ಸೋಮವಾರಪೇಟೆ, ಜೂ. 13: ಪಟ್ಟಣದಿಂದ ಮಸಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಒಂದು ಬದಿ ಕುಸಿಯುತ್ತಿದ್ದು, ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.

ಮಳೆಯ ಪರಿಣಾಮ ಮಸಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಸುಮಾರು 25 ಮೀಟರ್‍ನಷ್ಟು ಮಣ್ಣು ಕುಸಿದಿದೆ. ಮಳೆ ಮುಂದುವರೆದಲ್ಲಿ ಈ ರಸ್ತೆ ಸಂಪರ್ಕ ಕಡಿದುಕೊಳ್ಳಲಿದೆ. ಈ ಹಿನ್ನೆಲೆ ಮಸಗೋಡು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ರಸ್ತೆಯನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದ ಪ್ರಮುಖ ಸಂಪರ್ಕ ರಸ್ತೆಯ ಬಗ್ಗೆ ತುರ್ತು ಗಮನ ಹರಿಸಬೇಕೆಂದು ಮಸಗೋಡು ಗ್ರಾಮದ ಅಧ್ಯಕ್ಷ ಎಸ್.ಡಿ. ಗಣೇಶ್, ಕಾರ್ಯದರ್ಶಿ ಬಿ.ಪಿ. ಸತೀಶ್, ಪದಾಧಿಕಾರಿಗಳಾದ ಎಂ.ಎಸ್. ದಿನೇಶ್, ಎಂ.ಪಿ. ವೀರಪ್ಪ, ಎಂ.ಆರ್. ಕುಶಾಲಪ್ಪ, ಕಾಂತ ಮತ್ತಿತರರು ಆಗ್ರಹಿಸಿದ್ದಾರೆ.