ಸೋಮವಾರಪೇಟೆ, ಜೂ.23: ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ನೀರುಪಾಲಾಗಿರುವ ಯುವಕನ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆಗೆ ಮಳೆಯೊಂದಿಗೆ ನೀರಿನ ಅಧಿಕ ಹರಿವು ಅಡ್ಡಿಯಾಗಿದೆ.ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮಲ್ಲಳ್ಳಿ ಜಲಪಾತದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕಣ್ಮರೆಯಾಗಿರುವ ಕುಶಾಲನಗರ ಸಮೀಪದ ಸುಂದರನಗರ ನಿವಾಸಿ ನಾಗರಾಜು-ಪರಮೇಶ್ವರಿ ದಂಪತಿ ಪುತ್ರ, ಕುಶಾಲನಗರದ ಕಾಫಿ ಕ್ಯೂರಿಂಗ್ ವಕ್ರ್ಸ್‍ನಲ್ಲಿ ಕಾರ್ಮಿಕನಾಗಿದ್ದ ಮನೋಜ್(24)ನ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ಇಂದು ಪೂರ್ವಾಹ್ನ 11 ಗಂಟೆಯಿಂದ ಪ್ರಾರಂಭವಾಯಿತು.ಬೆಳಗ್ಗೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ ಹಾಗೂ ಸಿಬ್ಬಂದಿಗ ಳೊಂದಿಗೆ ಹುಣಸೂರು, ಗರಗಂದೂರಿನ ಮುಳುಗು ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಜಲಪಾತಕ್ಕೆ ತೆರಳಿ ಮೃತದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆಗೆ ಮುಂದಾದರು.

ಬೆಳಗ್ಗೆ 11 ರಿಂದ ಅಪರಾಹ್ನ 3.30ರವರೆಗೂ ನೀರಿನಲ್ಲಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತದಲ್ಲಿ ನೀರಿನ ಹರಿವು ಅಧಿಕಗೊಂಡಿರುವದರಿಂದ ಮೃತದೇಹ ಕಂಡುಬಂದಿಲ್ಲ. ಬೃಹತ್ ಬಂಡೆಕಲ್ಲುಗಳ ನಡುವೆ ಮನೋಜ್‍ನ ದೇಹ ಸಿಲುಕಿರಬಹುದಾದ ಸಾಧ್ಯತೆಯಿದ್ದು, ನೀರಿನ ಹರಿವು

(ಮೊದಲ ಪುಟದಿಂದ) ಕಡಿಮೆಯಾಗದ ಹೊರತು ಕಾರ್ಯಾಚರಣೆ ನಡೆಸುವದು ಕಷ್ಟಸಾಧ್ಯ ಎಂದು ಮುಳುಗು ತಜ್ಞರು ಅಭಿಪ್ರಾಯಿಸಿ ಕಾರ್ಯಾಚರಣೆಯನ್ನು ತಾ. 24ಕ್ಕೆ (ಇಂದು) ಮುಂದೂಡಿದರು.

ಸುಂದರನಗರದ ನಿವಾಸಿ ಪರಮೇಶ್ವರಿ- ನಾಗರಾಜು ದಂಪತಿಗಳ ಈರ್ವರು ಮಕ್ಕಳಲ್ಲಿ ಮೊದಲಿ ಗನಾಗಿರುವ ಮನೋಜ್ ಕಾಫಿ ಕ್ಯೂರಿಂಗ್ ವಕ್ರ್ಸ್‍ನಲ್ಲಿ ಕೆಲಸ ಮಾಡಿ ಕೊಂಡು ಕುಟುಂಬ ನಿರ್ವಹಿಸುತ್ತಿದ್ದ. ತಾಯಿ ಪರಮೇಶ್ವರಿ ಅವರೂ ಸಹ ಕೂಲಿ ಕೆಲಸ ಮಾಡಿಕೊಂಡಿದ್ದರು. ಮನೋಜ್‍ನ ಸಹೋದರಿಗೆ ಕಳೆದ ವರ್ಷವಷ್ಟೇ ವಿವಾಹವಾಗಿತ್ತು. ತಂದೆ ನಾಗರಾಜು ಅವರು ಕುಟುಂಬದಿಂದ ಬೇರ್ಪಟ್ಟು ಕೆಲ ವರ್ಷಗಳೇ ಕಳೆದಿದ್ದವು.

ನಿನ್ನೆ ದಿನ ಶಾಂತಳ್ಳಿಯ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಸ್ನೇಹಿತನ ಸಂಬಂಧಿಯ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಕುಶಾಲನಗರದಿಂದ ಮೂರು ಬೈಕಿನಲ್ಲಿ ತನ್ನ ಇತರ ಸ್ನೇಹಿತರಾದ ಅರುಣ್, ಅನಿಲ್‍ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಅವರುಗಳೊಂದಿಗೆ ಆಗಮಿಸಿ ಮಧ್ಯಾಹ್ನ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದ.

ಜಲಪಾತದ ತಳಭಾಗದಲ್ಲಿ ಮೊಬೈಲ್‍ನಿಂದ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರಿನೊಳಗೆ ಇಳಿದ ಮನೋಜ್, ಆಕಸ್ಮಿಕವಾಗಿ ಕಾಲು ಜಾರಿ ಮೊಬೈಲ್ ಸಹಿತ ನೀರು ಪಾಲಾಗಿದ್ದ. ಈ ಬಗ್ಗೆ ಮನೋಜ್‍ನ ಸ್ನೇಹಿತ ಅನಿಲ್‍ಕುಮಾರ್ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೋಷಕರ ಆಕ್ರಂದನ: ಕುಟುಂಬಕ್ಕೆ ಏಕಮಾತ್ರ ಮಗನಾಗಿ, ಕುಟುಂಬದ ಆಧಾರಸ್ತಂಭವಾಗಿದ್ದ ಮನೋಜ್‍ನ ದುರಂತ ಅಂತ್ಯ ತಾಯಿ ಪರಮೇಶ್ವರಿ ಅವರಿಗೆ ಸಿಡಿಲಾಘಾತ ದಂತಾಗಿದೆ. ಇಂದು ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಎದೆಯೆತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡ ನೋವು ಕಣ್ಣೀರ ಕೋಡಿ ಯಾಗಿ ಹರಿಯಿತು. ಸಂಬಂಧಿಕರು, ಸ್ನೇಹಿತರು ದುಃಖದ ಮಡುವಲ್ಲಿ ನೋವನುಭವಿ ಸುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲಾಧಿಕಾರಿ ಗಮನ ಹರಿಸಲು ಆಗ್ರಹ: ಮಲ್ಲಳ್ಳಿ ಜಲಪಾತದಲ್ಲಿ ಆಗಾಗ್ಗೆ ದುರಂತಗಳು ಸಂಭವಿಸುತ್ತಿದ್ದು, ಗ್ರಾ.ಪಂ. ಯಿಂದ ಕೆಲವೊಂದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೂ ಸಹ ದುರಂತಗಳು ನಿಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಿ ದುರಂತಗಳು ಸಂಭವಿಸದಂತೆ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರುಗಳು ಒತ್ತಾಯಿಸಿದ್ದಾರೆ.