ಚೆಟ್ಟಳ್ಳಿ, ಜು. 7: ಕಳೆದ ಒಂದು ವಾರದಿಂದ ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಹವಣಿಸುತ್ತಿರುವ ಹುಲಿಯೊಂದು ಕಾಡಿನ ಪ್ರಾಣಿಯನ್ನು ಬೇಟೆಯಾಡಲು ಆಗದೆ ಅರಣ್ಯದಂಚಿನಲ್ಲಿ ವಾಸಿಸುವ ಗ್ರಾಮಸ್ಥರ ಗೋವುಗಳನ್ನು ಬೇಟೆಯಾಡತೊಡಗಿದೆ.
ಕಳೆದ ಹತ್ತು ದಿನಗಳ ಹಿಂದೆ ಮೀನುಕೊಲ್ಲಿ ರಕ್ಷಿತ ಅರಣ್ಯದ ಪಕ್ಕದಲ್ಲಿರುವ ಪೊನ್ನತ್ಮೊಟ್ಟೆ ನಿವಾಸಿ ರಾಬರ್ಟ್ ಎಂಬವರ ಹಸುವೊಂದನ್ನು ನೀರು ಕುಡಿಯಲು ಹೋದಾಗ ಬಲಿ ತೆಗೆದುಕೊಂಡ ಹುಲಿರಾಯ, ಚಿಕ್ಲಿಹೊಳೆಯ ಸಂಪರ್ಕ ರಸ್ತೆಯಲ್ಲಿ ಮೇಯುತಿದ್ದ ನಾಗರಾಜ್ ಎನ್ನುವರ ಹಸುವೊಂದರ ಮೇಲೆ ತನ್ನ ಹಸಿವು ತೋರಿಸಿದೆ, ಅಲ್ಲಿಂದ ಅದೇ ದಿನ ರಾತ್ರಿ ಅರಣ್ಯ ಸಿಬ್ಬಂದಿಗಳು ಸತ್ತ ಹಸುವಿನ ಆಸುಪಾಸಿನಲ್ಲಿ ಅಳವಡಿಸಿದ ಸಿ.ಸಿ.ಟಿ.ವಿ. ಕ್ಯಾಮರಾ ದಲ್ಲಿ ಹುಲಿ ಇರುವದನ್ನು ಸೆರೆ ಹಿಡಿದಿದ್ದರು. ಅಲ್ಲಿಂದ ಅದು ತನ್ನ ಬೇಟೆಯನ್ನು ಇನ್ನೂರು ಮೀಟರ್ ನಷ್ಟು ದೂರಕ್ಕೆ ಎಳೆದೊಯ್ದು ಅರಣ್ಯ ದೊಳಗೆ ಅಂದರೆ ಕಂಬಿಬಾಣೆ ಮತ್ತು ರಂಗಸಮುದ್ರ ಸಂಪರ್ಕ ರಸ್ತೆಯ ಬದಿಯಲ್ಲಿ ಹಾಕಿರು ವದರಿಂದ ಹುಲಿಯು ರಸ್ತೆ ಬದಿ ಯಲ್ಲಿಯೇ ಅತ್ತಿತ್ತ ಓಡಾಡು ತ್ತಿರುವದು ಜನರು ಗಮನಿಸಿದ್ದಾರೆ.
ಅರಣ್ಯದ ಮಧ್ಯ ಭಾಗದಲ್ಲಿರುವ ಈ ಸಂಪರ್ಕ ರಸ್ತೆಯಲ್ಲಿ ಕಂಬಿಬಾಣೆ ಮತ್ತು ಚಿಕ್ಲಿಹೊಳೆಯ ಶಾಲಾ-ಕಾಲೇಜು ಮಕ್ಕಳು, ವಯಸ್ಸಾದವರು, ಕೂಲಿ ಕಾರ್ಮಿಕರು, ದ್ವಿಚಕ್ರ ವಾಹನ ಸವಾರರು, ಚಿಕ್ಲಿಹೊಳೆಗೆ ತೆರಳುವ ಪ್ರವಾಸಿಗರು ಬಹಳಷ್ಟು ಸಂಖ್ಯೆಯಲ್ಲಿ ಓಡಾಡುವದರಿಂದ, ಡಿ.ಎಫ್.ಓ. ಮತ್ತು ಆರ್.ಎಫ್.ಓ. ಮಾರ್ಗದರ್ಶ ನದಲ್ಲಿ ಮುಂಜಾಗ್ರತಾ ಕ್ರಮವಾಗಿ ಮೀನುಕೊಲ್ಲಿ ವಿಭಾಗದ ಡಿ.ಆರ್.ಎಫ್.ಓ. ದೇವಿಪ್ರಸಾದ್ ಅವರು ಮಾಲ್ದಾರೆಯ ಆರ್.ಆರ್.ಟಿ. ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಅನ್ನು ಜೊತೆಗೂಡಿಸಿಕೊಂಡು ಹಗಲು-ರಾತ್ರಿ ಎನ್ನದೆ ಕಾಡಿನ ಮಧ್ಯೆ ಇರುವ ಸಂಪರ್ಕ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾರೆ.
ಡಿ.ಆರ್.ಎಫ್.ಓ. ದೇವಿ ಪ್ರಸಾದ್ ಅವರ ಪ್ರಕಾರ, ಚಿಕ್ಲಿ ಅಣೆಕಟ್ಟನ್ನು ನೋಡಲು ತೆರಳುವ ಪ್ರವಾಸಿಗರು, ಕಾಡಿನ ಮಧ್ಯೆ ರಸ್ತೆ ಬದಿಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ತಮ್ಮ ಛಾಯಾಚಿತ್ರವನ್ನು ತೆಗೆಯಲು ನಿರತರಾಗಿರುವ ಸಮಯದಲ್ಲಿ ಅಪಾಯ ಸಂಭವಿಸುವ ಕುರಿತು ಎಚ್ಚರಿಸಿದ್ದಾರೆ. ಅರಣ್ಯ ಸಿಬ್ಬಂದಿಗಳು ಕಾಡಿನ ಮದ್ಯೆ ಅನ್ನ, ಆಹಾರ, ನಿದ್ರೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ರ್ಯಾಪಿಡ್ ರೆಸ್ಪಾನ್ಸ್ ಟೀಮ್ನ ರಾಜೇಶ್, ಕುಶಾಲಪ್ಪ, ರಾಜ, ದಿಲೀಪ್, ಶಬರೀಶ್ ಮುಂತಾದವರಿದ್ದರು. ಕಾರ್ಯಾಚರಣೆಯು ಮೇಲಧಿಕಾರಿಗಳ ಆದೇಶದವರೆಗೂ ಮುಂದುವರಿಸಲಾಗುವದೆಂದರು.
- ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