ಪೊನ್ನಂಪೇಟೆ, ಜು. 8 : ಪೆರುಂಬಾಡಿ- ಮಾಕುಟ್ಟ ರಸ್ತೆಯಲ್ಲಿ ಲಘು ವಾಹನಗಳ ಸಂಚಾರ ಪುನರಾರಂಭಗೊಂಡಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಭಾಗಗಳನ್ನು ತಾತ್ಕಾಲಿಕವಾಗಿ ದುರಸ್ಥಿಪಡಿಸಿ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದೆ. ಇದರಿಂದ ನಿತ್ಯ ಸಂಚರಿಸುವ ನೂರಾರು ವಾಹನಗಳಿಗೆ ಅನುಕೂಲವಾದರೂ ವಾಹನ ಚಾಲಕರಲ್ಲಿ ಆತಂಕ ಮಾತ್ರ ದೂರವಾಗಿಲ್ಲ.
ರಸ್ತೆ ಸಂಚಾರ ಪುನರಾರಂಭಗೊಂಡ ದಿನದಿಂದಲೇ ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತೆ ಜನರಲ್ಲಿ ಭೀತಿ ಸೃಷ್ಟಿಸಲು ಕಾರಣವಾಗಿದೆ. ಪೆರುಂಬಾಡಿಯಿಂದ ಮಾಕುಟ್ಟ ಮಾರ್ಗದ ಕೂಟುಹೊಳೆಯವರೆಗಿನ 24 ಕಿ. ಮೀ. ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ಅಪಾಯವನ್ನು ಕಾಯ್ದಿರಿಸಿಕೊಂಡಿರುವ ನೂರಾರು ಮರಗಳು ಒಂದೆಡೆಯಾದರೆ, ಮತ್ತೊಂದೆಡೆ ರಸ್ತೆಯ ಇಕ್ಕೆಲ್ಲಾಗಳಲ್ಲಿ ಭಾರಿ ಎತ್ತರದಲ್ಲಿರುವ ಬರೆ ಕುಸಿದು ರಸ್ತೆಗೆ ಬೀಳುವ ಅಪಾಯದಿಂದಾಗಿ ಈ ರಸ್ತೆಯಲ್ಲಿ ವಾಹನದಲ್ಲಿ ತೆರಳುವವರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವೀರಾಜಪೇಟೆ- ಮಾಕುಟ್ಟ- ಕೂಟುಹೊಳೆ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳಲ್ಲಿ ಸಾವಿರಾರು ಜನರು ಸಂಚರಿಸುತ್ತಿದ್ದರು. ಅಲ್ಲದೆ ಸಾಮಾನ್ಯ ಜನತೆಯ ಅನುಕೂಲಕ್ಕಾಗಿ ಉಭಯ ರಾಜ್ಯಗಳ ಹಲವು ಬಸ್ಸುಗಳು ಸೇವೆ ಕಲ್ಪಿಸುತ್ತಿತು.್ತ ಕಳೆದ ತಿಂಗಳ 13 ರಿಂದ ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂದಿಸಿದ್ದರಿಂದ ಪೆರುಂಬಾಡಿ- ಮಾಕುಟ್ಟ ರಸ್ತೆ ಬಂದ್ ಮಾಡಲಾಗಿತ್ತು. ಈ ಕಾರಣದಿಂದಾಗಿ ಕೇರಳದ ಕಣ್ಣಾನೂರು, ತಲಚೇರಿ, ಇರಿಟ್ಟಿ, ಪಯ್ಯನೂರು ಪ್ರದೇಶಗಳಿಗೆ ಮಾಕುಟ್ಟ- ಕೂಟುಹೊಳೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಗೋಣಿಕೊಪ್ಪಲು- ಪೊನ್ನಂಪೇಟೆ- ಶ್ರೀಮಂಗಲ- ಕುಟ್ಟ- ಮಾನಂದವಾಡಿ ಮಾರ್ಗವಾಗಿ ತೆರಳುವದು ಅನಿವಾರ್ಯವಾಗಿತ್ತು. ಬದಲಿ ಮಾರ್ಗದಲ್ಲಿ ವಾಹನ ಸಂಚರಿಸುವದರಿಂದ 60 ರಿಂದ 70 ಕಿ.ಮೀ. ದೂರ ಹೆಚ್ಚುವರಿಯಾಗಿತ್ತು. ಅಲ್ಲದೆ 3ರಿಂದ 4 ತಾಸುಗಳ ಸಮಯವೂ ಅನಗತ್ಯವಾಗಿ ವ್ಯರ್ಥವಾಗುತ್ತಿತ್ತು. ಇದು ಉಭಯ ರಾಜ್ಯಗಳ ಜನತೆಗೆ ತೀವ್ರ ಸಮಸ್ಯೆಯಾಗಿತ್ತು. ಅಲ್ಲದೆ ಇದು ಎರಡೂ ರಾಜ್ಯಗಳ ಆರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರಿತ್ತು. ಈಗಲೂ ದಿನನಿತ್ಯ ಓಡಾಡುವ ಸಾಮಾನ್ಯರಿಗೆ ಬಸ್ಸ್ ಸಂಚಾರ ಈ ಮಾರ್ಗದಲ್ಲಿ ಸ್ಥಗಿತಗೊಂಡ ಕಾರಣ ಹೇಳ ತೀರದ ಅನಾನುಕೂಲವಾಗಿ ಪರಿಣಮಿಸಿದೆ.
