ಗೋಣಿಕೊಪ್ಪಲು, ಜು. 7: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕೇರಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಗೋಣಿಕೊಪ್ಪ ಜಿ.ಪಂ. ಸದಸ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಚಿಯಕ್‍ಪೂವಂಡ ಬೋಪಣ್ಣ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ವಲಯದ ಅನುದಾನದಲ್ಲಿ ರೂ. 10 ಲಕ್ಷ ಅನುದಾನ ಮಂಜೂರಾಗಿದೆ. ಆದ್ಯತೆ ಮೇರೆ ಪರಿಶಿಷ್ಟರ ಕಾಲೋನಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಗ್ರಾಮ ಜನತೆ ಈ ಕಾಮಾಗಾರಿಯನ್ನು ಉತ್ತಮವಾಗಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.

ಮುಂಜಾನೆ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಜಯ ಪೂವಯ್ಯ, ಗ್ರಾ.ಪಂ. ಸದಸ್ಯ ಕುಪ್ಪಂಡ ಗಿರೀಶ್ ಪೂವಣ್ಣ, ಆರ್‍ಎಂಸಿ ನಿರ್ದೇಶಕ ಚಿಯಕ್‍ಪೂವಂಡ ಸುಬ್ರಮಣಿ, ಗ್ರಾಮಸ್ಥರಾದ ಕೊಡಂದೇರ ಸುಬ್ಬಯ್ಯ, ಅಯ್ಯಪ್ಪ, ಶಾರದಾ, ಸುರೇಶ್, ಮಣಿ, ದೀಕ್ಷಿ, ಜಪ್ಪು ಸುಬ್ಬಯ್ಯ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಂಶಾತ್, ಗುತ್ತಿಗೆದಾರ ಮನು ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.