ಕೂಡಿಗೆ, ಜು. 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಎಲ್ಲಾ ವಲಯದ ಸೇವಾಪ್ರತಿನಿಧಿಗಳ ಮಾಸಿಕ ಸಭೆಯು ಸೀಗೆಹೊಸೂರಿನಲ್ಲಿ ನಡೆಯಿತು.
ಸಭೆಯಲ್ಲಿ ಸೇಲ್ಕೋ ಸೋಲಾರ್ ಸಂಸ್ಥೆಯ ಸುಳ್ಯ ಘಟಕದ ಹಿರಿಯ ಮೇಲ್ವಿಚಾರಕ ರಾಧಕೃಷ್ಣಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೋಂದಿಗೆ ಸೇಲ್ಕೋ ಸಂಸ್ಥೆಯು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಯೋಜನೆಯ ಸಹಕಾರದೊಂದಿಗೆ ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಸೋಲಾರ್ ದೀಪ, ಸೋಲಾರ್ ವಾಟರ್ ಹೀಟರ್ ಹಾಗೂ ಇನ್ನಿತರ ಸೋಲಾರ್ ಪರಿಕರಗಳನ್ನು ಅಳವಡಿಸಲಾಗಿದೆ. ಸೂರ್ಯನ ಶಕ್ತಿಯನ್ನು ಉಪಯೋಗಿಸಿ ಬೆಳಕು, ಗಾಳಿ, ನೀರಿನ ಸುಲಭ ಪೂರೈಕೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ. ಇನ್ನೂ ಹೆಚ್ಚಿನ ಸದಸ್ಯರಿಗೆ ಸೋಲಾರ್ ಅಳವಡಿಕೆಯಿಂದ ಪರಿಸರಕ್ಕೆ ಮನುಕುಲವು ನೀಡಬಹುದಾದ ಕೊಡುಗೆಗಳ ಬಗ್ಗೆ ಮನವೊಲಿಸುವ ಅಗತ್ಯತೆ ಇದೆ ಎಂದರು. ಸಭೆಯಲ್ಲಿ ಸೋಮವಾರಪೇಟೆ ತಾಲೂಕಿನ ಏಳು ವಲಯಗಳಲ್ಲಿ ಸೋಲಾರ್ ದೀಪಗಳ ಅಳವಡಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡ ಕೂಡಿಗೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಹಾಗೂ ತಾಲೂಕಿನ ಸೇವಾಪ್ರತಿನಿಧಿಗಳ ಪೈಕಿ ಪ್ರಥಮ ಸ್ಥಾನ ಕೂಡಿಗೆ ವಲಯದ ಸೀಗೆಹೊಸೂರು ಕಾರ್ಯಕ್ಷೇತ್ರದ ಸುನಂದ ರವರಿಗೆ ಸ್ಮರಣಿಕೆ ಹಾಗೂ ಬಹುಮಾನವನ್ನು ನೀಡಿ ಗೌರವಿಸಿದರು. ಸೋಲಾರ್ ದೀಪಗಳ ಅಳವಡಿಕೆಯಲ್ಲಿ ಕುಶಾಲನಗರ ವಲಯದವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಯೋಗೀಶ್, ಸೇಲ್ಕೋ ಸೋಲಾರ್ ಸಂಸ್ಥೆಯ ಸುಳ್ಯ ಘಟಕದ ಹಿರಿಯ ಮೇಲ್ವಿಚಾರಕ ರಾಧಕೃಷ್ಣಾ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ, ಸೆಲ್ಕೋ ಸೋಲಾರ್‍ನ ಕೊಪ್ಪ ಶಾಖೆಯ ಮೇಲ್ವಿಚಾರಕ ಸದಾಶಿವ, ತಾಲೂಕಿನ ಮೇಲ್ವೀಚಾರಕರು, ಲೆಕ್ಕ ಪರಿಶೋಧಕರು ಕೃಷಿ ಮೇಲ್ವೀಚಾರಕರು ಹಾಗೂ ತಾಲೂಕಿನ ಸೇವಾಪ್ರತಿನಿಧಿಗಳು ಇದ್ದರು.