ಸಿದ್ದಾಪುರ, ಜೂ. 13: ಮಳೆಗಾಲದ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶದಲ್ಲಿದ್ದು, ಮುಂಜಾಗ್ರತೆ ವಹಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಮುಂಚಿತ ಗ್ರಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಳೆ ಹಾನಿಯ ಬಗ್ಗೆ ಚರ್ಚಿಸಿ ಅವರು ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾ.ಪಂ. ಪಿ.ಡಿ.ಓ. ಹಾಗೂ ಗ್ರಾಮ ಲೆಕ್ಕಿಗರು ದಿನನಿತ್ಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಸ್ಪಂದಿಸಬೇಕೆಂದು ಸೂಚಿಸಿದರು. ಅತಿವೃಷ್ಟಿ ಸಂದರ್ಭ ದಿನದ 24 ಗಂಟೆಯೂ ಎಲ್ಲಾ ಅಧಿಕಾರಿಗಳು ತಮ್ಮ ಗ್ರಾಮದಲ್ಲೇ ಇರಬೇಕೆಂದು ಸೂಚಿಸಿದರು.
ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಪತ್ತೆಹಚ್ಚಿ ಅವುಗಳನ್ನು ತೆರವುಗೊಳಿಸಿ, ಆ ಜಾಗದಲ್ಲಿ ನದಿದಡದ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕೆಂದು ಅವರು ಸೂಚಿಸಿದರು. ಮನೆಗಳ ಬಳಿ ಕಾಫಿ ತೋಟಕ್ಕೆ ಸೇರಿದ ಮರಗಳಿದ್ದರೆ ತೆರವುಗೊಳಿಸಲು ಮಾಲೀಕರಿಗೆ ನೋಟೀಸು ನೀಡಬೇಕು ಹಾಗೂ ತೆರವುಗೊಳಿಸದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪಿ.ಡಿ.ಓ. ಅವರಿಗೆ ಸಲಹೆ ನೀಡಿದರು. ಯಾವದೇ ಪ್ರಾಣಹಾನಿಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.
ಗ್ರಾಮ ಲೆಕ್ಕಿಗರಾದ ಅನುಷ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯ ನದಿ ದಡದಲ್ಲಿ ವಾಸವಿರುವ 120 ಕ್ಕೂ ಅಧಿಕ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಪ್ರವಾಹ ಪೀಡಿತ ಜಾಗಗಳ ನಿವಾಸಿಗಳಿಗೆ ನೆಲ್ಲಿ ಹುದಿಕೇರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದ್ದು, ಕಂದಾಯ ಇಲಾಖೆಯಿಂದ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಒತ್ತುವರಿ ಜಾಗದ ಮಾಹಿತಿಯನ್ನು ಕಂದಾಯ ಪರಿವೀಕ್ಷಕರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಎ.ಕೆ. ಹಕ್ಕೀಂ, ಶಶಿ, ಅಧಿಕಾರಿಗಳಾದ ಶಿವಕುಮಾರ್, ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್, ಮುಖಂಡರಾದ ಪಿ.ಸಿ. ಅಚ್ಚಯ್ಯ, ಹೊಸಮನೆ ವಸಂತ್, ಸೇರಿದಂತೆ ಇನ್ನಿತರರು ಇದ್ದರು.
ಇತ್ತೀಚೆಗೆ ಗಾಳಿ-ಮಳೆಗೆ ಮರದ ಕೊಂಬೆ ಬಿದ್ದು ಮೃತಪಟ್ಟ ನೆಲ್ಲಿಹುದಿಕೇರಿಯ ಕಾಫಿ ಬೆಳೆಗಾರ ಪಿ.ಸಿ. ಅಹಮ್ಮದ್ ಕುಟ್ಟಿ ಹಾಜಿ ಅವರ ನಿವಾಸಕ್ಕೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಸಾಂತ್ವನ ಹೇಳಿದರು.