ಸಿದ್ದಾಪುರ: ಜಿಲ್ಲಾದÀ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ.ಸಿದ್ದಾಪುರದ ಕರಡಿಗೋಡು ಭಾಗದಲ್ಲಿ ತಗ್ಗು ಪ್ರದೇಶದ ಮನೆಗಳ ಸಮೀಪದಲ್ಲೇ ನದಿ ನೀರು ಹರಿಯುತ್ತಿದ್ದು, ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಕರಡಿಗೋಡುವಿನ ಚಿಕ್ಕನಹಳ್ಳಿಗೆ ತೆರಳುವ ಕಿರು ಸೇತುವೆ ಮುಳುಗಡೆಗೊಳ್ಳುವ ಸಾಧ್ಯತೆ ಇದ್ದು, ಕರಡಿಗೋಡುವಿನಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಕರಡಿಗೋಡುವಿನ ಗ್ರಾ.ಪಂ ಸದಸ್ಯೆ ಎಂ.ಆರ್ ಪೂವಮ್ಮ ಎಂಬವರ ಮನೆಯ ಹಿಂಬಾಗದಲ್ಲಿ ನದಿ ದಡ ಕುಸಿದಿದ್ದು, ಮತ್ತಷ್ಟು ಮನೆಗಳ ಬದಿಯಲ್ಲಿ ಕುಸಿಯುವ ಸಾಧ್ಯತೆ ಇದೆ.

ಗುಹ್ಯ ಗ್ರಾಮದಲ್ಲೂ ಕೂಡ ಪ್ರವಾಹದ ಭೀತಿ ಉಂಟಾಗಿದ್ದು, ಐತಿಹಾಸಿಕ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ಹಾಗೂ ಕಕ್ಕಟ್ಟುಕಾಡುವಿಗೆ ತೆರಳುವ ರಸ್ತೆ ಮುಳುಗಡೆಗೊಂಡಿದೆ. ನೆಲ್ಯಹುದಿಕೇರಿ ಭಾಗದ ಕುಂಬಾರಗುಂಡಿ, ಬೆಟ್ಟದಕಾಡು ಹಾಗೂ ಬರಡಿ ವ್ಯಾಪ್ತಿಯಲ್ಲಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕರಡಿಗೋಡು ಹಾಗೂ ಗುಹ್ಯ ಗ್ರಾಮಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾರೀ ಮಳೆಗೆ ಮನೆ ಕುಸಿತಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಜಯನಗರ ಗ್ರಾಮದ ಜಾನಕಿ ತಮ್ಮಣ್ಣಾಚಾರಿ, ಹೊನ್ನಮ್ಮ ಎಂಬವರ ಎರಡು ಮನೆಯ ಗೋಡೆಗಳು ಭಾರೀ ಮಳೆಗೆ ಕುಸಿದಿವೆ. ಗೋಡೆ ರಾತ್ರಿ ವೇಳೆ ಕುಸಿದಿದ್ದು, ಮನೆಗಳಲ್ಲಿ ಇದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಕೆ.ವಿ.ಸಣ್ಣಪ್ಪ, ಸದಸ್ಯರಾದ ಜಲಜಾಕ್ಷಿ, ಶಿಲ್ಪರಾಜ್, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆಯೆಷಾ, ಕಾರ್ಯದರ್ಶಿ ಮಾದಪ್ಪ, ಕೂಡಿಗೆ ಗ್ರಾಮ ಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲಿಸಿದರು.ಶನಿವಾರಸಂತೆಗೆ ಧಾರಾಕಾರ ಮಳೆ ಶನಿವಾರಸಂತೆ ಹೋಬಳಿಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಧಾರಾಕಾರ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶೀತ ಗಾಳಿ ರಭಸವಾಗಿ ಬೀಸುತ್ತಿದ್ದು, ಮಳೆ ಬಿಡುವು ನೀಡದೇ ರಭಸವಾಗಿ ಸುರಿಯುತ್ತಿತ್ತು. ಒಟ್ಟು 4 ಇಂಚು ಮಳೆಯಾಗಿದೆ.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಹೊಳೆಯೂ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲಿನ ಗದ್ದೆಗಳೆಲ್ಲಾ ಜಲಾವೃತಗೊಂಡಿವೆ. ಮಳೆ ಪ್ರಮಾಣ ಕಡಿಮೆಯಾಗದ ಹೊರತು ಗದ್ದೆಗಳಲ್ಲಿ ಭತ್ತದ ಅಗೆ ಹಾಕುವಂತಿಲ್ಲ. 2 ದಿನಗಳಿಂದ ಬಿಡದೆ ಸುರಿಯುತ್ತಿರುವ ಹುಚ್ಚು ಮಳೆ ಕಳೆದ 20 ವರ್ಷಗಳ ಹಿಂದಿನ ಮಳೆಯನ್ನು ನೆನಪಿಸುತ್ತಿದೆ ಎನ್ನುತ್ತಾರೆ ಕಾಜೂರಿನ ರೈತ ಚಂದ್ರಶೇಖರ್.

