಿಧ ಸಮಸ್ಯೆಗಳು ಚರ್ಚೆಗೆ ಬರಲಿದೆ. ಬಿಜೆಪಿಯ ಹಲವು ಶಾಸಕರಿಗೆ ಮಾತನಾಡಲು ಅವಕಾಶ ಸಿಗದ ಹಿನ್ನೆಲೆ ಬಿ.ಎಸ್. ಯಡಿಯೂರಪ್ಪ ಅವರು ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ಸ್ವೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದರು. ತುರ್ತಾಗಿ ಕಾರ್ಯ ಕಲಾಪ ಸಮಿತಿಯ ಸಭೆ ಕರೆದ ಸ್ಪೀಕರ್ ಸದನವನ್ನು ಒಂದು ದಿನದ ಕಾಲ ವಿಸ್ತರಿಸಿದ್ದಾರೆ.

ಮಳೆಗೆ ಇಲ್ಲಿಯವರೆಗೆ 138 ಸಾವು

ಬೆಂಗಳೂರು, ಜು. 12: ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಮಳೆ ಸಂಬಂಧಿತ ಅನಾಹುತಗಳಲ್ಲಿ ಸಿಲುಕಿ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಳೆಯಿಂದಾಗಿ ಸುಮಾರು 138 ಜನರು ಸಾವನ್ನಪ್ಪಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್‍ಗೆ ದೊರೆತಿರುವ ಮಾಹಿತಿ ಪ್ರಕಾರ ಮಾರ್ಚ್ 2018 ರಿಂದ ತಾ. 10 ರವರೆಗೂ ಮಳೆ ಸಂಬಂಧಿತ ಅನಾಹುತಗಳಲ್ಲಿ ಸುಮಾರು 138 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 103 ಸಿಡಿಲಿಗೆ ಸಿಲುಕಿ ಸತ್ತಿದ್ದರೆ, 12 ಮಂದಿ ನೀರಿನಲ್ಲಿ ಮುಳುಗಿ ಹೋಗಿದ್ದಾರೆ, ಮನೆ ಧ್ವಂಸಗೊಂಡು ಏಳು ಮಂದಿ ಸಾವನ್ನಪ್ಪಿದ್ದಾರೆ. ಮರ ಬಿದ್ದು 8 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ ವರ್ಷದ 12 ತಿಂಗಳ ಅವಧಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 160 ಮಂದಿ ಸಾವನ್ನಪ್ಪಿದ್ದರು. ಈ ಬಾರಿ ರಾಜ್ಯದಲ್ಲಿ 526 ಮಿಲಿ ಮೀಟರ್ ಮಳೆಯಾಗಿದ್ದು, ಶೇ. 24 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಮುಂಗಾರು ಇನ್ನೂ 50 ದಿನಗಳವರೆಗೂ ಮುಂದುವರೆಯಲಿದ್ದು, ಇನ್ನಷ್ಟು ಪ್ರಮಾಣದ ಹಾನಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮೈಸೂರು, ಕೊಡಗು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಯ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೆಎಸ್‍ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ವಿಪತ್ತು ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ಗಂಗರಾಮ್ ಬಡೇರಿಯಾ ನಿರ್ದೇಶನ ನೀಡಿದ್ದಾರೆ. ರಾಜ್ಯದಲ್ಲಿನ ನದಿಗಳ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕುರಿತಂತೆ ನಿಗಾ ಇರಿಸುವಂತೆ ಕೇಂದ್ರೀಯ ಜಲ ಆಯೋಗ ಸಲಹೆ ನೀಡಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಭಾರೀ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಜಲಾಶಯಗಳ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

100 ತಂಡಗಳ ವಿಪತ್ತು ನಿರ್ವಹಣಾ ಪಡೆ

ನವದೆಹಲಿ, ಜು. 12: ಭಾರೀ ಮಳೆ ಹಾಗೂ ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ 71 ಕಡೆಗಳಲ್ಲಿ ಸುಮಾರು 100 ತಂಡಗಳಲ್ಲಿ 4 ಸಾವಿರದ 500 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಎನ್‍ಡಿಆರ್‍ಎಫ್ ತುಕಡಿಗಳೊಂದಿಗೆ ಹೆಚ್ಚುವರಿ ತಂಡಗಳಿದ್ದು, ಅವುಗಳನ್ನು ಬೇಡಿಕೆಗೆ ತಕ್ಕಂತೆ ಬಳಸಿಕೊಳ್ಳಲಾಗುತ್ತದೆ ಎಂಬದು ಮೂಲಗಳಿಂದ ತಿಳಿದು ಬಂದಿದೆ. ಪ್ರವಾಹ ಪೀಡಿತ ಜನರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 14 ರಾಜ್ಯಗಳ 74 ಕಡೆಗಳಲ್ಲಿ 97 ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಎನ್‍ಡಿಆರ್ ಎಫ್ ಪಡೆ ಭಾರತೀಯ ಹವಾಮಾನ ಇಲಾಖೆ ಹಾಗೂ ಕೇಂದ್ರ ನೀರು ಆಯೋಗ ಮತ್ತಿತರ ಏಜೆನ್ಸಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿವೆ. ಬೆಟಲಿಯನ್ ಕಮಾಂಡರ್ ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಉಂಟಾದಾಗ ಅಗತ್ಯ ನೆರವು ಪಡೆಯಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್ ಪ್ರವಾಹಕ್ಕೆ 195 ಸಾವು

