ಮಡಿಕೇರಿ, ಜು. 11: ಮಳೆಯ ಅಬ್ಬರಕ್ಕೆ ನಲುಗುತ್ತಿರುವ ಕೊಡಗಿನ ಜನತೆ ತಾ. 11ರಂದು ಸ್ವಲ್ಪಮಟ್ಟಿಗೆ ನಿರಾಳವಾಗುವಂತಾಗಿತ್ತು. ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯ ರಭಸ ಸ್ವಲ್ಪ ಮಟ್ಟಿಗೆ ಇಳಿಮುಖವಾದಂತೆ ಕಂಡುಬಂದಿತು. ಆದರೂ ಯಾವ ಕ್ಷಣದಲ್ಲಿ ಮತ್ತೆ ಬಿರು ಮಳೆಯಾಗುವದೋ ಎಂಬ ಆತಂಕದ ಛಾಯೆ ಇನ್ನೂ ಮುಂದುವರಿದಿದೆ.ಇಡೀ ಜಿಲ್ಲೆಯಲ್ಲಿ ಏಕರೂಪದ ವಾತಾವರಣ ಇಲ್ಲ. ಕೆಲವು ಪ್ರದೇಶಗಳಲ್ಲಿ ಮಳೆಯ ತೀವ್ರತೆ ತಗ್ಗಿದ್ದರೂ, ಇನ್ನು ಹಲವು ಕಡೆಗಳಲ್ಲಿ ಆಗಾಗ್ಗೆ ಬಿರುಸಿನಿಂದ ಮಳೆ ಸುರಿಯುತ್ತಿರುವದು ಸಂಭವಿಸುತ್ತಿರುವ ಹಾನಿ ಹಾಗೂ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಯಥಾ ಸ್ಥಿತಿಯಲ್ಲಿ ಮುಂದುವರಿಯುತ್ತಿರುವದರಿಂದ ಪ್ರಾಕೃತಿಕ ಬದಲಾವಣೆಯನ್ನು ಖಚಿತವಾಗಿ ಊಹಿಸಲಾಗುತ್ತಿಲ್ಲ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು, ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು. ಬೆಳಿಗ್ಗೆಯೂ ರಭಸದ ಮಳೆ ಕಂಡು ಬಂತಾದರೂ, 11 ಗಂಟೆಯ ಬಳಿಕ ಸ್ವಲ್ಪ ವಿರಾಮ ನೀಡಿದಂತಿತ್ತು. ಮಳೆಯೊಂದಿಗೆ ಇದೀಗ ಬೀಸುತ್ತಿರುವ ಗಾಳಿ ಜನತೆಯಲ್ಲಿ ಆತಂಕ ಮೂಡಿಸುತ್ತಿದ್ದರೆ, ಚಳಿಯ ವಾತಾವರಣದಿಂದಾಗಿ ಪರದಾಡುವಂತಾಗಿದೆ.