ಕೆಸರುಮಯ ರಸ್ತೆಯಾಗಿರುವ ಕಂಡಂಗಾಲ

ಗೋಣಿಕೊಪ್ಪ ವರದಿ: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಕಂಡಂಗಾಲ ಮಂದಮಾಡ ಕುಟುಂಬ ಸೇರಿದಂತೆ ಹಲವು ಕುಟುಂಬಗಳ ರಸ್ತೆಯು ಕಳೆದೆರಡು ದಶಕದಿಂದ ಕೆಸರುಮಯ ರಸ್ತೆಯಾಗಿಯೇ ಉಳಿದುಕೊಂಡಿದ್ದು, ಪಂಚಾಯಿತಿ ರಸ್ತೆ ಅಭಿವೃದ್ಧಿಗೆ ಸ್ಪಂದಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆಸರುಮಯ ರಸ್ತೆಯಲ್ಲಿ ವಾಹನಗಳು ಓಡಾಡಲು ಆಗುತ್ತಿಲ್ಲ. ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಾಹನಗಳು ಕೂಡ ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕಂಡಂಗಾಲ ಗ್ರಾಮದ ಮಂದಮಾಡ, ಬಲ್ಲಡಿಚಂಡ, ಚೆರಿಯಂಡ, ಆಟ್ರಂಗಡ, ಕೊಟ್ರಂಡ ಕುಟುಂಬಗಳು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಸುಮಾರು 100 ಕುಟುಂಬ ದಿನಂಪ್ರತಿ ರಸ್ತೆಯಲ್ಲಿ ಕೆಸರು ಮೆತ್ತಿಕೊಂಡು ನಡೆಯುತ್ತಾರೆ. ಕಲ್ಲು ಹಾಕಿ ಕೊಡಿ ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಎಷ್ಟೇ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ ಎಂಬವದು ಅಲ್ಲಿನವರ ಆರೋಪವಾಗಿದೆ.

ಸುಮಾರು 3.5 ಕಿ. ಮೀ. ದೂರವಿರುವ ಈ ರಸ್ತೆಯಲ್ಲಿ ಸ್ವಲ್ಪ ಭಾಗದಷ್ಟು ಮಾತ್ರ ವಾಹನ ಓಡಿಸಲು ಯೋಗ್ಯವಾಗಿದೆ. ಆದರೆ, ಮುಂದೆ ಹೋದಂತೆಲ್ಲಾ ರಸ್ತೆಯಲ್ಲಿ ಕಲ್ಲು ಇಲ್ಲದ ಕಾರಣ ಕೆಸರಿನಿಂದ ಕೂಡಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಹರಿಯದೆ ರಸ್ತೆಯೇ ಕೆರೆಯಂತಾಗು ತ್ತದೆ. ಕೆಸರಿನಿಂದಾಗಿ ವಾಹನಗಳು ಚಲಿಸಲಾಗದೆ ನಿಂತಲ್ಲೇ ನಿಲ್ಲುತ್ತದೆ. ನಡೆಯುವವರು ರಸ್ತೆ ಬದಿಯಲ್ಲಿ ಮೆಟ್ಟಿಲಿನಂತೆ ದೊಡ್ಡ, ದೊಡ್ಡ ಕಲ್ಲುಗಳನ್ನು ಇಟ್ಟು ರಸ್ತೆ ದಾಟುತ್ತಾರೆ.

