ಮಡಿಕೇರಿ, ಜೂ. 24: ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಸೈನಿಕಶಾಲೆಯಲ್ಲಿ ನಿನ್ನೆ ದಿನ ವಿದ್ಯಾರ್ಥಿಯೋರ್ವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಪ್ರಕರಣ ಬೆಳಕಿಗೆ ಬಂದಲ್ಲಿಂದ ತಾ. 24ರ ಅಪರಾಹ್ನದ ತನಕವೂ ಬಿಗುವಿನ ವಾತಾವರಣೆ ಸೃಷ್ಟಿಯಾಗಿತ್ತು.ಸೈನಿಕ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕೊಡಗಿನ ಮಾದಾಪುರ ಮೂವತೊಕ್ಕಲುವಿನ ಚಿಂಗಪ್ಪ ಮೃತ ವಿದ್ಯಾರ್ಥಿಯಾಗಿದ್ದಾನೆ. ಸೈನಿಕ ಶಾಲೆಯಲ್ಲಿ ಹಾಕಿ ತರಬೇತುದಾರರಾದ ನಾಗಂಡ ಟಿ. ಪೂವಯ್ಯ ಎಂಬವರ ಪುತ್ರನಾದ ಚಿಂಗಪ್ಪ ಮೃತದೇಹ ನಿನ್ನೆ ಸೈನಿಕ ಶಾಲೆಯ ಶೌಚಾಲಯದಲ್ಲಿ ಸಂಜೆ ವೇಳೆ ಪತ್ತೆಯಾಗಿತ್ತು ಎಂಬದು ಈ ನಿಗೂಢತೆಗೆ ಕಾರಣವಾಗಿದೆ.

ಈ ಘಟನೆಯ ಬಗ್ಗೆ ಕಳೆದ ರಾತ್ರಿಯಿಂದಲೇ ಬಿಗು ಪರಿಸ್ಥಿತಿ ಉಂಟಾಗಿತ್ತು. ಮೃತ ವಿದ್ಯಾರ್ಥಿಯ ಪೋಷಕರು ಸೈನಿಕ ಶಾಲೆಯ ಹಲವರ ಹೆಸರನ್ನು ಉಲ್ಲೇಖಿಸಿ ತಮ್ಮ ಮಗನನ್ನು ಕೊಲೆಗೈಯ್ಯಲಾಗಿದೆ ಎಂದು ಆಪಾದಿಸಿದ್ದಾರೆ. ಈ ಕುರಿತು ಮೃತನ ತಂದೆ ಪೂವಯ್ಯ, ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ದೂರನ್ನೂ ನೀಡಿದ್ದು, ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್

(ಮೊದಲ ಪುಟದಿಂದ) ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಸೈನಿಕ ಶಾಲೆಯ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದ ಐವರ ವಿರುದ್ಧ ಸೆಕ್ಷನ್ 302ರ ಅನ್ವಯ ಕೊಲೆ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿರುವದಾಗಿ ತಿಳಿಸಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೈನಿಕ ಶಾಲೆಯ ಸಿಬ್ಬಂದಿಗಳಾದ ಮಂಜಪ್ಪ, ಗೋವಿಂದರಾಜು, ಮ್ಯಾಥ್ಯು, ಸೀಮಾ ಮತ್ತು ಸುನಿಲ್ ಎಂಬವರ ವಿರುದ್ಧ ನೀಡಲಾಗಿರುವ ದೂರಿನಂತೆ ನಿನ್ನೆ ರಾತ್ರಿಯೇ ಎಫ್‍ಐಆರ್ ಕೂಡ ದಾಖಲಾಗಿದೆ.

ಪ್ರಕರಣವೇನು ..?

