ಕೂಡಿಗೆ, ಜು. 6: ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಶಾಲೆಯ ಪೋಷಕ ಪರಿಷತ್ತಿನ ಸಭೆಯು ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ವಿಜಯ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾರ್ಥಿಗಳ ಪೋಷಕರೊಂದಿಗೆ ಶೈಕ್ಷಣಿಕ ಬೆಳವಣಿಗೆ ಹಾಗೂ ಪಠ್ಯ ಮತ್ತು ಪಠ್ಯೇತರ ವಿಷಯಗಳಿಗೆ ಸಂಬಂಧಪಟ್ಟಂತೆ ಚರ್ಚೆ ನಡೆದವು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಫಾ. ರೊನಾಲ್ಡ್ ಕಾರ್ಡೋಜಾ ಮಾತನಾಡಿ, ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಉತ್ತಮ ಹೊಂದಾಣಿಕೆಯೊಂದಿಗೆ ಸಾಗಿದಲ್ಲಿ ಶಾಲೆಯ ಪ್ರಗತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರು ಶ್ರಮಿಸುತ್ತಿದ್ದು, ಪೋಷಕರು ಕೂಡಾ ಸಹಕಾರ ನೀಡಬೇಕು ಎಂದರು. ಈ ಸಂದರ್ಭ ಶಾಲಾ ಪೋಷಕ ಪರಿಷತ್ತಿನ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವರ್ಗ ಹಾಗೂ ಪೋಷಕರು ಇದ್ದರು.