ಈ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಾಹನಗಳು ಬರುತ್ತಿಲ್ಲ. ಇದರಿಂದಾಗಿ ಮುಖ್ಯರಸ್ತೆವರೆಗೆ ನಡೆದುಕೊಂಡೆ ಕೆಸರಿನಲ್ಲಿ ನಡೆಯಬೇಕು. ರಸ್ತೆಯಲ್ಲಿ ಶೂ ತೊಳೆದುಕೊಂಡು ಮತ್ತೊಂದು ವಾಹನ ಹತ್ತಬೇಕು. ಇದು ದಿನನಿತ್ಯ ಅನುಭವಿಸುವ ಸಮಸ್ಯೆ. ಕಾಯಿಲೆ ಬಂದವರನ್ನು ಹೊತ್ತುಕೊಂಡು ಹೋಗಲು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯ ಆರಂಭದಲ್ಲಿ ಡಾಂಬರೀಕರಣವಾಗಿದೆ. ಆದರೆ ಅದೂ ಕೂಡ ಗುಂಡಿ ಬಿದ್ದು ವಾಹನ ದಲ್ಲಿ ತೆರಳಲು ಅಯೋಗ್ಯವಾಗಿದೆ. ಉಳಿದ ರಸ್ತೆಯು 25 ವರ್ಷಗಳ ಹಿಂದಷ್ಟೆ ಈ ರಸ್ತೆಗೆ ಕಲ್ಲು ಹಾಕಲಾಗಿತ್ತು. ನಂತರದ ವರ್ಷಗಳಲ್ಲಿ ಕಲ್ಲು ಕೊಚ್ಚಿಕೊಂಡು ಹೋಗಿದೆ. ಮಣ್ಣಿನ ರಸ್ತೆಯಲ್ಲಿ ತೊಂದರೆಯಾಗುತ್ತಿದೆ.

ಅದೇ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಬಲ್ಲಡಿಚಂಡ ಜಮುನಾ ಕಾವೇರಪ್ಪ ಇತ್ತೀಚೆಗೆ ರಸ್ತೆ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಇವರ ಒತ್ತಾಯದಿಂದ ಅಭಿವೃದ್ಧಿಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಪಂಚಾಯಿತಿಯಿಂದ 5 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದಾರೆ. ಈ ಹಣದಿಂದ ನಮಗೆ ಸಮಸ್ಯೆ ಪರಿಹಾರ ಕಾಣುವದಿಲ್ಲ. ಹೆಚ್ಚಿನ ಅನುದಾನ ದಿಂದ ಉತ್ತಮ ರಸ್ತೆ ಕಲ್ಪಿಸಿಕೊಡ ಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಜಲದಿಗ್ಬಂಧನದಲ್ಲಿ ನಾಲಡಿ ಗ್ರಾಮ...!ನಾಪೆÇೀಕ್ಲು: ದೇಶ ಪ್ರಗತಿಯತ್ತ ಸಾಗುತ್ತಿದ್ದರೂ, ನಾಗರೀಕತೆ ಬೆಳೆಯುತ್ತಿದ್ದರೂ, ಗ್ರಾಮೀಣ ಜನರ ಬವಣೆ, ಕಷ್ಟ, ಕಾರ್ಪಣ್ಯಗಳು ಕೊನೆಯಾಗಿಲ್ಲ. ಇದಕ್ಕೆ ಸಾಕ್ಷಿ ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಲಡಿ ಗ್ರಾಮ.

ಈ ಗ್ರಾಮವು ಕಕ್ಕಬ್ಬೆ ಪಟ್ಟಣದಿಂದ 5 ಕಿ.ಮೀ. ಅಂತರದಲ್ಲಿದೆ. ಇಲ್ಲಿ ಸಮತಟ್ಟು ಪ್ರದೇಶವೆಂಬದೇ ಇಲ್ಲ. ಎಲ್ಲವೂ ಬೆಟ್ಟ ಗುಡ್ಡಗಳೇ. ಬಹುತೇಕ ಮನೆಗಳಿಗೆ ಅಲ್ಲಿಂದಲೂ 5 ರಿಂದ 6 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಇದು ಇವರ ದಿನ ನಿತ್ಯದ ಗೋಳಾದರೆ, ಮಳೆಗಾಲದಲ್ಲಿ ಇವರು ಇನ್ನಷ್ಟು ಸಂಕಟ ಎದುರಿಸಬೇಕಾಗುತ್ತದೆ.

