ಮಡಿಕೇರಿ, ಜು. 5: ಡಾ. ಕಸ್ತೂರಿ ರಂಗನ್ ವರದಿಯ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದ ಸೋಮವಾರ ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷರು ಜಿಲ್ಲೆಯ ಶಾಸಕರು ಹಾಗೂ ಸಂಸದರ ವಿರುದ್ಧ ಅರ್ಥಹೀನ ಟೀಕೆಯಲ್ಲಿ ತೊಡಗಿದ್ದು, ಇದನ್ನು ತೀವ್ರವಾಗಿ ಖಂಡಿಸುವದಾಗಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ತಮ್ಮದೇ ಪಕ್ಷದ ಸರಕಾರ ರಚನೆಯಾಗಿದೆ ಎನ್ನುವ ಭ್ರಮೆಯಲ್ಲಿರುವ ಜೆಡಿಎಸ್ ಪ್ರಮುಖರು ತಿಳುವಳಿಕೆಯ ಕೊರತೆಯಿಂದ ಎಳಸು ರಾಜಕಾರಣ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.ಡಾ. ಕಸ್ತೂರಿ ರಂಗನ್ ವರದಿ ವಿವಾದದಿಂದ ಕೊಡಗು ಜಿಲ್ಲೆಯನ್ನು ಮುಕ್ತಗೊಳಿಸಲು ಜೆಡಿಎಸ್ ನಾಯಕರು ಏನು ಕೊಡುಗೆ ನೀಡಿದ್ದಾರೆ ಎನ್ನುವದನ್ನು ಮೊದಲು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿರುವ ಸುಬ್ರಮಣ್ಯ ಉಪಾಧ್ಯಾಯ, ಜಿಲ್ಲೆಯ ಸಂಸದರು ಹಾಗೂ ಶಾಸಕರ ಕಾರ್ಯ ಕ್ಷಮತೆಯ ಬಗ್ಗೆ ಜನರು ಈಗಾಗಲೇ ತೀರ್ಪು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಂಸದ ಪ್ರತಾಪ ಸಿಂಹ ಅವರು ಡಾ. ಕಸ್ತೂರಿ ರಂಗನ್ ವರದಿ ನನ್ನ ಹೆಗಲಿಗೆ ಬಿಡಿ ಎಂದು ಹೇಳಿದ್ದು ಮಾತ್ರವಲ್ಲ, ನುಡಿದಂತೆ ನಡೆದಿದ್ದಾರೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ವರದಿಯಿಂದ ಕೊಡಗು ಹಾಗೂ ಕರ್ನಾಟಕದ ಜನತೆಗೆ ಆಗುವ ತೊಂದರೆಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೇಂದ್ರದ ಪರಿಸರ ಸಚಿವರನ್ನು ಸಂಸದರು ಹಾಗೂ ಶಾಸಕರೊಂದಿಗೆ ಭೇಟಿಯಾಗಿ ತಾತ್ಕಾಲಿಕ ತಡೆಯಾಜ್ಞೆಯನ್ನು ತಂದು ಮುಂದಿನ ಎರಡು ವರ್ಷಗಳವರೆಗೆ ಆಕ್ಷೇಪ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ, ಇದು ಜೆಡಿಎಸ್‍ನ ಮಂದಿಗೆ ಯಾಕೆ ತಿಳಿದಿಲ್ಲ ಎಂದು ಸುಬ್ರಮಣ್ಯ ಉಪಾಧ್ಯಾಯ ಪ್ರಶ್ನಿಸಿದ್ದಾರೆ.

ವರದಿ ಅನುಷ್ಠಾನದ ಕುರಿತು ಜಾರಿಯಲ್ಲಿರುವ ಸಮಿತಿಯೊಂದು ಪರಿಸರದ ಪರಿಸ್ಥಿತಿಗೆ ಅನುಗುಣವಾಗಿ ಜನರ ಅವಶ್ಯಕತೆಗೆ ತಕ್ಕಂತೆ ಜನರ ಜೀವನಕ್ಕೆ ತೊಂದರೆಯಾಗದಂತೆ ನಿಯಮವನ್ನು ಮಾರ್ಪಾಡು ಮಾಡಲು ಕೇಂದ್ರ ಪರಿಸರ ಇಲಾಖೆ ಸಮಿತಿಗೆ ಅವಕಾಶ ನೀಡಿದ್ದು, ಇದು ಜಿಲ್ಲೆಯ ಶಾಸಕರ ಹಾಗೂ ಸಂಸದರ ಜನಪರ ಕಾಳಜಿಯ ಪ್ರತಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.