ಟೊಕಿಯೊ, ಜು. 12: ಜಪಾನ್ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದೆ. ರಾಜಧಾನಿ ಟೊಕಿಯೋ ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಈವರೆಗೂ ಸುಮಾರು 195 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದಾಗಿ ಇಬ್ಬರು ನಾಪತ್ತೆಯಾಗಿರುವದು ದೃಢಪಟ್ಟಿದ್ದು, 42 ಜನರ ಬಗ್ಗೆ ಯಾವದೇ ಮಾಹಿತಿ ಸಿಕ್ಕಿಲ್ಲ ಎಂದು ಜಪಾನಿನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ ತಿಳಿಸಿದ್ದಾರೆ. ಮಳೆಯಿಂದಾ ಹಾನಿಗೀಡಾಗಿರುವ ಒಕಾಯಾಮಾ ಪ್ರದೇಶಕ್ಕೆ ಜಪಾನ್ ಪ್ರಧಾನಿ ಶಿಂಜೊ ಅಬೆ ನಿನ್ನೆ ಭೇಟಿ ನೀಡಿ, ಹಾನಿ ಕುರಿತು ಹೆಲಿಕಾಪ್ಟರ್ ಮೂಲಕ ಸರ್ವೆ ನಡೆಸಿದರು. ಭಾರೀ ಮಳೆಯಿಂದಾಗಿ ಸಾಕಷ್ಟು ಪ್ರಮಾಣದ ಹಾನಿಯಾಗಿರುವದಾಗಿ ಅವರು ಹೇಳಿದ್ದಾರೆ. ಮಳೆಯಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ಒದಗಿಸಿರುವ ಪರಿಹಾರ ಕೇಂದ್ರಕ್ಕೂ ಅವರು ಭೇಟಿ ನೀಡಿದ್ದು, ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿರುವದಾಗಿ ಅವರು ಹೇಳಿದ್ದಾರೆ. ಕುರಾಶಿಕಾಗೂ ಅವರು ಭೇಟಿ ನೀಡಿದ್ದು, ಒಕಾಯಾಮಾ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ್ದಾರೆ.

ಆಧ್ಯಾತ್ಮಿಕ ನಾಯಕ ದಾದಾ ನಿಧನ

ಪುಣೆ, ಜು. 12: ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ ನಿಧನರಾಗಿದ್ದಾರೆ. 99 ವರ್ಷದ ವಾಸ್ವಾನಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ನಗರದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನಿನ್ನೆ ರಾತ್ರಿಯಷ್ಟೇ ಡಿಸ್ಟಾರ್ಜ್ ಮಾಡಲಾಗಿತ್ತು. ಇಂದು ಬೆಳಿಗ್ಗೆ ಅವರು ತಮ್ಮ ಮಿಶನ್ ಕೇಂದ್ರದಲ್ಲಿ ನಿಧನ ಹೊಂದಿದರು. ಮುಂದಿನ ತಿಂಗಳ ಶತಾಯುಷಿ ಆಗಲಿದ್ದ ವಾಸ್ವಾನಿ ಅವರ 100ನೇ ಹುಟ್ಟು ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಮಿಶನ್ ಉದ್ದೇಶಿಸಿತ್ತು. ವಾಸ್ವಾನಿ ಅವರು ಹುಟ್ಟಿದ್ದು ಪಾಕಿಸ್ಥಾನದ ಹೈದರಾಬಾದ್ ನಗರದಲ್ಲಿ ಸಿಂಧಿ ಕುಟುಂಬದಲ್ಲಿ; 1918ರ ಆಗಸ್ಟ್ 2 ರಂದು. ದಾದಾ ವಾಸ್ವಾನಿ ಎಂದೇ ಅವರು ಪ್ರಖ್ಯಾತರಾಗಿದ್ದರು. ಪುಣೆಯ ಸಾಧು ವಾಸ್ವಾನಿ ಮಿಷನ್ ಮುಖ್ಯಸ್ಥರಾಗಿದ್ದರು. ಈ ಮಿಷನ್ ಆಸ್ಪತ್ರೆ ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.