ಗ್ರಾಮೀಣ ಪ್ರದೇಶ, ಅದರಲ್ಲೂ ಮಲೆನಾಡು ಅಂದರೆ ಆಯಾಯ ಋತುಗಳಲ್ಲಿ ಎಲ್ಲ ಕಾಲಗಳಲ್ಲಿಯೂ ಸಿಗುವ ಹಣ್ಣುಗಳು, ಕಾಯಿಗಳು, ಗೆಡ್ಡೆ ಗೆಣಸುಗಳು ಆಯಾಯ ಪ್ರದೇಶದ ಜನರಿಗೆ ಚಿರಪರಿಚಿತ.
ಕಾಡುಗಳಲ್ಲಿ ಸಿಗುವ ಹಣ್ಣುಗಳಲ್ಲಿ ಹಲವು ವಿಧ. ಮಾನವರು ತಿನ್ನುವ ಹಣ್ಣುಗಳು, ಪ್ರಾಣಿ-ಪಕ್ಷಿಗಳು ತಿನ್ನುವ ಹಣ್ಣುಗಳು, ಸಿಹಿಯಾದ ಹಣ್ಣುಗಳು, ವಿಷಕಾರಕ ಹಣ್ಣುಗಳು, ಹುಳಿ ರುಚಿಯನ್ನು ಹೊಂದಿರುವ ಹಣ್ಣುಗಳು, ಮೇಣದಿಂದ ಕೂಡಿರುವಂತಹ ಹಣ್ಣುಗಳು ಹೀಗೆ ಹತ್ತು ಹಲವು ಬಗೆಯ ಹಣ್ಣುಗಳನ್ನು ಕಾಣಬಹುದಾಗಿದೆ.
ಕಾಡುಗಳಲ್ಲಿ ಸಿಗುವ ಹಣ್ಣುಗಳಿಗೆ ಕ್ರಿಮಿನಾಶಕ ಹಾಗೂ ರಾಸಾಯನಿಕಗಳ ಸ್ಪರ್ಶವಿಲ್ಲದೆ ನೈಸರ್ಗಿಕವಾಗಿ ಬೆಳೆಯುವದರಿಂದ ಅವುಗಳಲ್ಲಿರುವ ಪೌಷ್ಟಿಕಾಂಶಗಳು, ರುಚಿ ಸ್ವಾದಗಳಿಗೆ ಅವಗಳೇ ಸಾಟಿ. ಈಗ ವ್ಯಾಪಾರದ ದೃಷ್ಟಿಯಿಂದ ಬೆಳೆಸಲಾಗುತ್ತಿರುವ ಹಣ್ಣುಗಳಿಗೆ ಇವುಗಳನ್ನು ಹೋಲಿಸಲು ಸಾಧ್ಯವೇ ಇಲ್ಲ.
ಆಯಾಯ ಕಾಲದಲ್ಲಿ ಸಿಗುವ ರುಚಿಕರ ಹಣ್ಣುಗಳನ್ನು ಕೊಯ್ದು, ಆಯ್ದು ತಂದು ಅದರ ಸವಿಯನ್ನು ಸವಿಯದ ಹಳ್ಳಿಗರೇ ವಿರಳ ಎನ್ನಬಹುದು.
ಆದರೆ ಇದು 15-20 ವರ್ಷಗಳ ಹಿಂದಿನ ಮಾತು. ಈಗ ಮನುಷ್ಯನ ದುರಾಸೆಗೆ ಬಲಿಯಾಗಿ ಕಾಡುಗಳು ನಾಶವಾಗುತ್ತಿವೆ. ಇದರಿಂದ ಕಾಡಿನಲ್ಲಿ ಸಿಗುವಂತಹ ಅದೆಷ್ಟೋ ಹಣ್ಣುಗಳು ಕಣ್ಮರೆಯಾಗುತ್ತಿವೆ. ಕಾಡಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವದು ಹಾಗಿರಲಿ, ಅದನ್ನು ನೋಡುವ ಹಾಗೂ ಹೆಸರು ಕೇಳುವ ಭಾಗ್ಯವೇ ಈಗಿನ ಜನತೆಗೆ ಇಲ್ಲದಂತಾಗಿದೆ.
ಈ ಕಾಡು ಹಣ್ಣುಗಳ ವಿನಾಶದಿಂದ ಮನುಷ್ಯನಿಗೆ ಮಾತ್ರವಲ್ಲದೆ, ಕಾಡಿನಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತಿರುವದು ಕಂಡು ಬರುತ್ತದೆ. ಕಾಡಿನಲ್ಲಿ ಸಿಗುತ್ತಿದ್ದ ಆಹಾರವನ್ನು ತಿಂದುಂಡು ಹಾಯಾಗಿ ಕಾಡಿನಲ್ಲಿಯೇ ವಾಸಿಸುವ ಪ್ರಾಣಿ-ಪಕ್ಷಿಗಳು ಆಹಾರದ ಕೊರತೆಯಿಂದ ನಾಡಿಗೆ ಲಗ್ಗೆಯಿಟ್ಟು ರೈತರ ಕೃಷಿ ಬೆಳೆಗಳನ್ನು ನಾಶಗೊಳಿಸುತ್ತಿರುವದು ದಿನ ನಿತ್ಯವೂ ಕಂಡು ಬರುತ್ತದೆ.
