ಸೋಮವಾರಪೇಟೆ, ಜು. 8: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಪ್ರತಿ ಕುಟುಂಬಕ್ಕೆ ಉದ್ಯೋಗ ಒದಗಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ನಿರ್ದೇಶನ ನೀಡಿದರು.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ವೈಯುಕ್ತಿಕ ಮತ್ತು ಸಮುದಾಯ ಕೆಲಸಗÀಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕೆಂದು ತಿಳಿಸಿದರು.
ಗ್ರಾಮೀಣ ಮಟ್ಟದಲ್ಲಿ ಕಂದಾಯ ಇಲಾಖೆ ಮತ್ತು ಇತರ ಪ್ರಮುಖ ಇಲಾಖೆಗಳೊಂದಿಗೆ ಸಂಪರ್ಕ ಇರಿಸಿಕೊಂಡು ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೇರವಾಗಿ ತಹಶೀಲ್ದಾರ್‍ರೊಂದಿಗೆ ಚರ್ಚಿಸಬೇಕು. ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸರಕಾರಿ ಜಾಗಗಳನ್ನು ಗುರುತಿಸಬೇಕು. ನಿವೇಶನ ರಹಿತರಿಗೆ ನಿವೇಶನ ಕೊಡಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿವಾರು ಪ್ರಗತಿಪರಿಶೀಲನೆ ನಡೆಸಿದ ಕಾರ್ಯನಿರ್ವಹಣಾಧಿಕಾರಿಗಳು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕಡಿಮೆ ಪ್ರಗತಿ ಸಾಧಿಸಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಸಹಾಯಕ ನಿರ್ದೇಶಕರು ಆಗಿಂದಾಗೆ ಖುದ್ದು ಭೇಟಿ ನೀಡಿ ಯಾವ ಕಾರಣಕ್ಕೆ ಪ್ರಗತಿ ಕುಂಠಿತಗೊಂಡಿದೆ ಎಂಬ ಬಗ್ಗೆ ತಿಳಿದುಕೊಂಡು ಪ್ರಗತಿಯನ್ನು ಉತ್ತಮಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಗ್ರಾಮ ವಿಕಾಸ ಯೋಜನೆಯಡಿ ಕಾಮಗಾರಿಗಳು ಪೂರ್ಣಗೊಳ್ಳದ ಬಗ್ಗೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಯರಾಮ್‍ರವರನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಸ ವಿಲೇವಾರಿ, ಆಧಾರ್ ಜೋಡಣೆ, ಜಿಯೋ ಟ್ಯಾಗಿಂಗ್, ವಸತಿ ಯೋಜನೆ ಹಾಗೂ ಇನ್ನಿತರ ಪ್ರಮುಖ ಯೋಜನೆಗಳ ಪ್ರಗತಿ ವಿವರಗಳನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ತಹಶೀಲ್ದಾರ್ ಮಹೇಶ್, ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಉಪಸ್ಥಿತರಿದ್ದರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.