ಪಿರ್ಯಾದಿಯವರು ನೀಡಿರುವ ದೂರಿನಂತೆ ಅವರ ಪುತ್ರ ಚಿಂಗಪ್ಪ ನಿನ್ನೆ ಅಪರಾಹ್ನ 2 ಗಂಟೆಯಿಂದ ನಾಪತ್ತೆಯಾಗಿರುವದಾಗಿ ಶಾಲೆಯ ಸಿಬ್ಬಂದಿಗಳ ಮೂಲಕ ತಿಳಿದು ಬಂದಿದ್ದು, ಆತನನ್ನು ಹುಡುಕಿಕೊಂಡು ಬರುವಂತೆ ತಿಳಿಸಲಾಗಿತ್ತು. ಶಾಲೆಯಿಂದ ತಮ್ಮನ್ನು ಪುತ್ರನನ್ನು ಹುಡುಕಲು ಕಳುಹಿಸಲಾಗಿತ್ತು ಎಂದು ಪೂವಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಸಂಜೆ 7.45ರ ಸುಮಾರಿಗೆ ಪುತ್ರನ ಶವವನ್ನು ಸೈನಿಕ ಶಾಲೆಯಿಂದ ಆ್ಯಂಬುಲೆನ್ಸ್ ವಾಹನದಲ್ಲಿ ಚಾಲಕ ಜನಾರ್ಧನ ಮತ್ತು ಸುನಿಲ್‍ಕುಮಾರ್ ಎಂಬವರು ಕೂಡಿಗೆಯ ಆಸ್ಪತ್ರೆಯ ಬಳಿ ತಂದಿದ್ದಾರೆ. ಬಳಿಕ ಮಗನ ಶವವು ಶಾಲೆಯ ಬಾತ್‍ರೂಂನಲ್ಲಿ ದೊರೆತಿದ್ದು, ಆಸ್ಪತ್ರೆಗೆ ಕೊಂಡೊಯ್ದಿರುವದಾಗಿ ತಮಗೆ ಮಾಹಿತಿ ನೀಡಲಾಗಿತ್ತು. ಅದರಂತೆ ನಾನು ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಶಾಲೆಯ ಯಾವ ಸಿಬ್ಬಂದಿಗಳೂ ಇರಲಿಲ್ಲ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ನನ್ನ ಮಗನನ್ನು ಶಾಲೆಯ ಮಂಜಪ್ಪ (ಕನ್ನಡ ಮಾಸ್ಟರ್), ಗೋವಿಂದರಾಜು (ಕಂಪ್ಯೂಟರ್ ಟೀಚರ್), ಎ.ಓ. ಮ್ಯಾಥ್ಯು, ಉಪಪ್ರಾಂಶುಪಾಲರಾದ ಸೀಮಾ ಹಾಗೂ ವಾರ್ಡನ್ ಸುನಿಲ್ ಅವರುಗಳು ಕೊಲೆ ಮಾಡಿ, ನನ್ನನ್ನು ಶಾಲೆಯಿಂದ ಕಳುಹಿಸಿ ಮಗ ಸತ್ತಿರುವ ವಿಚಾರವನ್ನು ನನಗೆ ತಿಳಿಸದೆ ಅಥವಾ ಪೊಲೀಸರಿಗೂ ತಿಳಿಸದೆ ಶವವನ್ನು ಆಸ್ಪತ್ರೆ ಬಳಿ ಬಿಟ್ಟು ಹೋಗಲಾಗಿದೆ ಎಂದು ಪೂವಯ್ಯ ನೀಡಿದ ದೂರಿನಂತೆ ಎಫ್‍ಐಆರ್ ದಾಖಲಾಗಿದೆ. ಈ ಮೇಲಿನ ಹೆಸರಿನವರು ಮಗನಿಗೆ ಹಲವು ಸಮಯದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮಗ ತಿಳಿಸಿದ್ದನು. ಈ ಕುರಿತು ಉಪಪ್ರಾಂಶುಪಾಲರ ಗಮನಕ್ಕೆ ತಂದರೂ ಸಹ ಬೈದು ಕಳುಹಿಸಿದ್ದಾಗಿ ಪೂವಯ್ಯ ತಿಳಿಸಿದ್ದು, ಇದರಂತೆ ದೂರು ದಾಖಲಾಗಿದೆ.

ಮಡಿಕೇರಿಯಲ್ಲಿ ಪ್ರತಿಭಟನೆ

ಮೃತದೇಹವನ್ನು ಬಳಿಕ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿತ್ತು. ಇಂದು ಇಲ್ಲಿ ಮೃತನ ಪೋಷಕರು ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಶಾಲೆಯ ಪ್ರಾಂಶುಪಾಲರು ಪ್ರಸ್ತುತ ರಜೆಯಲ್ಲಿದ್ದರೂ ಇವರೇ ಸ್ಥಳಕ್ಕೆ ಆಗಮಿಸಬೇಕು. ಇಲ್ಲದಿದ್ದಲ್ಲಿ ಮೃತ ದೇಹವನ್ನು ತೆಗೆಯುವದಿಲ್ಲ ಎಂದು ಪ್ರತಿಭಟನಾನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಜಿಲ್ಲಾ ಆಸ್ಪತ್ರೆಯ ಶವಾಗಾರದ ಎದುರು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು.

