ಮಡಿಕೇರಿ, ಜು. 6: ಕೊಡಗು ಸೇರಿದಂತೆ ರಾಜ್ಯ ಅನೇಕ ಜಿಲ್ಲೆಗಳಲ್ಲಿ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಸಮವಸ್ತ್ರ ಪೂರೈಸದಿರುವದು ಬಹಿರಂಗಗೊಂಡಿದೆ. ಇದುವರೆಗೆ ಶಾಲಾ ಹಂತದಲ್ಲಿ ವಿಚಾರಿಸಲಾಗಿ ಮಕ್ಕಳಿಗೆ ಎಲ್ಲ ಸೌಲಭ್ಯ ಲಭಿಸಿರುವದಾಗಿ ಶಿಕ್ಷಕರು ಸತ್ಯಾಂಶವನ್ನು ಮುಚ್ಚಿ ಹಾಕಿದ್ದರು.ಈ ಬಗ್ಗೆ ಸದನದಲ್ಲಿ ಇಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರಶ್ನಿಸಿದ್ದು, ಕೊಡಗು ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಮವಸ್ತ್ರ ಪೂರೈಸದಿರುವ ಅಂಶ ದೃಢಪಟ್ಟಿದೆ. ನಿಯಮ ‘330ಎ’ ಅಡಿಯಲ್ಲಿ ಮೇಲ್ಮನೆ ಸಭಾಪತಿಗಳಿಗೆ ಸುನಿಲ್ ಸುಬ್ರಮಣಿ ಈ ಕುರಿತು ಗಮನ ಸೆಳೆದಿದ್ದಾರೆ. ಆ ಪ್ರಕಾರ ಕೊಡಗು, ಹಾಸನ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರದೊಂದಿಗೆ ಪಾದರಕ್ಷೆ (ಶೂ) ಇತ್ಯಾದಿ ಒದಗಿಸದಿರುವದು ಖಾತರಿಯಾಗಿದೆ.

ಪ್ರಶ್ನೆಗೆ ಇನ್ನಷ್ಟೆ ಸರಕಾರದಿಂದ ಉತ್ತರ ಲಭಿಸಬೇಕಿದೆ ಎಂದು ಮೇಲ್ಮನೆ ಸದಸ್ಯರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.

ಉಪನಿರ್ದೇಶಕಿ ಸ್ಪಷ್ಟನೆ : ವಿಧಾನಪರಿಷತ್ತಿನಲ್ಲಿ ಇಂದು ಕೊಡಗಿನ ಶಾಸಕರು ಸಮವಸ್ತ್ರದೊರಕದಿರುವ ಬಗ್ಗೆ ಸರಕಾರದ ಗಮನ ಸೆಳೆದಿರುವ ಕುರಿತು ‘ಶಕ್ತಿ’ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ ಅವರನ್ನು ಪ್ರಶ್ನಿಸಿದಾಗ, ‘ಕೊಡಗು ಜಿಲ್ಲೆ ಸೇರಿದಂತೆ ಮೈಸೂರು ವಿಭಾಗಕ್ಕೆ ಸಮವಸ್ತ್ರ ದೊರಕಿಲ್ಲ’’ವೆಂದು ಸ್ಪಷ್ಟಪಡಿಸಿದರು.

ಅಲ್ಲದೆ, ಇನ್ನು ಸಮವಸ್ತ್ರ ಲಭಿಸದೆ ಕೊಡಗಿನ ಶಾಲೆಗಳಿಗೆ ಬಟ್ಟೆ ಸರಬರಾಜುಗೊಳಿಸಲು ಸಾಧ್ಯವಾಗಿರದ ಕಾರಣ ಪ್ರಸಕ್ತ ಸಾಲಿನ ಸಮವಸ್ತ್ರದ ಮೊತ್ತವನ್ನು ನೇರವಾಗಿ ಶಾಲಾ ಖಾತೆಗಳಿಗೆ ಸರಕಾರ ಹಣದ ರೂಪದಲ್ಲಿ ಹಂಚಿಕೆ ಮಾಡುವದಾಗಿ ಭರವಸೆ ನೀಡಿದೆ ಎಂದು ಸುಳಿವು ನೀಡಿದರು.

ಈಗಾಗಲೇ ಮುಂಗಡ ಪತ್ರ ಮಂಡಿಸಿ ಮುಜುಗರಕ್ಕೆ ಸಿಲುಕಿರುವ ಸರಕಾರ, ಇಲ್ಲಿ ಶಾಲಾ ಮಕ್ಕಳಿಗೂ ಸಮವಸ್ತ್ರ ಕಲ್ಪಿಸದಿರುವ ಅಂಶ; ವಿದ್ಯಾರ್ಥಿ ಸಮೂಹದ ಬಗ್ಗೆ ಅಸಡ್ಡೆ ತೋರಿರುವಂತೆ ಬಾಸವಾಗತೊಡಗಿದೆ.