ವೀರಾಜಪೇಟೆ, ಜು. 12: ಕರಡಿಗೋಡಿನ ಕುಕ್ಕನೂರು ಮೋಹನ್‍ದಾಸ್ ಕಾಡಾನೆ ದಾಳಿಯಿಂದ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕ್ರಿಮಿನಲ್ ಪ್ರಕರಣಕ್ಕೆ ಅರಣ್ಯಾಧಿಕಾರಿಗಳ ಪರವಾಗಿ ‘ಬಿ’ ರಿಪೋರ್ಟ್ ಸಲ್ಲಿಸಿರುವದರ ವಿರುದ್ಧ ಇಂದು ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದಲ್ಲಿ ಕೊಡಗು ಜಿಲ್ಲಾ ರೈತರ ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಪ್ರಮುಖರಾದ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಹಿರಿಯ ವಕೀಲ ಕೆ.ಬಿ. ಹೇಮಚಂದ್ರ ಅವರು ಆಕ್ಷೇಪಣೆ ಸಲ್ಲಿಸಿದನ್ನು ಪರಿಶೀಲಿಸಿದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಅವರು ವಿಚಾರಣೆಯನ್ನು ತಾ. 30ಕ್ಕೆ ಮುಂದೂಡಿದರು.

ಕಳೆದ 22.1.2018 ರಂದು ಕಾಫಿ ಬೆಳೆಗಾರ ಕುಕ್ಕನೂರು ಮೋಹನ್‍ದಾಸ್ ಎಂಬವರು ಕಾಡಾನೆ ಧಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರಿಂದ ಸಂಘಟನೆ ವತಿಯಿಂದ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವೀರಾಜಪೇಟೆಯ ವಿಭಾಗ ಅರಣ್ಯಾಧಿಕಾರಿ ಮರಿಯಾ ಕ್ರಿಸ್ತರಾಜು, ವಲಯ ಅರಣ್ಯಾಧಿಕಾರಿ ಗಂಗಾಧರ್ ವಿರುದ್ಧ ಐ.ಪಿ.ಸಿ.304 ಎ ಪ್ರಕಾರ (ಎಫ.ಐ.ಆರ್ 13/18) ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ತಾ. 29.6.2018ರಂದು ಸಿದ್ದಾಪುರ ಪೊಲೀಸರು ಸುಮಾರು 101 ಪುಟಗಳ ಬಿ. ರಿಪೋರ್ಟ್ ವರದಿಯನ್ನು ಸಲ್ಲಿಸಿ ಇಡೀ ಪ್ರಕರಣಕ್ಕೆ ತಿಲಾಂಜಲಿ ಹಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಮುಖಂಡರು ಆಕ್ಷೇಪಣೆ ಸಲ್ಲಿಸಿದ್ದಾರೆ.

ರೈತ ಸಂಘಟನೆ ಪರವಾಗಿ ಆಕ್ಷೇಪಣೆ ಸಲ್ಲಿಸಲು ಹೇಮಚಂದ್ರ, ಎ.ಆರ್. ರಂಜನ್, ಹಾಗೂ ಸಿ.ಕೆ. ಪೂವಣ್ಣ ವಕಾಲತು ವಹಿಸಿದ್ದಾರೆ.

ಬಿ.ರಿಪೋರ್ಟ್‍ಗೆ ವರದಿಗೆ ಆಕ್ಷೇಪಣೆ ಸಲ್ಲಿಸಿದ ನಂತರ ನ್ಯಾಯಾಲಯದಿಂದ ಹೊರಗೆ ಬಂದ ರೈತರ ಹೋರಾಟ ಸಮಿತಿಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಕಾಡಾನೆ ಧಾಳಿಗೆ 43 ಮಂದಿ ಕಾರ್ಮಿಕರು ಬಲಿಯಾದರೂ ಕೇವಲ ಒಂದು ಕುಟುಂಬದವರನ್ನದಾರೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಕಾಡಾನೆ ಮಾನವ ಸಂಘರ್ಷದಿಂದ 104 ಮಂದಿ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಬೆಳೆಗಾರರಿಗೆ ಕಾಡಾನೆ ಧಾಳಿಯಿಂದ ರೂ. 20 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಸುಮಾರು 64 ಗೋವುಗಳು ಹುಲಿ ಧಾಳಿಗೆ ಬಲಿಯಾಗಿವೆ. ಅಧಿಕಾರಿಗಳು ಯಾರಿಗೂ ಧೈರ್ಯ ತುಂಬುವಂತಹ ಕೆಲಸ ಮಾಡಿಲ್ಲ. ಕಾಡಾನೆ ಹಾವಳಿ. ಹುಲಿ ಹಾವಳಿಗೆ ಸಂಬಂಧಿಸಿದಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೊಸ ಸರಕಾರಕ್ಕೆ ವರದಿ ಕಳಿಹಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ವರದಿ ಕಳುಹಿಸಿಲ್ಲ. ಈ ರೀತಿಯ ಬೇಜವಾಬ್ದಾರಿತನದ ಅಧಿಕಾರಿಗಳು ಕೊಡಗಿಗೆ ಅವಶ್ಯಕತೆ ಇಲ್ಲ. ಕಾಡಾನೆ ಹಾವಳಿಯನ್ನು ವೈಜ್ಞಾನಿಕವಾಗಿ ತಡೆಯಲು ಅಧಿಕಾರಿಗಳು ವಿಫಲಗೊಂಡಿದ್ದಾರೆ. ಕುಕ್ಕನೂರು ಮೋಹನ್‍ದಾಸ್ ಪ್ರಕರಣಕ್ಕೆ ನ್ಯಾಯ ದೊರಕುವ ತನಕ ಹೋರಾಟ ನಡೆಸಲಾಗುವದು ಎಂದರು.

ಕೊಡಗು ಜಿಲ್ಲಾ ರೈತ ಸಂಘಟನೆಯ ದೂರಿನ ಮೇರೆ ಮೋಹನ್‍ದಾನ್ ಸಾವಿನ ಪ್ರಕರಣವನ್ನು ಸಿದ್ದಾಪುರ ಪೊಲೀಸರು ನ್ಯಾಯ ಸಮ್ಮತವಾಗಿ ಅರಣ್ಯ ಇಲಾಖೆಯ ಮೂರು ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಆದರೆ ಅಖಿಲ ಭಾರತ ಮಟ್ಟದ ಐ.ಎಫ್.ಎಸ್. ಅಧಿಕಾರಿಗಳ ಸಂಘಟನೆಯ ಪ್ರಭಾವ, ಉನ್ನತಾಧಿಕಾರಿಗಳ ಒತ್ತಡದ ಸಂಚಲನದಿಂದ ರೈತರ ಶ್ರಮಕ್ಕೆ ತಣ್ಣೀರೆರಚಲು ಪ್ರಕರಣದಲ್ಲಿ ಬಿ. ರಿಪೋರ್ಟ್ ಸಲ್ಲಿಸಲಾಗಿದೆ ಎಂದು ವಕೀಲ ಹೇಮಚಂದ್ರ ಹೇಳಿದರು.

ಈ ಸಂದರ್ಭ ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಪ್ರವೀಣ್, ನೆಹರು, ತಿಮ್ಮರಾಜು ಶೆಟ್ಟಿ, ಮಂಡೇಪಂಡ ಪ್ರವೀಣ್, ಪಾಪಯ್ಯ, ಮಾಯಣಮಾಡ ಮೋಹನ್ ಮತ್ತಿತರರು ಹಾಜರಿದ್ದರು.