ಪ್ರಕರಣ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಸೈನಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.

ಎಂಎಲ್‍ಸಿ - ಎಸ್‍ಪಿ ಭೇಟಿ

ಈ ವಿಚಾರ ಅರಿತು ಸ್ಥಳಕ್ಕೆ ಎಂಎಲ್‍ಸಿಗಳಾದ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರುಗಳು ಭೇಟಿ ನೀಡಿದರು. ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಬಳಿಕ ಎಂಎಲ್‍ಸಿಗಳು ಹಾಗೂ ಎಸ್‍ಪಿ, ಸೈನಿಕ ಶಾಲೆಯ ಪಿಆರ್‍ಓ ಪ್ರಸಾದ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಈ ಸಂದರ್ಭ ಪ್ರತಿಭಟನಾಕಾರರೊಂದಿಗೆ ಪ್ರತಿಕ್ರಿಯಿಸಿದ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಪ್ರಕರಣದ ಕುರಿತು ಈಗಾಗಲೇ ತನಿಖೆ ಆರಂಭಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಿರುವದಾಗಿ ಭರವಸೆಯಿತ್ತರು.

ಸುನಿಲ್ ಪ್ರತಿಕ್ರಿಯೆ

ಸ್ಥಳದಲ್ಲಿ ಪ್ರತಿಕ್ರಿಯಿಸಿದ ಎಂಎಲ್‍ಸಿ ಸುನಿಲ್ ಸುಬ್ರಮಣಿ ಅವರು ಜಿಲ್ಲೆಯ ಏಕೈಕ ಸೈನಿಕ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವದು ಬೇಸರ ಮೂಡಿಸಿದೆ. ಈ ಬಗ್ಗೆ ಈಗಾಗಲೇ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಸಂಸದರು, ಸಂಬಂಧಿಸಿದ ಕೇಂದ್ರ ಸಚಿವರೊಂದಿಗೂ ಚರ್ಚಿಸಲಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳ ಲಿರುವದಾಗಿ ಭರವಸೆಯಿತ್ತರು. ಇದರಂತೆ ಪ್ರತಿಭಟನೆಯನ್ನು ಹಿಂಪಡೆಯ ಲಾಗಿದ್ದು, ಮೆಡಿಕಲ್ ಕಾಲೇಜಿನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕೊಂಡೊಯ್ಯ ಲಾಯಿತು. ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ತನಿಖಾಧಿಕಾರಿ ನೇಮಕ

ಈ ಪ್ರಕರಣದ ತನಿಖಾಧಿಕಾರಿ ಯಾಗಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಅವರನ್ನು ನೇಮಕ ಮಾಡಲಾಗಿದೆ.

‘ಶಕ್ತಿ’ಯೊಂದಿಗೆ ಮಾತನಾಡಿದ ತನಿಖಾಧಿಕಾರಿ ಕ್ಯಾತೆಗೌಡ ಅವರು ಸೋಮವಾರದಿಂದ ಮರಣೋತ್ತರ ಪರೀಕ್ಷಾ ವರದಿ ಸಿಗುವ ಸಾಧ್ಯತೆ ಇದೆ. ಈ ವರದಿಯನ್ನಾಧರಿಸಿ ಬಳಿಕ ತನಿಖೆಯನ್ನು ತೀವ್ರಗೊಳಿಸ ಲಾಗುವದು. ಇಂದು ಪ್ರಾಥಮಿಕ ಹಂತದ ತನಿಖೆ ನಡೆಸಲಾಗು ವದೆಂದು ಮಾಹಿತಿ ಯಿತ್ತರು.

- ಚಿತ್ರ, ಮಾಹಿತಿ : ನಾಗರಾಜ ಶೆಟ್ಟಿ, ಚಂದ್ರಮೋಹನ್, ಲಕ್ಷ್ಮೀಶ್