ಶ್ರೀಮಂಗಲ, ಜು. 6: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದ ಮೂಲಕ ಬಿರುನಾಣಿ-ಹುದಿಕೇರಿ ಸಂಪರ್ಕ ರಸ್ತೆಯ ನಡುವೆ ಕಕ್ಕಟ್ಟ್‍ನದಿಗೆ ನೂತನವಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಸಂದರ್ಭ ಬಾರೀ ಮಳೆ ಹಿನ್ನೆಲೆ ನದಿಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ.

ಈ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದ್ದು, ನದಿ ನೀರಿನ ಮಟ್ಟ ಇಳಿ ಮುಖಗೊಂಡಿರುವ ಹಿನ್ನೆಲೆ ಕೊಚ್ಚಿಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಕಾಮಗಾರಿಯ ಸೆಂಟ್ರಿಂಗ್ ಸಾಮಗ್ರಿಗಳು ನದಿಯ ಅಲ್ಲಲ್ಲಿ ಬಿದ್ದಿವೆ. ಸಾಮಗ್ರಿಗಳನ್ನು ಹಗ್ಗದ ಮೂಲಕ ಕಟ್ಟಿ ಒಂದೊಂದಾಗಿ ಕಾರ್ಮಿಕರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ 2.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ವೇಳೆ ಅನಾಹುತ ಎದುರಾಗಿತ್ತು.