ನಾಲಡಿ ಗ್ರಾಮದ ಪಾಡಿ ತೋರಕಂಡಿಯಲ್ಲಿ ಹರಿಯುವ ಅಂಬಲ ಪೆÇಳೆಯಲ್ಲಿ ಸಣ್ಣ ಮಳೆಗೂ ಪ್ರವಾಹ ಬಂದು ರಸ್ತೆ ಸಂಚಾರ ಕಡಿತಗೊಳ್ಳುತ್ತದೆ. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗುವ ನಾಲ್ಕು ದಿನಗಳ ಮುಂಚಿತವಾಗಿಯೇ ಇಲ್ಲಿ ಪ್ರವಾಹ ಉಂಟಾಗುತ್ತದೆ. ಎಲ್ಲಾ ನದಿಗಳಲ್ಲಿ ಪ್ರವಾಹ ಕಡಿಮೆಯಾದರೂ, ಇಲ್ಲಿನ ಪರಿಸ್ಥಿತಿಯಲ್ಲಿ ಯಾವದೇ ಬದಲಾವಣೆಯಾಗುವದಿಲ್ಲ. ಕಕ್ಕಬ್ಬೆ ಬಳಿ ಕೂಡ ಕಕ್ಕಬ್ಬೆ ಹೊಳೆ ಪ್ರವಾಹವು ನಾಲಡಿ ರಸ್ತೆಯ ಮೇಲೆ ಹರಿಯುವ ಕಾರಣ ನಾಲಡಿ ಗ್ರಾಮದ ಬಹುತೇಕ ಜನ ಜಲದಿಗ್ಭಂದನಕ್ಕೆ ಒಳಪಟ್ಟಂತಾಗುತ್ತಾರೆ.

ಈ ಸಮಯದಲ್ಲಿ ಇಲ್ಲಿ ವಿದ್ಯುತ್, ದೂರವಾಣಿ ಸಂಪರ್ಕ ಕೂಡ ಕನಸಿನ ಮಾತಾಗಿರುತ್ತದೆ. ಬೆಟ್ಟ ಗುಡ್ಡ ಹತ್ತಿ ಮರದಿಂದ ನಿರ್ಮಿಸಿದ ಪಾಲ ದಾಟಿ ಇವರು ಪಟ್ಟಣ ತಲುಪುವದಕ್ಕೆ ಹರ ಸಾಹಸ ಪಡುತ್ತಾರೆ. ಯಾರಾದರೂ ಅನಾರೋಗ್ಯ ಪೀಡಿತರಾದರೆ ದೇವರೇ ಕಾಪಾಡಬೇಕು ಎನ್ನುತ್ತಾರೆ ಜನ.

ಶಾಲಾ ಕಾಲೇಜು, ವಿದ್ಯಾರ್ಥಿಗಳ ಪಾಡು ಹೇಳತೀರದು. ಇಲ್ಲಿ ಪರಿಶಿಷ್ಟ ಜಾತಿ ಪಂಗಂಡಗಳ ಕಾಲೋನಿ, ಗಿರಿಜನರು ಹೆಚ್ಚಾಗಿ ವಾಸಿಸುತ್ತಾರೆ. ಇಲ್ಲಿನ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಆದರೆ ಸೇತುವೆ ನಿರ್ಮಾಣಕ್ಕೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

ಈ ಎಲ್ಲಾ ಸಮಸ್ಯೆಗಳು ಸಾಲದು ಎಂಬಂತೆ ಇಲ್ಲಿ ಒಂದೊಮ್ಮೆ ನಕ್ಸಲರು ಪ್ರತ್ಯಕ್ಷವಾಗಿ ಗ್ರಾಮದ ಜನತೆಯ ನಿದ್ದೆಗೆಡಿಸಿದ್ದರು. ಅದರೊಂದಿಗೆ ಕಾಡಾನೆ ಹಾವಳಿ ಕೂಡ ಇವರ ಬದುಕಿಗೆ ಮಾರಕವಾಗಿದೆ. ನಮ್ಮ ಕಷ್ಟಗಳ ನಿವಾರಣೆಗೆ ಇಲ್ಲಿ ಸೇತುವೆ ನಿರ್ಮಿಸಬೇಕೆಂಬುದು ಈ ವ್ಯಾಪ್ತಿಯ ಜನರ ಬೇಡಿಕೆಯಾಗಿದೆ. ಅದಕ್ಕಾಗಿ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟವರಿಗೆಲ್ಲಾ ಇವರು ಅರ್ಜಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ನಮಗೆ ನೆಮ್ಮದಿಯ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು ಎನ್ನುವದು ಗ್ರಾಮಸ್ಥರ ಕೋರಿಕೆಯಾಗಿದೆ.ಕುಶಾಲನಗರದಲ್ಲಿ ಆರ್ಭಟ

ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಬುಧವಾರ ಬೆಳಗ್ಗೆಯಿಂದ ಆರಂಭವಾದ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಗದ್ದೆಗಳು ಜಲಾವೃತಗೊಳ್ಳುತ್ತಿರುವ ದೃಶ್ಯ ಕಂಡುಬಂದಿದ್ದು, ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ವೀರಾಜಪೇಟೆ ವಿಭಾಗಕ್ಕೆ ಮಳೆ

ವೀರಾಜಪೇಟೆ ತಾಲೂಕಿನಾದ್ಯಂತ ನಿರಂತರ ಭಾರೀ ಮಳೆಯಾಗುತ್ತಿರುವದರಿಂದ ಬೇತರಿ ಗ್ರಾಮದ ಕಾವೇರಿ ಹೊಳೆ, ಸಿದ್ದಾಪುರದ ಕರಡಿಗೋಡಿನ ಕಾವೇರಿ ಹೊಳೆ, ಬಾಳೆಲೆಯ ಸಮೀಪದ ಲಕ್ಷ್ಮಣ ತೀರ್ಥ, ಹೊಳೆಯ ನೀರಿನ ಪ್ರಮಾಣ ಏರಿಕೆಯನ್ನು ಕಂಡಿದೆ ಎಂದು ತಾಲೂಕು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ವೀರಾಜಪೇಟೆ ವಿಭಾಗಕ್ಕೆ ನಿನ್ನೆಯಿಂದ ಇಂದು ಬೆಳಗಿನ ತನಕ 2.4 ಇಂಚುಗಳಷ್ಟು ಮಳೆ ಸುರಿದಿದೆ.ಶೌಚಾಲಯ ಗುಂಡಿ ಕುಸಿತ ಸುಂಟಿಕೊಪ್ಪ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ತೆಗೆಯಲಾದ ಗುಂಡಿಯಲ್ಲಿ ಭೂಕುಸಿತದಿಂದ ನಷ್ಟ ಉಂಟಾಗಿದೆ.

ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಹೈಟೆಕ್ ಶೌಚಾಲಯ ನಿರ್ಮಾಣಗೊಳಿಸಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಶೌಚಾಲಯದ ಗುಂಡಿಗೆ ನಿರ್ಮಿಸಲಾದ ಕಲ್ಲಿನ ಕಾಮಗಾರಿ ಭಾರೀ ಗಾಳಿ ಮಳೆಗೆ ಭಾಗಶ ಕುಸಿದು ಬಿದ್ದ ಪರಿಣಾಮ ನಷ್ಟ ಉಂಟಾಗಿದೆ.

ಕಾಲೇಜು ಆವರಣದ ಮಧ್ಯಭಾಗದಲ್ಲಿ ಶೌಚಾಲಯದ ಗುಂಡಿಯನ್ನು ಅದಕ್ಕೆ ಸೂಕ್ತ ಬೇಲಿಯನ್ನು ನಿರ್ಮಿಸದೆ ಇರುವದು ಮುಂದಿನ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಪೋಷಕರು ದೂರಿಕೊಂಡಿದ್ದಾರೆ.ಆಟೋ ಮೇಲೆ ಉರುಳಿದ ಮರ: ತಪ್ಪಿದ ಭಾರೀ ದುರಂತ ಸೋಮವಾರಪೇಟೆ: ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆಯಿಂದ ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದ್ದು, ಇಂದು ಸಂಜೆ ಪಟ್ಟಣಕ್ಕೆ ಸಮೀಪದ ನಿರೀಕ್ಷಣಾ ಮಂದಿರದ ಬಳಿ ಮರವೊಂದು ಆಟೋ ಮೇಲೆ ಬಿದ್ದಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.

ಸಂಜೆ 4.30ರ ಸುಮಾರಿಗೆ ಚಂದನಮಕ್ಕಿ ಗ್ರಾಮದ ತಿಮ್ಮಪ್ಪ ಪೂಜಾರಿ ಎಂಬವರು ತನ್ನ ಮನೆ ಕಡೆಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಇಲ್ಲಿನ ನಿರೀಕ್ಷಣಾ ಮಂದಿರದ ಬಳಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಚಲಿಸುತ್ತಿದ್ದ ಆಟೋ ಮುಂಭಾಗಕ್ಕೆ ಮರದ ಕೊಂಬೆ ಬಿದ್ದಿದ್ದು, ಆಟೋದ ಮುಂಭಾಗ ಜಖಂಗೊಂಡಿದ್ದೂ ಅಲ್ಲದೇ ಚಾಲಕ ತಿಮ್ಮಪ್ಪ ಪೂಜಾರಿ ಅವರ ತಲೆ, ಮುಖ, ಮೂಗಿನ ಭಾಗಕ್ಕೆ ತೀವ್ರ ಗಾಯವಾಗಿದೆ.

