ಗೋಣಿಕೊಪ್ಪ ವರದಿ, ಜು. 10: ಕಾರ್ಯಕರ್ತರನ್ನು ಕಡೆಗಣಿಸಿ ವೈಯಕ್ತಿಕ ಬೆಳವಣಿಗೆಯಲ್ಲಿ ತೊಡಗಿ ಕೊಂಡಿರುವ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಗೋಣಿಕೊಪ್ಪ ದುರ್ಗಾಬೋಜಿ ಸಿಲ್ವರ್ ಸ್ಪೂನ್ ಸಭಾಂಗಣದಲ್ಲಿ ಜಾತ್ಯತೀತ ಜನತಾ ದಳ ವೀರಾಜಪೇಟೆ ತಾಲೂಕು ವಿಧಾನ ಸಭಾ ಕ್ಷೇತ್ರದಿಂದ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಒತ್ತಾಯಿಸಲಾಯಿತು.

ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಕಾರ್ಯಕರ್ತರನ್ನು ಕಡೆಗಣಿಸಿ ವೈಯಕ್ತಿಕ ಬೆಳವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿರುವ ಪಕ್ಷದ ಪ್ರಮುಖರುಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಂಡರು.

ಸಭೆಯಲ್ಲಿ ಮುಖಂಡರುಗಳಾದ ಭರತ್, ಲೋಹಿತ್‍ಗೌಡ, ಗೋಪಾಲ್, ಸಣ್ಣುವಂಡ ಚಂಗಪ್ಪ, ದಯಾ ಚಂಗಪ್ಪ, ಎಂ.ಟಿ. ಕಾರ್ಯಪ್ಪ, ಕೆ.ಆರ್. ಸುರೇಶ್ ಮಾತನಾಡಿ, ಬದಲಾವಣೆಗೆ ಒತ್ತಾಯಿಸಿದರು. ಕಾಡು ಪ್ರಾಣಿಗಳಿಗೆ ಬಲಿಯಾದ ಜಾನುವಾರುಗಳ ಮಾಲೀಕರಿಗೆ ಪಕ್ಷದ ಹಣವನ್ನು ವೈಯಕ್ತಿಕವಾಗಿ ಪರಿಹಾರ ನೀಡುತ್ತಿದ್ದಾರೆ. ಯಾವ ಕಾರ್ಯಕರ್ತರನ್ನು ಕರೆದುಕೊಳ್ಳದೆ ವೈಯಕ್ತಿಕವಾಗಿ ಬೆಳೆಯಲು ಉತ್ಸುಕತೆ ತೋರಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಹಿರಿಯ ಮುಖಂಡ ಕಾರ್ಮಾಡು ಸುಬ್ಬಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ಮತೀನ್ ರಾಜೀನಾಮೆ ನೀಡಬೇಕು. ತಪ್ಪಿದಲ್ಲಿ ರಾಜ್ಯ ನಾಯಕರುಗಳಿಗೆ ಈ ಬಗ್ಗೆ ಒತ್ತಾಯಿಸಲಾಗುವದು. ನಿರಂತರವಾಗಿ ಹೋರಾಟ ನಡೆಸುವದು ಹಾಗೂ ಶೀಘ್ರದಲ್ಲಿ ಜಿಲ್ಲಾಮಟ್ಟದ ಸಭೆ ಕರೆದು ಪಕ್ಷ ಸಂಘಟನೆಗೆ ಒತ್ತು ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಕಾರ್ಯಕರ್ತರುಗಳನ್ನು ಕಡೆಗಣಿಸಿ ವೈಯಕ್ತಿಕವಾಗಿ ಬೆಳೆವಣಿಗೆ ಕಾಣಲು ಮುಂದಾಗಿದ್ದಾರೆ. ಕಾರ್ಯಕರ್ತರನ್ನು ಒಲವಿಗೆ ತೆಗೆದುಕೊಳ್ಳದೆ, 2 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕಾರಣ ಕರ್ತರಾಗಿದ್ದಾರೆ ಎಂಬ ಆರೋಪ ವ್ಯಕ್ತವಾಯಿತು. ಮಡಿಕೇರಿ ಕ್ಷೇತ್ರದಲ್ಲಿ ಜೀವಿಜಯ ಸೋಲಿಗೆ ಜಿಲ್ಲಾಧ್ಯಕ್ಷರೇ ನೇರ ಹೊಣೆ. ಇದನ್ನು ಅರಿತು ಚುನಾವಣಾ ಫಲಿತಾಂಶ ಸಂದರ್ಭವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಇದ್ದರೂ ಕೂಡ ಕೊಡಗಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿ ಅನುದಾನ ತರುವ ಕಾರ್ಯಕ್ಕೆ ಇವರು ಮುಂದಾಗುತ್ತಿಲ್ಲ. ಕಾಡು ಪ್ರಾಣಿಗಳಿಂದ ಸಾವನ್ನಪ್ಪುವ ಜಾನುವಾರುಗಳ ಮಾಲೀಕರ ಮನೆಗೆ ತೆರಳಿ ಕೇವಲ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಯಿತು.

