ಸಿದ್ದಾಪುರ, ಜು. 9: ತೋಟಕ್ಕೆ ತೆರಳಿದ್ದ ವ್ಯಕಿಯೋರ್ವರ ಮೇಲೆ ಕಾಡಾನೆಯೊಂದು ಧಾಳಿ ನಡೆಸಿ ಗಾಯಗೊಳಿಸಿದ ಪ್ರಕರಣ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ನೆಲ್ಯಹುದಿಕೇರಿಯ ಬೆಟ್ಟದಕಾಡು ನಿವಾಸಿ ಹಾಗೂ ನೆಲ್ಯಹುದಿಕೇರಿ ಮಸೀದಿ ಸಮಿತಿಯ ಕಾರ್ಯದರ್ಶಿ ಮಹಮ್ಮದ್ ಆಲಿ ತಮ್ಮ ಬೆಟ್ಟದಕಾಡುವಿನ ತೋಟಕ್ಕೆ ಭಾನುವಾರ ಸಂಜೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಾಡಾನೆಯೊಂದು ಏಕಾಏಕಿ ಧಾಳಿ ನಡೆಸಿದ್ದು, ಬಳಿಕ ಸೊಂಡಿಲಿನಿಂದ ಸ್ಪರ್ಶಿಸಿದೆ ಎನ್ನಲಾಗಿದೆ. ಈ ಸಂದರ್ಭ ಕಾಡಾನೆ ಅಟ್ಟಿಸಿದ್ದು, ಭಯದಿಂದ ಓಡಿದ್ದಾರೆ. ಕಾಡಾನೆ ಧಾಳಿಯಿಂದ ಮಹಮ್ಮದ್ ಆಲಿರವರ ತಲೆ, ಕೈ ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಲಾಗಿದೆ.

ನೆಲ್ಯಹುದಿಕೇರಿಯ ಬೆಟ್ಟದಕಾಡು, ನಲ್ವತ್ತೇಕರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ತಿಂಗಳುಗಳಿಂದ ಕಾಡಾನೆ ಹಾವಳಿ ಮಿತಿಮೀರಿದ್ದು, ಹಾಡಹಗಲೇ ಕಾಡಾನೆಗಳು ಪ್ರತ್ಯಕ್ಷವಾಗುತ್ತಿವೆ. ಕಾಫಿ ತೋಟಗಳಿಗೆ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ನೆಲ್ಯಹುದಿಕೇರಿ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಎ.ಎನ್ ವಾಸು