ಅರಣ್ಯ ರಕ್ಷಣೆಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಅರಣ್ಯ ರಕ್ಷಣೆ ಮತ್ತು ಅರಣ್ಯದ ಬೆಳವಣಿಗೆಗೆ ಸಾಧ್ಯವಾಗದಿರುವದು ದುರದೃಷ್ಟಕರವೆಂದೇ ಹೇಳಬಹುದು.
ಈ ಎಲ್ಲ ಕಣ್ಮರೆಯಾಗುತ್ತಿರುವ ಸಸ್ಯ ಹಾಗೂ ಹಣ್ಣಿನ ಪಟ್ಟಿಗೆ ಮಜ್ಜಿಗೆ ಹಣ್ಣಿನ ಸಸ್ಯ ಸೇರ್ಪಡೆಯಾಗಿರುವದು ವಿಷಾದಕರ. ಈ ಹಣ್ಣು ಹೆಸರೇ ಹೇಳುವಂತೆ ಮಜ್ಜಿಗೆ ರುಚಿಯನ್ನು ಹೊಂದಿದೆ. ಇದು ಮಳೆಗಾಲದಲ್ಲಿ ದೊರೆಯುವ ಹಣ್ಣುಗಳಲ್ಲಿ ಒಂದು.
ಈ ಹಣ್ಣಿನ ಮರವು 20 ರಿಂದ 25 ಅಡಿ ಎತ್ತರ ಹಾಗೂ ಒಂದೂವರೆ ಅಡಿ ದಪ್ಪವಿರುತ್ತದೆ. ಇದರ ಎಲೆಯು ಕರಿಬೇವಿನ ಗಿಡದ ಎಲೆಯನ್ನು ಹೋಲುತ್ತಿದ್ದು, ಹಣ್ಣುಗಳು ಬಿಳಿ ಬಣ್ಣದಿಂದ ದಪ್ಪ ದ್ರಾಕ್ಷಿ ಹಣ್ಣಿನಂತೆ ದುಂಡಗಿರುತ್ತದೆ. ಇದರಲ್ಲಿ ಚಪ್ಪಟೆಯಾಕಾರದ ಒಂದ ರಿಂದ ಮೂರು ಬೀಜಗಳಿದ್ದು, ಬಿತ್ತಿದರೆ ಯಥೇಚ್ಚವಾಗಿ ಸಸಿಗಳು ಹುಟ್ಟುತ್ತವೆ.
ಈ ಗಿಡ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೂ ಬಿಟ್ಟು ಜೂನ್, ಜುಲೈ ತಿಂಗಳಿನಲ್ಲಿ ಹಣ್ಣು ಮಾಗುತ್ತದೆ.
ಪೂರ್ತಿ ಮಾಗಿದ ಹಣ್ಣುಗಳು ಹುಳಿ ಮತ್ತು ಸಿಹಿ ಮಿಶ್ರಿತವಾಗಿದ್ದು ಮಜ್ಜಿಗೆ ರುಚಿಯನ್ನು ಹೊಂದಿರುತ್ತದೆ. ಈ ಹಣ್ಣುಗಳು ಮಾಗಿದರೆ ಇದನ್ನು ನೋಡುವದೇ ಸೊಬಗು. ಹಸಿರು ಎಲೆಗಳ ಮಧ್ಯೆ ಬಿಳಿ ಬಣ್ಣದ ರಾಶಿ, ರಾಶಿ ಹಣ್ಣುಗಳು ನೋಡುಗರ ಮನ ಸೂರೆಗೊಳಿಸುತ್ತವೆ.
ಈಗ ಪಕ್ಷಿಗಳಿಗೆ ಆಹಾರದ ಕೊರತೆಯಿರುವದರಿಂದ ಹಣ್ಣು ಬಲಿತ ಒಂದೆರಡು ದಿನಗಳಲ್ಲಿ ಎಲ್ಲಾ ಹಣ್ಣುಗಳನ್ನು ತಿಂದು ಮುಗಿಸಿ ಮರ ಬೋಳಾಗಿರುವದನ್ನು ಮಾತ್ರ ಕಾಣಬಹುದಾಗಿದೆ. ಇಂತಹ ಎಷ್ಟೋ ಹಣ್ಣುಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸುವದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.