ಇತ್ತಿಚಿಗೆ ನಡೆದ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಸಮಿತಿ ರಚಿಸದೆ, ಪಕ್ಷದಿಂದ ಬಂದ ಹಣವನ್ನು ಬೂತ್ ಮಟ್ಟದಲ್ಲಿ ಹಂಚದ ಕಾರಣ ಮತಗಳು ಕಡಿಮೆಯಾಗುವಂತಾಗಿದೆ ಎಂದು ಪ್ರಮುಖರು ಆರೋಪಿಸಿದರು.

ಜಿಲ್ಲಾಧ್ಯಕ್ಷ ಕಾರ್ಯಕರ್ತರ ಬಳಿ ಹೋಗದೆ, ಹುಲಿ, ಹಸುಗಳನ್ನು ಹುಡುಕಿಕೊಂಡು ಸಾಗಿದ ಪರಿಣಾಮ ಸೋಲನುಭವಿಸುವಂತಾಯಿತು; ಮುಂದಿನ ವಾರ ಮುಖ್ಯಮಂತ್ರಿ ಕುಮಾರಸ್ವಾಮಿ ತಲಕಾವೇರಿಗೆ ಬರುವ ಸಂಧರ್ಭ ಬೇಟಿ ಮಾಡಿ ಬದಲಾವಣೆಗೆ ಒತ್ತಾಯಿಸಬೇಕು. ಪಕ್ಷದಿಂದ ದೂರ ಸರಿದಿರುವ ಕಾರ್ಯಕರ್ತರನ್ನು ಮತ್ತೆ ಸೇರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಕಾರ್ಮಾಡು ಸುಬ್ಬಣ್ಣ ಹೇಳಿದರು.

ಕಾರ್ಯಕರ್ತರೊಂದಿಗೆ ಹೆಚ್ಚಾಗಿ ಬೆರೆಯುತ್ತಾರೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಕಾರ್ಮಾಡು ಸುಬ್ಬಣ್ಣ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡುವಂತೆ ರಾಜ್ಯ ಮುಖಂಡರುಗಳಿಗೆ ಶಿಪಾರಸ್ಸು ಮಾಡಲು ನಿರ್ಧರಿಸಲಾಯಿತು. ಮುಂದಿನ 5 ವರ್ಷಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿರುತ್ತಾರೆ. ಇಲ್ಲಿನ ಸಮಸ್ಯೆಯನ್ನು ಅವರಿಗೆ ಮನದಟ್ಟು ಮಾಡಿ ಹೆಚ್ಚಿನ ಅನುದಾನ ಪಡೆಯಬೇಕು. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಹೆಚ್ಚಿನ ಶಾಸಕರು ಜೆಡಿಎಸ್ ಪಕ್ಷದವರೇ ಇರುವದರಿಂದ ಕೊಡಗು-ಮೈಸೂರು ಸ್ಥಾನವನ್ನು ಗೆದ್ದುಕೊಳ್ಳಲು ಇದು ಪೂರಕವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಯಿತು.

ಗೋಪಾಲ್ ಅವರು ಮಾತನಾಡಿ, ಇಂತ ನಾಯಕರುಗಳಿಂದ ಪಕ್ಷ ಬೆ¼ವಣಿಗೆಯಾಗುವದಿಲ್ಲ, ಬದಲಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.

ಕುಟ್ಟ, ಬಾಡಗ, ಶ್ರೀಮಂಗಲ, ನಾಲ್ಕೇರಿ, ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಬಿ. ಶೆಟ್ಟಿಗೇರಿ ಭಾಗದ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು. ರಾಜೀನಾಮೆ ನೀಡದಿದ್ದರೆ, ನಿರಂತರ ಹೋರಾಟ ಮಾಡುವದು, ರಾಜ್ಯ ಮುಖಂಡರುಗಳ ಗಮನ ಸೆಳೆಯುವ ನಿರ್ಣಯವನ್ನು ತೆಗೆದು ಕೊಳ್ಳಲಾಯಿತು.

ಈ ಸಂದರ್ಭ ಪ್ರಮುಖರುಗಳಾದ ಮನೆಯಪಂಡ ಬೆಳ್ಯಪ್ಪ, ಅಜೀಜ್, ಮನ್ಸೂರ್ ಆಲಿ, ಯೋಗೇಶ್ ಉಪಸ್ಥಿತರಿದ್ದರು.

ವರದಿ - ಸುದ್ದಿಪುತ್ರ