15 ದಿನಗಳಲ್ಲಿ ಪ್ರಕರಣ ಭೇದಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಚೆಟ್ಟಳ್ಳಿ, ಜೂ. 14: ಕಳೆದ ಎರಡು ದಿನಗಳ ಹಿಂದೆ ಪೊನ್ನತ್‍ಮೊಟ್ಟೆಯ ಸ.ಹಿ.ಪ್ರಾ ಶಾಲೆ, ಆರ್.ಎಸ್. ಚೆಟ್ಟಳ್ಳಿಯಲ್ಲಿ ಕಳ್ಳತನ ಪ್ರಕರಣ, ಮನೆಯಲ್ಲಿ ಚಿನ್ನ ಕಳವು, ಬೈಕ್ ಕಳವು ನಡೆದಿದ್ದು ಪೊಲೀಸ್ ಇಲಾಖೆ 15 ದಿನಗಳೊಳಗಾಗಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸದಿದ್ದರೆ ಚೆಟ್ಟಳ್ಳಿ ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸುವದಾಗಿ ಜನಪರ ಹೋರಾಟ ಸಮಿತಿ ಸಂಚಾಲಕ, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಎಚ್ಚರಿಸಿದ್ದಾರೆ.

ತಾ. 10 ರಂದು ಸ್ಥಳೀಯ ಮಕ್ಕಳು ಶಾಲೆ ವಠಾರದಲ್ಲಿ ಆಟವಾಡಲು ತೆರಳಿದ್ದಾಗ ಶಾಲೆಯ ಕಚೇರಿ ಹಾಗೂ ಕಂಪ್ಯೂಟರ್ ಕೊಠಡಿ ಬೀಗ ಮುರಿದಿರುವದನ್ನು ತಿಳಿದು ಶಾಲಾ ಶಿಕ್ಷಕಿ ಚೈತ್ರರವರಿಗೆ ತಿಳಿಸಿದ್ದಾರೆ. ಶಾಲಾ ಗಾಡ್ರೇಜ್, ಕಂಪ್ಯೂಟರ್ ಕೊಠಡಿಯ ಬಾಗಿಲನ್ನು ಒಡೆದು ಸುಮಾರು 10000.00 ನಷ್ಟವಾಗಿದೆ. ಮಾಹಿತಿ ತಿಳಿದ ತಕ್ಷಣ ಚೆಟ್ಟಳ್ಳಿ ಉಪಠಾಣೆಯ ಎ.ಎಸ್.ಐ ಪೂವಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ ಮೇರೆ ಬೆರಳಚ್ಚು ತಜ್ಞರಿಂದ ಮತ್ತು ಶ್ವಾನ ದಳದವರಿಂದ ಪರಿಶೀಲನೆ ನಡೆಸಿದರು.

ಪೊನ್ನತ್‍ಮೊಟ್ಟೆಯ ಸ.ಹಿ.ಪ್ರಾ. ಶಾಲೆ, ಆರ್.ಎಸ್. ಚೆಟ್ಟಳ್ಳಿಗೆ ಬಲ್ಲಾರಂಡ ಮಣಿ ಉತ್ತಪ್ಪ ಭೇಟಿ ನೀಡಿ ಪರಿಶೀಲಿಸಿ ಈ ಬಗ್ಗೆ ಮಾಹಿತಿ ಪಡೆದರು. ಹಿಂದೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶನೇಶ್ವರ ದೇವಸ್ಥಾನದಲ್ಲಿ ಕಳವು, ಬೈಕ್ ಕಳವು, ಆಟೋ ಸುಟ್ಟ ಪ್ರಕರಣ ಹೀಗೆ ಹಲವು ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾವದೇ ಪ್ರಕರಣ ಭೇದಿಸದೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 15 ದಿನಗಳೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಚೆಟ್ಟಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವದಾಗಿ ಬಲ್ಲಾರಂಡ ಮಣಿ ಉತ್ತಪ್ಪ ಎಚ್ಚರಿಸಿದ್ದಾರೆ.