ಮೂರ್ನಾಡು, ಜು. 6: ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕವು ದಿ.ಎನ್ ಮಹಾಬಲೇಶ್ವರ ಭಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಮೂರ್ನಾಡು ಇಂದಿರಾ ದಂತ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿತ್ತು.
ಹೋಬಳಿ ಅಧ್ಯಕ್ಷ ಸುಕುಮಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಮೇಚಿರ ಸುಭಾಷ್ ನಾಣಯ್ಯ, ನಿರ್ದೇಶಕ ಕಿಗ್ಗಾಲು ಗಿರೀಶ್ ದಿವಂಗತರ ಬಗ್ಗೆ ಮಾತನಾಡಿದರು. ಪುದಿಯೊಕ್ಕಡ ರಮೇಶ್, ಸುಚಿತ್ರಾ, ಶ್ವೇತಾ, ಸೌಮ್ಯ ಮುಂತಾದವರು ಹಾಜರಿದ್ದರು.
* ಕೊಡಗು ಜಿಲ್ಲಾ ಲೇಖಕರ ಕಲಾವಿದರ ಬಳಗದ ವತಿಯಿಂದ ಪತ್ರಿಕಾಭವನ ಸಭಾಂಗಣದಲ್ಲಿ ಮಹಾಬಲೇಶ್ವ ಭಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಮೊನ್ನೆ ನಡೆಯಿತು. ತುಂಬು ಸ್ವಾಭಿಮಾನದ, ಪ್ರಾಮಾಣಿಕ, ನೇರ ವ್ಯಕ್ತಿತ್ವದ ಇವರಿಗೆ ಓರ್ವ ಹೆಸರಾಂತ ಸಾಹಿತಿಯಾಗಿ ಬೆಳೆಯುವ ಸಾಮಥ್ರ್ಯವಿತ್ತು ಎಂದು ದಿವಂಗತರ ಶಿಷ್ಯ ಮತ್ತು ದಶಕಗಳ ಒಡನಾಡಿ ಶ್ರೀ ಶಂಷುದ್ದಿನ್ ಅಭಿಪ್ರಾಯಪಟ್ಟರು. ಅವರ ಪುಸ್ತಕಗಳ ಬಗೆಗೆ ವಿಮರ್ಷಾ ಕಾರ್ಯಕ್ರಮಗಳನ್ನು ಬಳಗವು ಹಮ್ಮಿಕೊಳ್ಳಬೇಕೆಂದು ಕರೆಕೊಟ್ಟರು.
ಹಿರಿಯರಾದ ಶ್ರೀ ಜಿ.ಟಿ.ರಾಘವೇಂದ್ರರವರು ಮಾತನಾಡುತ್ತಾ ದಿವಂಗತ ಭಟ್ಟರು ತಮ್ಮ ಶಿಷ್ಯರಿಗೆ ತೋರಿಸುತ್ತಿದ್ದ ವಾತ್ಸಲ್ಯ ಅವರ್ಣನೀಯವೆಂದರು. ಅವರ ವಾಕ್‍ಶುಧ್ಧಿ, ಸನ್ನಡತೆ, ಜಾತ್ಯತೀತ ಭಾವನೆಗಳಿಂದಾಗಿ ಅವರು ಸಮಾಜದ ಆಸ್ತಿಯೇ ಆಗಿದ್ದರೆಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಲೇಖಕರ ಕಲಾವಿದರ ಬಳಗದ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್ ಮಾತನಾಡಿ ದಿವಂಗತರು ಜಿಲ್ಲೆಯ ಮೂಲೆಮೂಲೆಗೂ ಸಂಚರಿಸಿ ನಡೆಯುತ್ತಿದ್ದ ಸಾಹಿತ್ಯ ಕುರಿತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘಟಕರನ್ನು ಪ್ರೀತಿಯಿಂದ ಮಾತನಾಡಿಸಿ ಹುರಿದುಂಬಿಸುತ್ತಿದ್ದನ್ನು ನೆನಪಿಸಿಕೊಂಡರು. ದಿ|| ಭಟ್ಟರ ಕೃತಿಗಳ ಪ್ರಕಟಣೆಗೆ ಹಾಗೂ ಅವುಗಳ ಸಂಬಂಧಿತ ವಿಮರ್ಷಾ ಕಾರ್ಯಕ್ರಮಗಳನ್ನು ನಡೆಸಲು ಬಳಗವು ಇಚ್ಛಿಸುತ್ತದೆಂದು ಹೇಳಿದರು.