ಗುಡ್ಡೆಹೊಸೂರು, ಜೂ. 13: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ರ್ಯಾಫ್ಟಿಂಗ್ ಉದ್ದಿಮೆ ನಡೆಯುತ್ತಿತ್ತು. ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಸಾಹಸಿ ಕ್ರೀಡೆ ನಡೆದುಕೊಂಡು ಹೋಗುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಗೆ ಸರಕಾರಿ ಕೆಲಸ ಸಿಗುವದು ಕಷ್ಟ. ಈ ಸಂದರ್ಭ ತಮ್ಮ ಸ್ವಂತ ಶ್ರಮದಲ್ಲಿ ಹೊಲಗದ್ದೆ ಹಾಗೂ ಕಾಫಿ ತೋಟಗಳಲ್ಲಿ ಸಂಪಾದನೆ ಮಾಡಿದ ಹಣವನ್ನು ಈ ಉದ್ದಿಮೆಗೆ ಬಳಸಿ ಕೈ ಸುಟ್ಟುಕೊಂಡಿದ್ದಾರೆ. ತೆಪ್ಪದಕಂಡಿ ಮತ್ತು ದುಬಾರೆ ಹಾಗೂ ಗುಡ್ಡೆಹೊಸೂರಿನ ಇತರ ಭಾಗಗಳಿಗೆ ರ್ಯಾಫ್ಟಿಂಗ್‍ಗಾಗಿ ಹೊರ ಜಿಲ್ಲೆಗಳಿಂದ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲಾಡಳಿತದ ವಿರುದ್ಧ ಅಸಮಾದಾನದ ಮಾತುಗಳು ಕೇಳಿಬರುತ್ತಿವೆ. ಕೊಡಗಿಗೆ ಮಳೆಗಾಲದಲ್ಲಿ ರ್ಯಾಫ್ಟಿಂಗ್‍ಗೋಸ್ಕರ ಪ್ರವಾಸಿಗರು ಬರುತ್ತಾರೆ. ಆದರೆ ಇದೀಗ ರ್ಯಾಫ್ಟಿಂಗ್ ಇಲ್ಲದೆ ಬೇಸರದಿಂದ ಹಿಂತಿರುಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಈ ವಿಭಾಗದಲ್ಲಿ ನೀರುದ್ಯೋಗಿ ಯುವಕರು ಇದನ್ನೇ ನಂಬಿ ತಮ್ಮ ಕೈಯಲ್ಲಿದ್ದ ಬಂಡವಾಳವನ್ನು ಇದಕ್ಕೆ ಸುರಿದರು. ಕೆಲವರು ಮನೆಯಲ್ಲಿದ್ದ ಚಿನ್ನವನ್ನು ಅಡವಿಟ್ಟು ರ್ಯಾಫ್ಟ್ ಖರೀದಿಸಿದರು. ಆದರೆ ಇವರ ಬದುಕು ಇದೀಗ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ಈ ಉದ್ದಿಮೆದಾರರ ಹಿತದೃಷ್ಟಿಯಿಂದ ಜಲ ಕ್ರೀಡೆ ಪ್ರಾರಂಭವಾಗಲಿ ಎಂದು ಗುಡ್ಡೆಹೊಸೂರು ವಿಭಾಗದಲ್ಲಿ ಉದ್ದಿಮೆ ನಡೆಸುವ ಯುವಕರು ಒತ್ತಾಯಿಸಿದ್ದಾರೆ. ಇದನ್ನೇ ವೃತ್ತಿಯಾಗಿ ನಂಬಿದ್ದ ಕಬ್ಬಿನಗದ್ದೆ, ಮಾವಿನಹಳ್ಳ, ದುಬಾರೆ ಬಸವನಹಳ್ಳಿ ಮುಂತಾದ ಹಾಡಿಯ ವಿದ್ಯಾವಂತ ಯುವಕರು ಕೆಲಸವಿಲ್ಲದೆ ಕಳೆದ 4 ತಿಂಗಳುಗಳಿಂದ ಅಲೆಯುತ್ತಿದ್ದಾರೆ. - ಗಣೇಶ್ ಕುಡೆಕ್ಕಲ್