ಮಡಿಕೇರಿ, ಜು. 5: ಕೃಷಿ ಇಲಾಖೆಯ ವತಿಯಿಂದ ಭಾಗಮಂಡಲ ಹೋಬಳಿಯ ಕೊಟ್ಟೂರು ಗ್ರಾಮದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಉದ್ಘಾಟಿಸಿ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ರೈತರು-ಯುವ ರೈತರು ಆಸಕ್ತಿಯಿಂದ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಆರ್ಥಿಕವಾಗಿ ಸಬಲರಾಗುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲಪಿಸುವ ಉದ್ದೇಶ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲ ಉದ್ದೇಶದಿಂದ ವಸ್ತುಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಸ್ತು ಪ್ರದರ್ಶನ ಮಳಿಗೆಗಳನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಉದ್ಘಾಟಿಸಿ, ರೈತರಿಗೆ ಶುಭ ಹಾರೈಸಿದರು.

ತಾಂತ್ರಿಕ ಸಮಾವೇಶದಲ್ಲಿ ಕೆ.ವಿ.ಕೆ. ತಜ್ಞ ಡಾ. ಪ್ರಭಾಕರ್ ಭತ್ತದ ವ್ಯವಸಾಯ ಕ್ರಮ ಮತ್ತು ಕಾಳುಮೆಣಸಿನಲ್ಲಿ ಸಸ್ಯ ಸಂರಕ್ಷಣೆ ಪದ್ಧತಿ ಬಗ್ಗೆ ಮಾಹಿತಿ ನೀಡಿದರೆ, ಚೆಟ್ಟಳ್ಳಿ ತೋಟಗಾರಿಕೆ ಸಂಶೋಧನಾ ಕೇಂದ್ರದ ತಜ್ಞ ಡಾ. ವೆಂಕಟರಮರಣಪ್ಪ ಹಣ್ಣಿನ ಬೆಳೆಗಳ ಆವಿಷ್ಕಾರ ಕುರಿತು ಪ್ರಾತ್ಯಕ್ಷತೆಯೊಂದಿಗೆ ಮಾಹಿತಿ ನೀಡಿದರು. ಮಡಿಕೇರಿ ಕೃಷಿ ಸಂಶೋಧನಾ ಕೇಂದ್ರದ ತಜ್ಞ ತುಕಾರಾ ಬೀಜೋಪಚಾರದಿಂದ ತಡೆಯಬಹುದಾದ ಬೆಳೆ ನಷ್ಟಗಳ ವಿವರ ಮತ್ತು ಎರೆಗೊಬ್ಬರ ತಯಾರಿಕೆಯಿಂದ ಮಣ್ಣಿನ ಸತ್ವ ಹೆಚ್ಚಿಸುವಿಕೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆ. ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಕೊಡಪಾಲು ಗಣಪತಿ, ದಬ್ಬಡ್ಕ ಶ್ರೀಧರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ ಮತ್ತು ಸಹಕಾರ ಬ್ಯಾಂಕಿನ ಅಧ್ಯಕ್ಷ ಬಾಚಿರಣಿಯಂಡ ಸುಮನ್ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೇಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಅಶೋಕ್ ಅಧ್ಯಕ್ಷೀಯ ಭಾಷಣದಲ್ಲಿ ಕೃಷಿ ಮತ್ತು ಇತರ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಾ, ಸಕಾಲದಲ್ಲಿ ರೈತರಿಗೆ ಅವಶ್ಯಕತೆಯಿರುವ ಮತ್ತು ಅನುಕೂಲಕರವಾದ ಮಾಹಿತಿ ಮತ್ತು ಕೃಷಿ ಪರಿಕರಗಳನ್ನು ನೀಡಿ ರೈತರ ಜೀವನ ಮಟ್ಟ ಸುಧಾರಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು.

ಅನಗತ್ಯ ರೈತರನ್ನು ಅಲೆದಾಡಿಸದಂತೆ ನಿಗಾವಹಿಸಬೇಕೆಂದು ಸಲಹೆ ನೀಡಿದರು. ನವೀನ್ ನಂಜಪ್ಪ ಪ್ರಾರ್ಥಿಸಿದರೆ, ಶಾಲಾ ಮಕ್ಕಳಿಂದ ರೈತ ಗೀತೆ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ಎಂ.ವಿ. ಮಂಜುನಾಥ್ ಪ್ರಾಸ್ತಾವಿಕ ಭಾಷಣ ಮಾಡಿ ಅಭಿಯಾನದ ಸೂಕ್ಷ್ಮತೆಯನ್ನು ಸಭೆಗೆ ತಿಳಿಸಿದರು. ಸ್ಥಳೀಯ ರೈತರು ಮತ್ತು ಬೆಳೆಗಾರರು ಆಗಮಿಸಿ ತಾಂತ್ರಿಕ ಮಾಹಿತಿಗಳನ್ನು ಪಡೆದುಕೊಂಡರು.