ಸೋಮವಾರಪೇಟೆ,ಜು.12: ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಏರ್ಪಟ್ಟಿದ್ದ ಜಾಗದ ತಕರಾರು, ಗ್ರಾಮ ಪಂಚಾಯಿತಿ ನ್ಯಾಯ ಸಮಿತಿ ಸಭೆಯಲ್ಲಿ ಇತ್ಯರ್ಥಗೊಂಡಿದೆ.

ಗ್ರಾ.ಪಂ. ಉಪಾಧ್ಯಕ್ಷೆ ಹಾಗೂ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯೂ ಆಗಿರುವ ಕುಸುಮ ಅವರ ಅಧ್ಯಕ್ಷತೆಯಲ್ಲಿ ಹೊಸತೋಟ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಸ್ತøತ ಚರ್ಚೆ ನಡೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಯಿತು.

ಗರಗಂದೂರು ಬಿ ಗ್ರಾಮದ ಮುಖ್ಯರಸ್ತೆ ಸಮೀಪ ಸ.ನಂ. 141/1ರಲ್ಲಿ ಬಿ.ಟಿ. ಬಾಬು ಹಾಗೂ ಮೀರ ಅವರುಗಳಿಗೆ ಸೇರಿದ ಪಿತ್ರಾರ್ಜಿತ ಆಸ್ತಿಯಿದ್ದು, ಬಿ.ಟಿ. ಬಾಬು ಅವರು ದಾಖಲೆ ಪ್ರಕಾರ ಸುಮಾರು 40 ಸೆಂಟ್ಸ್ ಜಾಗವನ್ನು ಮಾರಾಟ ಮಾಡಿದ್ದು, ಸದ್ರಿ ಪ್ರದೇಶದಲ್ಲಿ 1 ಏಕರೆ ಜಾಗವಿದ್ದು, ಈ ಜಾಗಕ್ಕೆ ಸಂಬಂಧಿಸಿದಂತೆ ಉಭಯ ಕಡೆಯವರೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ನಂತರ ಈ ಪ್ರಕರಣ ಪಂಚಾಯಿತಿಯ ನ್ಯಾಯ ಸ್ಥಾಯಿ ಸಮಿತಿ ಎದುರು ಬಂದ ಹಿನ್ನೆಲೆ ಉಭಯ ಕಡೆಯವರೊಂದಿಗೆ ಮಾತುಕತೆ ನಡೆಸಿ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ತಲಾ 50 ಸೆಂಟ್ಸ್ ಜಾಗವನ್ನು ಸಮಪಾಲು ಮಾಡುವಂತೆ ತೀರ್ಮಾನಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಮಾ, ಸದಸ್ಯರಾದ ಗೌತಮ್ ಶಿವಪ್ಪ, ದೇವಪ್ಪ, ಶೈಲಜಾ, ಪರಮೇಶ್, ಸುಬ್ಬಯ್ಯ, ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ, ಸಿಬ್ಬಂದಿ ರವಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.