ಮಡಿಕೇರಿ, ಜು. 11: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಸಹಕಾರಿ ರಂಗ ಹಣಾಹಣಿ ನಡೆದು, 13 ಸ್ಥಾನದಲ್ಲಿ 12 ಸ್ಥಾನ ಪಡೆದು ಬಿಜೆಪಿ ಜಯಭೇರಿ ಸಾಧಿಸಿದೆ. ಮೈತ್ರಿ ಕೂಟ ಕೇವಲ ಒಂದು ಸ್ಥಾನದಿಂದ ತೃಪ್ತಿಪಟ್ಟುಕೊಂಡಿದೆ.

ಬಿಜೆಪಿ ಬೆಂಬಲಿತರು 13 ಮಂದಿ, ಕಾಂಗ್ರೆಸ್, ಜೆಡಿಎಸ್ ಮತ್ತು ಇತರರು ಸೇರಿ ರಚಿಸಿಕೊಂಡಿರುವ ಸಹಕಾರಿ ರಂಗ ಮೈತ್ರಿಕೂಟದ 13 ಮಂದಿ ಮತ್ತು ಮೂವರು ಪಕ್ಷೇತರವಾಗಿ ಸ್ಪರ್ಧಿಸಿ, ಒಟ್ಟು 29 ಮಂದಿ ಸ್ಪರ್ಧಿಸಿದ್ದರು.

ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ 6 ಸ್ಥಾನಗಳಿದ್ದು, ಬಿಜೆಪಿ ಬೆಂಬಲಿತರಾದ ನಾಗೇಶ್ ಕುಂದಲ್ಪಾಡಿ, ದೀನರಾಜ್ ಡಿ.ಸಿ., ಪ್ರಸನ್ನ ನೆಕ್ಕಿಲ, ಅಶೋಕ ಪಿ.ಎಂ., ಮೋನಪ್ಪ ನಿಡ್ಯಮಲೆ ವಿಜಯಿಯಾದರೆ, ಸಹಕಾರಿ ರಂಗದ ಅಭ್ಯರ್ಥಿ ಗಾಂಧಿಪ್ರಸಾದ್ ಬಂಗಾರಕೋಡಿ ಮಾತ್ರ ವಿಜಯಿಯಾದರು. ಸಾಲಗಾರ ಕ್ಷೇತ್ರ ಮಹಿಳಾ ಸ್ಥಾನದಿಂದ ಬಿಜೆಪಿ ಬೆಂಬಲಿತರಾದ ರೇಣುಕಾ ಕೆ.ಎಲ್. ಮತ್ತು ಪ್ರಮೀಳಾ ಭಾರದ್ವಾಜ್, ಸಾಲಗಾರ ಕ್ಷೇತ್ರ ಹಿಂ.ವರ್ಗ ಎ ಸ್ಥಾನದಿಂದ ಬಿಜೆಪಿ ಬೆಂಬಲಿತರಾದ ಉದಯಕುಮಾರ್ ಆಚಾರ್ ಹಾಗೂ ದಾಸಪ್ಪ ಮಡಿವಾಳ ವಿಜಯಿಯಾಗಿದ್ದಾರೆ. ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಸ್ಥಾನದಿಂದ ಬಿಜೆಪಿ ಬೆಂಬಲಿತರಾದ ಜಯರಾಮ ಪಿ.ಟಿ., ಸಾಲಗಾರ ಕ್ಷೇತ್ರ ಪರಿಶಿಷ್ಟ ಪಂಗಡದಿಂದ ಬಿಜೆಪಿ ಬೆಂಬಲಿತರಾದ ಶೇಷಪ್ಪ ಎನ್.ವಿ., ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತರಾದ ಕಿರಣ್ ಬಿ.ಎಲ್. ಜಯಭೇರಿ ಸಾಧಿಸಿದ್ದಾರೆ.