ಇದೀಗ ಶನಿವಾರದಿಂದ ಪೆರುಂಬಾಡಿ- ಮಾಕುಟ್ಟ ರಸ್ತೆಯಲ್ಲಿ ಲಘು ವಾಹನಗಳ ಸಂಚಾರ ಪುನರಾರಂಭಗೊಂಡಿದ್ದು, ಇದರಿಂದ ವಾಹನ ಚಾಲಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಸಾಮಾನ್ಯ ಜನರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಇಂದಿಗೂ ಉತ್ತರ ಕೇರಳದ ಭಾಗಗಳಿಗೆ ಪ್ರಯಾಣಿಸುವ ಸಾಮಾನ್ಯರು ಕುಟ್ಟ- ಮಾನಂದವಾಡಿ ಮಾರ್ಗದ ಬಸ್ಸುಗಳನ್ನೆ ಆಶ್ರಯಿಸಬೇಕಾಗಿದೆ.
ಪುನರಾಂಭಗೊಂಡ ಪೆರುಂಬಾಡಿ- ಮಾಕುಟ್ಟ ರಸ್ತೆಯಲ್ಲಿ 3-4 ಜಾಗದಲ್ಲಿ ಸಂಭವಿಸಿದ ಹಾನಿ ಕಳೆದ ತಿಂಗಳು ಸುರಿದ ಮಹಾಮಳೆಯ ಭೀಕರತೆಯನ್ನು ಸಾರಿ ಹೇಳುವಂತಿತ್ತು. ತೀವ್ರವಾಗಿ ಹಾನಿಯಾಗಿದ್ದ ಜಾಗಗಳಲ್ಲಿ ರಸ್ತೆಯ ಅಡ್ಡಕ್ಕೆ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಿರುವ ಲೋಕೋಪಯೋಗಿ ಇಲಾಖೆ, ಅ ಜಾಗಕ್ಕೆ ಸೀಮಿತಪಟ್ಟಂತೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ಮಾಕುಟ್ಟದ ಪೋಲೀಸ್ ಉಪಠಾಣೆಯ ಸಮೀಪದಲ್ಲಿರುವ ಸೇತುವೆಯ ಕೆಳಭಾಗವನ್ನು ಮರಳಿನ ಮೂಟೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ದುರಸ್ಥಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸೇತುವೆಯ ಕೆಳಗೆ ಇದೀಗ ಮತ್ತೆ ತೊರೆ ನೀರು ರಭಸದಿಂದ ಹರಿಯುತ್ತಿರುವದು ಇಲ್ಲಿನ ಜನರ ನಿದ್ದೆಗೆಡಿಸಿದೆ. ಅಲ್ಲದೆ ಇದೀಗ ವiಳೆಗಾಲದಲ್ಲಿ ಈ ಮಾರ್ಗದ ಕೆಲವೆಡೆ ಕಿರು ಜಲಪಾತಗಳಂತೆ ಹರಿಯುತ್ತಿರುವ ನೀರು ನೇರವಾಗಿ ರಸ್ತೆಗೆ ನುಗ್ಗುತ್ತಿದೆ. ಈ ನೀರನ್ನು ಕೆಲೆವೆಡೆÉ ರಸ್ತೆಯ ಚರಂಡಿಗೆ ತಿರುಗಿಸಿದ್ದರೂ ಪ್ರಯೋಜನ ಕಾಣುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ರಸ್ತೆ ಕಡೆಗೆÀ ವಾಲಿ ನಿಂತಿರುವ ನೂರಾರು ಮರಗಳು ಜನರಲ್ಲಿ ಭೀತಿ ಸೃಷ್ಟಿಸಿದೆ. ಯಾವ ಸಂದರ್ಭದಲ್ಲಿ ಏನು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.