ಇಡೀ ಜಿಲ್ಲೆಯಲ್ಲಿ ನಿನ್ನೆ ವಾಯು ವರುಣನ ಅಬ್ಬರದಿಂದಾಗಿ ತಾ. 11ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲ್ಪಟ್ಟಿದ್ದರಿಂದ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ತುಸು ನಿರಾಳವಾಗುವಂತಿತ್ತು. ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದ ಮಳೆಯ ತೀವ್ರತೆ ಕಡಿಮೆಯಾದಂತಿದ್ದರೂ, ಆಗಾಗ್ಗೆ ಮತ್ತೆ ಮಳೆ ಸುರಿಯುವದು ಹಾಗೂ ಮೋಡಕವಿದ ವಾತಾವರಣವೇ ಇನ್ನೂ ಮುಂದುವರಿದಿದೆ. ಇನ್ನೂ ವಿದ್ಯುತ್ ಪೂರೈಕೆಯಲ್ಲೂ ನಡು ನಡುವೆ ವ್ಯತ್ಯಯವುಂಟಾಗುತ್ತಿದೆ. ಈ ತನಕದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಮಣ್ಣು ತೇವಾಂಶದಿಂದ ಕೂಡಿದ್ದು, ಮಳೆ ಮತ್ತೆ ಇದೇ ರೀತಿಯಲ್ಲಿ ಮುಂದುವರಿದಲ್ಲಿ ಹೆಚ್ಚಿನ ಅಪಾಯ ಸಂಭವಿಸಬಹುದು ಎಂಬ ಆತಂಕ ಜನತೆಯಲ್ಲಿ ಮನೆ ಮಾಡಿದೆ. ನಾಪೋಕ್ಲು-ಭಾಗಮªಂಡಲ ರಸ್ತೆಯಲ್ಲಿ ರ್ಯಾಫ್ಟಿಂಗ್ ಬೋಟ್ ಇನ್ನೂ ಕಾರ್ಯನಿರತವಾಗಿದೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆಯಿಂದ ಹುದಿಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಬಿರುನಾಣಿ, ಬಿ.ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಗಳಲ್ಲಿಯೂ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಇಲ್ಲಿನ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ ಸರಾಸರಿ 4 ರಿಂದ 5 ಇಂಚಿನಷ್ಟು ಮಳೆ ಸುರಿಯುತ್ತಿದೆ. ಮಳೆಯೊಂದಿಗೆ ಗಾಳಿಯ ರಭಸ ಹೆಚ್ಚಿರುವದು ಹಾಗೂ ನಡು ನಡುವೆ ಸಿಡಿಲಿನ ಶಬ್ದವೂ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ ಎಂದು ಈ ವಿಭಾಗದ ನಿವಾಸಿಗಳು ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನ ಕಕ್ಕಬೆ, ಯವಕಪಾಡಿ, ನಾಪೋಕ್ಲು ವಿಭಾಗಗಳಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮುಕ್ಕೋಡ್ಲು, ಗಾಳಿಬೀಡು, ಸೂರ್ಲಬ್ಬಿಯಂತಹ ಪ್ರದೇಶಗಳಲ್ಲೂ ಮಳೆಯ ರಭಸ ಹೆಚ್ಚಾಗಿತ್ತು. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಸೇರಿದಂತೆ ಇನ್ನಿತರ ಹಲವು ಗ್ರಾಮೀಣ ಪ್ರದೇಶಗಳಲ್ಲಿಯೂ ಕಳೆದ ರಾತ್ರಿ

(ಮೊದಲ ಪುಟದಿಂದ) ತಲಕಾವೇರಿ - ಭಾಗಮಂಡಲ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದು, ಬೆಳಗ್ಗಿನ ತನಕವೂ ಇದೇ ದಾಟಿ ಮುಂದುವರಿದಿದ್ದು, ಸಂಜೆಯಿಂದ ಮತ್ತೆ ಬಿರುಸು ಕಾಣುತ್ತಿದೆ.

ಶಾಂತಳ್ಳಿ - ಭಾಗಮಂಡಲಕ್ಕೆ ಅಧಿಕ ಮಳೆ

ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹಾಗೂ ಮಡಿಕೇರಿ ತಾಲೂಕಿನ ಭಾಗಮಂಡಲ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗಿದೆ. ಶಾಂತಳ್ಳಿಗೆ 7.40 ಇಂಚು ಹಾಗೂ ಭಾಗಮಂಡಲಕ್ಕೆ 7 ಇಂಚಿನಷ್ಟು ಮಳೆಯಾಗಿದೆ.

ಉಳಿದಂತೆ ಮಡಿಕೇರಿ 3.99 ಇಂಚು, ನಾಪೋಕ್ಲುವಿಗೆ 4 ಇಂಚು ಹಾಗೂ ಸಂಪಾಜೆ ವಿಭಾಗದಲ್ಲಿ 2.66 ಇಂಚಿನಷ್ಟು ಮಳೆಯಾಗಿದೆ.

ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯಲ್ಲಿ ಕಳೆದ 24 ಗಂಟೆಗಳಲ್ಲಿ 4.37 ಇಂಚು ಮಳೆಯಾಗಿದೆ. ಹುದಿಕೇರಿ ಹೋಬಳಿಯಲ್ಲಿ 3.88 ಇಂಚು, ಅಮ್ಮತ್ತಿ 1.44 ಇಂಚು, ಪೊನ್ನಂಪೇಟೆ 1.04 ಇಂಚು, ಬಾಳೆಲೆ 0.84, ವೀರಾಜಪೇಟೆಗೆ 2.43 ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯಲ್ಲಿ 4.92 ಇಂಚು, ಕೊಡ್ಲಿಪೇಟೆ 2.77 ಇಂಚು, ಸುಂಟಿಕೊಪ್ಪ 2.45 ಇಂಚು ಹಾಗೂ ಸೋಮವಾರಪೇಟೆಗೆ 4.11 ಇಂಚು ಮಳೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.