ತಕ್ಷಣ ಆಟೋ ಚಾಲಕನನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ನಂತರ ತೆರವುಗೊಳಿಸಲಾಗಿದೆ.

ಬರೆಕುಸಿತ-ಸಂಚಾರ ಸ್ಥಗಿತ: ತಾಲೂಕಿನ ಹರಗ-ಕಿರಗಂದೂರು ರಸ್ತೆಯಲ್ಲಿ ಬರೆಕುಸಿತ ಉಂಟಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ಹರಗ-ಕಿರಗಂದೂರು ಮುಖ್ಯರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದು, ರಸ್ತೆಯ ಮೇಲೆ ಮಣ್ಣು ನಿಂತಿರುವದರಿಂದ ಸಂಚಾರ ಸ್ಥಗಿತಗೊಂಡಿದೆ.

ರಸ್ತೆ ಕುಸಿಯುವ ಆತಂಕ: ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಸಮೀಪ ರಾಜ್ಯ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಈ ರಸ್ತೆಯಲ್ಲಿ ಭಾರೀ ಸರಕು ಸಾಗಾಣೆಯ ವಾಹನಗಳು ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಅಭಿಪ್ರಾಯಿಸಿ ದ್ದಾರೆ. ಈ ಬಗ್ಗೆ ವಾಹನ ಚಾಲಕರ ಗಮನ ಸೆಳೆಯುವ ದೃಷ್ಟಿಯಿಂದ ಚೀಲಗಳನ್ನು ಅಡ್ಡಲಾಗಿ ಇಡಲಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಪರ್ಕ ಕಡಿತಗೊಂಡಿತ್ತು.

ವಿದ್ಯುತ್‍ಕಂಬ ಉರುಳಿ ಮನೆಗೆ ಹಾನಿ: ಸಂಜೆ ವೇಳೆಗೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಕಲ್ಕಂದೂರು ಗ್ರಾಮದಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ನೆರಕ್ಕುರುಳಿವೆ. ಪರಿಣಾಮ ಕಲ್ಕಂದೂರು ಗ್ರಾಮದ ನಾಗರಾಜು ಅವರ ಮನೆಗೆ ಹಾನಿಯಾಗಿದ್ದು, ಹೆಂಚುಗಳು ಒಡೆದಿವೆ. ಇದೇ ಸಮಯಕ್ಕೆ ಮದರಸಾಕ್ಕೆ ಮಕ್ಕಳು ತೆರಳುತ್ತಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರಪೇಟೆ, ಮಡಿಕೇರಿ ರಸ್ತೆಯ ಮಾದಾಪುರ ಸಮೀಪ ರಸ್ತೆಗಡ್ಡಲಾಗಿ ಭಾರೀ ಗಾತ್ರದ ಮರ ಬಿದ್ದಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ರಸ್ತೆಯಲ್ಲಿ ಸಿಲುಕಿಗೊಂಡ ಪ್ರಯಾಣಿಕರು ಸ್ಥಳದಲ್ಲೇ ಹಣವನ್ನು ಸಂಗ್ರಹಿಸಿ, ಸ್ಥಳೀಯ ಕಾರ್ಮಿಕರಿಗೆ ಕೊಟ್ಟು ಮರವನ್ನು ತೆರವುಗೊಳಿಸಿ, ರಸ್ತೆ ಸಂಚಾರ ಸುಗಮಗೊಳಿಸಿದರು.

