ಪೊನ್ನಂಪೇಟೆ, ಜೂ. 30: ಕೊಡಗಿನ ಸರಕಾರಿ ಶಾಲೆಗಳ ಉಳಿವು ಇದೀಗ ಗ್ರಾಮಸ್ಥರ ಕೈಯಲ್ಲಿದೆ. ಅದ್ದರಿಂದ ಆಯಾ ಗ್ರಾಮದ ಪ್ರಜ್ಞಾವಂತರು ಮತ್ತು ಶಿಕ್ಷಣ ಪ್ರೇಮಿಗಳು ಸರಕಾರಿ ಶಾಲೆಗಳಿಗೆ ಜೀವ ತುಂಬಲು ಮುಂದಾಗಬೇಕು ಎಂದು ನಿವೃತ್ತ ಅಧ್ಯಾಪಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಕಿಕ್ಕರೆರ ಎ. ಉಮ್ಮರ್ ಹೇಳಿದರು.

ಎಡಪಾಲ ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ನಜ್ಮುಲ್ ಹುದಾಯೂತ್ ಅಸೋಸಿಯೇಷನ್‍ನ (ಎನ್.ಹೆಚ್.ವೈ.ಎ.) ಆಶ್ರಯದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ಯಾಗ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳ ಸೇವೆಗೆ ಹೇಗೆ ಬೆಲೆ ಕಲ್ಪಿಸಲು ಸಾಧ್ಯವಿಲ್ಲವೋ ಅದೇ ರೀತಿಯಾಗಿ ಸರಕಾರಿ ಶಾಲೆಗಳಲ್ಲಿ ಕಲಿತ ಶಿಕ್ಷಣದ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೊಣಂಜಂಗೇರಿ ಗ್ರಾ.ಪಂ. ಸದಸ್ಯ ಸಿ.ಆರ್.ಪಿ. ಉಮ್ಮರ್ ಮಾತನಾಡಿ, ಕಳೆದ ತಲೆಮಾರಿನವರೆಗೆ ಸಾಧನೆ ಮಾಡಿದ ಕೊಡಗಿನ ಸಾಧಕರು ಎಲ್ಲಾರೂ ಸರಕಾರಿ ಶಾಲೆಗಳಲ್ಲೇ ಕಲಿತವರು ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಡಪಾಲದ ನಜ್ಮುಲ್ ಹುದಾಯೂತ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎ. ಮೊಹಮ್ಮದ್ ಸಲೀಂ ಮಾತನಾಡಿದರು.

ಕಳೆದ ಶೈಕ್ಷಣಿಕ ಸಾಲಿನ ಶಾಲೆಯ 1 ರಿಂದ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಎಡಪಾಲದ ಸ.ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುರಿಕಡೆರ ಇಸ್ಮಾಯಿಲ್, ಎಡಪಾಲ ಮುಸ್ಲಿಂ ಜಮಾಅತ್‍ನ ಮಾಜಿ ಅಧ್ಯಕ್ಷ ಕುಪ್ಪೋಡಂಡ ಎ. ಬಶೀರ್ ಹಾಜಿ, ಎನ್.ಹೆಚ್.ವೈ.ಎ. ಪ್ರಧಾನ ಕಾರ್ಯದರ್ಶಿ ಕುರಿಕಡೆರ ಎ. ಅಬ್ದುಲ್ ಸಮದ್, ಉಪಾಧ್ಯಕ್ಷ ಸಿ.ಎ. ಬಶೀರ್ ಮೊದಲಾದವರು ಉಪಸ್ಥಿತರಿದ್ದರು. ಇರ್ಷಾದ್ ಸ್ವಾಗತಿಸಿ, ರಿಯಾeóï ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ಸಮದ್ ವಂದಿಸಿದರು.