ಮಡಿಕೇರಿ, ಜೂ. 13: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2017-18 ನೇ ಸಾಲಿನ ಯುವ ವಿಜ್ಞಾನಿಗಳ ಪ್ರಶಸ್ತಿಗಾಗಿ ಪ್ರಸ್ತುತ 9 ರಿಂದ 12 (ಪಿಯುಸಿ) ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ವಿಜ್ಞಾನ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ. ಇಂತಹ ವಿಜ್ಞಾನ ಚಟುವಟಿಕೆಗಳು/ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವದು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ: ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ಭರ್ತಿ ಮಾಡಿ ಅದರೊಂದಿಗೆ 6 ನೇ ತರಗತಿಯಿಂದ (ಉದಾಹರಣೆಗೆ ಮಕ್ಕಳ ವಿಜ್ಞಾನ ಸಮಾವೇಶ, ಗಣಿತ, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ರಸಪ್ರಶ್ನೆ, ವಿಜ್ಞಾನ ನಾಟಕ, ವಿಜ್ಞಾನಗೋಷ್ಠಿ, ಬಾಲವಿಜ್ಞಾನಿ ಪ್ರಶಸ್ತಿ, ಮ್ಯಾಥಮೆಟಿಕ್ಸ್ ಒಲಂಪಿಯಾಡ್, ಇನ್ಸ್‍ಪೈರ್ ಅವಾರ್ಡ್, ಪ್ರತಿಭಾ ಕಾರಂಜಿ) ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಚಟುವಟಿಕೆಗಳು/ ಸ್ಪರ್ಧೆಯಲ್ಲಿ ಭಾಗವಹಿಸಿ ಪಡೆದಿರುವ ಪ್ರಶಸ್ತಿ, ಬಹುಮಾನ, ಪ್ರಶಂಸನಾ ಪತ್ರ, ಸನ್ಮಾನ ಪತ್ರ ಪತ್ರ, 2 ಭಾವಚಿತ್ರಗಳೊಂದಿಗೆ ಶಾಲಾ-ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿದ ಜೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಮಡಿಕೇರಿ ಹಾಗೂ ಜಿಲ್ಲಾ ಹಂತದಲ್ಲಿ ಸಲ್ಲಿಸುವ ಅರ್ಜಿಯ ಒಂದು ಪ್ರತಿಯನ್ನು (ಎಲ್ಲಾ ದಾಖಲಾತಿಗಳೊಂದಿಗೆ) ಅಂಚೆ/ಕೊರಿಯರ್ ಮೂಲಕ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, (ಯುವ ವಿಜ್ಞಾನಿ ವಿಭಾಗ), ವಿಜ್ಞಾನ ಭವನ, ನಂ: 24/2, 21 ನೇ ಮುಖ್ಯರಸ್ತೆ, ಬನಶಂಕರಿ 2 ನೇ ಹಂತ, ಬೆಂಗಳೂರು-560070: ಇವರಿಗೆ ಜೂನ್ 18 ರೊಳಗಾಗಿ ಅರ್ಜಿಯನ್ನು ಸಲ್ಲಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಯುವ ವಿಜ್ಞಾನಿ ಪ್ರಶಸ್ತಿಯ ನಿಗದಿತ ಅರ್ಜಿಯನ್ನು ತಿತಿತಿ.ಞಡಿvಠಿ.oಡಿg ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಸಲ್ಲಿಸಬಹುದು.

ಪ್ರಶಸ್ತಿ ವಿವರ: ಜಿಲ್ಲಾಮಟ್ಟದಲ್ಲಿ ಆಯ್ಕೆಗೊಳ್ಳುವ ವಿದ್ಯಾರ್ಥಿಗಳಿಗೆ ಪ್ರಥಮ ರೂ. 5 ಸಾವಿರ, ದ್ವಿತೀಯ ರೂ.3 ಸಾವಿರ ಹಾಗೂ ತೃತೀಯ ರೂ. 2 ಸಾವಿರ ಹಾಗೂ ರಾಜ್ಯಮಟ್ಟದಲ್ಲಿ ಆಯ್ಕೆಗೊಳ್ಳುವ 4 ಯುವ ವಿಜ್ಞಾನಿಗಳಿಗೆ ತಲಾ ರೂ. 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವದು. ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ (ಮೊ.94485 88352), ದೇವನಾಯಕ್, ವಿಜ್ಞಾನ ವಿಷಯ ಪರಿವೀಕ್ಷಕರು, ಡಿಡಿಪಿಐ ಕಚೇರಿ, ಮಡಿಕೇರಿ (ಮೊ.94493 19059) ಅಥವಾ ರಾಜ್ಯ ಸಂಯೋಜಕ ಹೆಚ್.ಜಿ. ಹುದ್ದಾರ್ (ಮೊ. 94486 24070) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.