ಸೋಮವಾರಪೇಟೆ, ಶನಿವಾರಸಂತೆ ರಾಜ್ಯಹೆದ್ದಾರಿಯ ಹೊನವಳ್ಳಿ ಸಮೀಪ ರಸ್ತೆಗಡ್ಡಲಾಗಿ ಮರ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸಮೀಪದ ಬಳಗುಂದ ಗ್ರಾಮದ ಪವಿತ್ರ ಕುಶಾಲಪ್ಪ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಕುಟುಂಬದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸವನಹಳ್ಳಿ ಗ್ರಾಮದ ಮುಗೇಶ್ವರಿ, ಕೂಡುಮಂಗಳೂರು ಗ್ರಾಮದ ತಿಮ್ಮ, ಜಾನಕಿ, ಶನಿವಾರಸಂತೆ ಸಮೀಪದ ದೊಡ್ಡಕಣಗಾಲು ಗ್ರಾಮದ ಕೆ.ಕೆ.ಮಲ್ಲೇಶ್ ಎಂಬವರುಗಳ ಮನೆಯ ಗೋಡೆ ಕುಸಿದು ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿಯಲ್ಲಿ ವರದಿಯಾಗಿದೆ. ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಉಳಿದಂತೆ ತಾಲೂಕಿನಾದ್ಯಂತ ಪುನರ್ವಸು ಮಳೆಯ ಅಬ್ಬರ ಜೋರಾಗಿದೆ. ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು, ಜನಜೀವನವೂ ಅಸ್ತವ್ಯಸ್ಥಗೊಂಡಿದೆ. ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಮನೆಯಿಂದ ಹೊರಬರಲೂ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾವೇರಿ ಕೂಡಿಗೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾರಂಗಿ ಜಲಾಶಯ ಭರ್ತಿಯಾಗಿ, ಅಣೆಕಟ್ಟೆಯಿಂದ ನದಿಗೆ 26 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರ ಜೊತೆಯಲ್ಲಿ ಕಾವೇರಿ ನದಿಯಲ್ಲಿ ಹೆಚ್ಚು ನೀರು ಹರಿಯುತ್ತಿದ್ದು, ಹಾರಂಗಿ-ಕಾವೇರಿ ನದಿಗಳು ಕೂಡಿಗೆಯಲ್ಲಿ ಸಂಗಮವಾಗಿ ಮುಂದೆ ಹರಿಯುತ್ತವೆ. ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಸಂಗಮ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ರಾಮಲಿಂಗೇಶ್ವರ ದೇವಾಲಯದ 32 ಮೆಟ್ಟಿಲುಗಳು ನೀರಿನಿಂದ ಆವೃತ್ತವಾ ಗಿದ್ದು, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೈಸೂರು ಕೊಡಗು ಜಿಲ್ಲೆ ಸಂಪರ್ಕದ ತೂಗುಸೇತುವೆಯ ಸನಿಹಕ್ಕೆ ನದಿಯ ನೀರು ತಲಪಿದೆ.

ಕೂಡಿಗೆಯಿಂದ ಹೆಬ್ಬಾಲೆವರೆಗೆ ಇರುವ ತಗ್ಗು ಪ್ರದೇಶಗಳಿಗೆ ಕಾವೇರಿ ನದಿಯ ನೀರು ನುಗ್ಗಿ 10ಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ, ಜೋಳದ ಬೆಳೆಗಳು ಹಾನಿಯಾಗಿವೆ.

ಇನ್ನೊಂದೆಡೆ ಹಾರಂಗಿ ಅಣೆಕಟ್ಟೆಯಿಂದ ನೀರನ್ನು ನದಿಗೆ ಬಿಟ್ಟ ಪರಿಣಾಮ ಹುದುಗೂರು ಸಮೀಪದ ಅರಣ್ಯ ಸಸ್ಯಕ್ಷೇತ್ರಕ್ಕೆ ಹಾಗೂ ಶ್ರೀ ಉಮಾಮಹೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದ ಸೇತುವೆಯು ನೀರಿನಿಂದ ಮುಚ್ಚಲ್ಪಟ್ಟಿದೆ.

ಸೇತುವೆ ಮೇಲೆ ನೀರು: ಭಾರೀ ಮಳೆ ಬಿದ್ದ ಪರಿಣಾಮ ಹಳೆಗೋಟೆ ಹೆಬ್ಬಾಲೆ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಹಳೆಗೋಟೆ ಸೇತುವೆಯು ನೀರಿನಿಂದ ತುಂಬಿಕೊಂಡಿದೆ. ಇದರಿಂದ ರಸ್ತೆಯಲ್ಲಿ ತೆರಳಲು ಸಾರ್ವಜನಿಕರಿಗೆ ಅನಾನುಕೂಲವಾಗಿದೆ.