ಅರಣ್ಯ ಇಲಾಖೆ ಕ್ರಮ ವಹಿಸಲಿ : ಪೆರುಂಬಾಡಿ- ಮಾಕುಟ್ಟ ರಸ್ತೆಯಲ್ಲಿ ಈ ರೀತಿಯಾಗಿ ಹಾನಿ ಸಂಭವಿಸಲು ಅರಣ್ಯ ಇಲಾಖೆಯೇ ನೇರ ಕಾರಣ. ಇಲಾಖೆಯ ಜನ ವಿರೋಧಿ ಕಾನೂನು ಸಮಸ್ಯೆ ಉಂಟುಮಾಡಿದೆ. ಅರಣ್ಯ ಇಲಾಖೆ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್ ಅಪಾದಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ರಸ್ತೆಗೆ ವಾಲಿಕೊಂಡಿರುವ ಮರಗಳನ್ನು ಕೂಡಲೆ ತೆರವುಗೊಳಿಸಿ ಅವುಗಳನ್ನು ಡಿಪೋಗಳಿಗೆ ಸಾಗಿಸಿದರೆ ಅರ್ಧ ಸಮಸ್ಯೆ ಮುಗಿಯುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸರವಾದಿಗಳ ಅಣತಿಯಂತೆ ಆದೇಶ ನೀಡುವ ಬದಲು ಒಮ್ಮೆ ಸ್ಥಳಕ್ಕೆ ಬಂದು ಪರಿಶೀಲಿಸಿದರೆ ನೈಜತೆ ತಿಳಿಯುತ್ತದೆ ಎಂದು ಹೇಳಿದರು.
ನೂರು ಮರ ಕಡಿದರೆ ಸಾವಿರ ಗಿಡ ನೆಡಲಿ : ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಯಾವದೇ ಕಾನೂನಿನ ತೊಡಕು ಎದುರಾಗುವದಿಲ್ಲ. ಒಂದು ವೇಳೆ ಕೆಲವು ನಿರ್ಬಂಧಗಳಿದ್ದರೂ ಈ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಪತ್ರ ಬರೆದು ವಿಶೇಷ ಅನುಮತಿ ಪಡೆಯಬಹುದಾಗಿದೆ. ಎಲ್ಲದಕ್ಕೂ ಅಧಿಕಾರಿಗಳಿಗೆ ಇಚ್ಚಾಶಕ್ತಿ ಬೇಕಷ್ಟೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿ ಜನರ ಅನುಕೂಲಕ್ಕಾಗಿ ನೂರು ಮರಗಳನ್ನು ಅನಿವಾರ್ಯವಾಗಿ ಕಡಿದರೆ ಅರಣ್ಯದೊಳಗೆ ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆ ಮುಂದಾಗಲಿ. ಇದೀಗ ಅರಣ್ಯವೆಲ್ಲಾ ಬರಡಾಗುತ್ತಿದ್ದರೂ ಅಲ್ಲಿ ಮರ ಬೆಳೆಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಬದಲಿಗೆ ಜನರ ನಿತ್ಯ ಬದುಕಿಗೆ ಅಡ್ಡ ಬರುವ ಎಲ್ಲಾ ಯೋಜನೆಗಳನ್ನು ಇಲಾಖೆ ಸಮರ್ಪಕವಾಗಿ ಅನುಷ್ಠಾನ ಗೊಳಿಸುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
-ವರದಿ : ರಫೀಕ್ ತೂಚಮಕೇರಿ