ಮಡಿಕೇರಿ, ಜೂ. 13: ಬೆಳ್ತಂಗಡಿಯ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ತಾ. 15 ರಂದು ಮಡಿಕೇರಿಯಲ್ಲಿ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಜನೆಯ ಮಡಿಕೇರಿ ವಲಯ ಮೇಲ್ವಿಚಾರಕ ಹೆಚ್. ಮುಕುಂದ ಅವರು, ಅಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಗರದ ಕಾವೇರಿ ಹಾಲ್‍ನಲ್ಲಿ ಮೇಳ ನಡೆಯಲಿದ್ದು, ಪೂರ್ವಾಹ್ನ 10 ಗಂಟೆಗೆ ಯೋಜನೆಯ ಕೊಡಗು-ಸುಳ್ಯ ನಿರ್ದೇಶಕ ಯೋಗೀಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಬಾನಂಗಡ ಅರುಣ್, ಮಡಿಕೇರಿ ನಗರ ಠಾಣೆ ಉಪ ನಿರೀಕ್ಷಕ ಷಣ್ಮುಗಂ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇಂದಿನ ಆಧುನಿಕ ಯುಗದಲ್ಲಿ ನಾವು ಸೇವಿಸುವ ಆಹಾರದಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗುತ್ತಿಲ್ಲ. ಇದರಿಂದ ಹಲವಾರು ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದು, ಇಂತಹ ಹಲವಾರು ಕಾಯಿಲೆಗಳನ್ನು ತಡೆಯವ ಶಕ್ತಿ ಸಿರಿಧಾನ್ಯಗಳಿಗೆ ಇದೆ ಎಂದು ಹೇಳಿದರು.
ಆದರೆ ಮಾಹಿತಿ ಕೊರತೆಯಿಂದಾಗಿ ಸಿರಿಧಾನ್ಯಗಳ ಬಳಕೆಯಾಗುತ್ತಿಲ್ಲ ಎಂದು ಹೇಳಿದ ಅವರು, ಗಾತ್ರದಲ್ಲಿ ಚಿಕ್ಕದಾದ ಏಕದಳ ಧಾನ್ಯಗಳಾದ ನವಣೆ, ಸಾವೆ, ಊದಲು, ಹಾರಕ, ಕೊರಲೆ, ಸಜ್ಜೆ, ಜೋಳ, ಬರಗು ಮತ್ತು ರಾಗಿಯನ್ನು ಸಿರಿಧಾನ್ಯಗಳೆಂದು ಕರೆಯಲಾಗುತ್ತದೆ. ನಮ್ಮ ದೇಹಕ್ಕೆ ಬೇಕಾಗುವ ನಾರು, ಕಬ್ಬಿಣ, ಸುಣ್ಣ, ಪಿಷ್ಠ ಇತ್ಯಾದಿಗಳು ಎಲ್ಲಾ ಧಾನ್ಯಗಳಿಗಿಂತ ಹೆಚ್ಚಾಗಿ ಸಿರಿಧಾನ್ಯಗಳಲ್ಲಿ ಲಭ್ಯವಿದ್ದು, ಇವುಗಳನ್ನು ನಿಯಮಿತವಾಗಿ ಸೇವಿಸುವದರಿಂದ ಸಕ್ಕರೆ ಕಾಯಿಲೆ ನಿಯಂತ್ರಿಸಲು ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್‍ನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ಕೊರತೆಯಿಂದ ಕಣ್ಮರೆಯಾದ ಈ ಧಾನ್ಯಗಳ ಬಳಕೆಯನ್ನು ಮತ್ತೆ ಜನರಿಗೆ ಪರಿಚಯಿಸಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸುವ ಉದ್ದೇಶದಿಂದ ಸಿರಿಧಾನ್ಯ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದ್ದು, ಮೇಳದಲ್ಲಿ ಸಿರಿ ಧಾನ್ಯಗಳ ಉಪ್ಪಿಟ್ಟು, ಇಡ್ಲಿ, ಪಲಾವ್, ಬಿಸಿ ಬೇಳೆ ಬಾತ್, ಕೇಸರಿಬಾತ್, ಪಾಯಸ, ಮೊಸರನ್ನ, ಸಜ್ಜೆ ಹಾಲು, ರಾಗಿಹಾಲು, ದೋಸೆ, ಚಕ್ಕುಲಿ, ಬಿರಿಯಾನಿ, ಸಿರಿಧಾನ್ಯ ಬರ್ಫಿ, ಲಾಡು ಹಾಗೂ ಇನ್ನಿತರ ಕರಿದ ತಿಂಡಿಗಳ ಪ್ರದರ್ಶನ, ಮತ್ತು ಸಿರಿಧಾನ್ಯಗಳ ಉತ್ಪನ್ನಗಳು ಇರುತ್ತವೆ. ಅಲ್ಲದೆ ಸಿರಿಧಾನ್ಯಗಳ ಆಹಾರ ತಯಾರಿಕಾ ಪ್ರಾತ್ಯಕ್ಷಿಕೆಯೂ ಇರುತ್ತದೆ ಎಂದು ಹೆಚ್. ಮುಕುಂದ ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಉತ್ಪಾದಿಸುವ ಸಿರಿ ಧಾನ್ಯಗಳನ್ನು ಖರೀದಿಸಿ ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ ಅವುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ಮೇಳದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.