ಒಡೆಯನಪುರ, ಜೂ. 13: ಆದಿ ದ್ರಾವಿಡ ಸಮಾಜದ ಬಾಂಧವರು ದುಶ್ಟಟಗಳಿಗೆ ಬಲಿಯಾಗದೆ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಾಗಿ ಬೆಳವಣಿಗೆ ಸಾಧಿಸಬೇಕು ಎಂದು ಹೊಸೂರು ಗ್ರಾ.ಪಂ. ಉಪಾಧ್ಯಕ್ಷ ಎಸ್.ಎಸ್. ಬಸವಗೌಡ ಅಭಿಪ್ರಾಯಪಟ್ಟರು. ಸಮೀಪದ ಕೊಡಗು-ಹಾಸನ ಗಡಿ ಭಾಗದಲ್ಲಿರುವ ಕಳಲೆ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಹಾಸನ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಈಚಲಬೀಡು ಶಾಖೆ ವತಿಯಿಂದ ಕೊಡಗು ಮತ್ತು ಹಾಸನ ಭಾಗದ ದ್ರಾವಿಡ ಸಮಾಜದ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಎಂ.ಶೀನಾ ಮಾಸ್ತಿಕಟ್ಟೆ ಮಾತನಾಡಿ, ಆದಿ ದ್ರಾವಿಡ ಜನಾಂಗ ಪುರಾತನ ಜನಾಂಗವಾಗಿದ್ದು, ಹಲವು ವರ್ಷಗಳಿಂದ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆ ಜಾತಿ ದೃಢೀಕರಣ ಪತ್ರದಲ್ಲಿ ಆದಿ ದ್ರಾವಿಡ ಬದಲಾಗಿ ಇತರ ಜನಾಂಗದ ದೃಢೀಕರಣ ಪತ್ರ ನೀಡುತ್ತಿರುವದರಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಜಾಗೃತಿ ಕಾರ್ಯಕ್ರಮದಲ್ಲಿ ರಾಜ್ಯ ಆದಿ ದ್ರಾವಿಡ ಸಮಾಜದ ಅಧ್ಯಕ್ಷ ಲೋಕನಾಥ್ ಮೂಡಬಿದ್ರೆ ಮಾತನಾಡಿ, ಆದಿ ದ್ರಾವಿಡ ಜನಾಂಗ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಪ್ರತಿ ಯೊಂದು ಗ್ರಾಮ ಮಟ್ಟದಲ್ಲಿ ಜನಾಂಗದ ಬಾಂಧವರಿಗಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಯಸಳೂರು ಪೊಲೀಸ್ ಠಾಣಾಧಿಕಾರಿ ದಯಾನಂದ್, ಪತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ ಮಾತನಾಡಿದರು. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗುರುರಾಜ್, ಜಿ. ಕುಶಾಲಪ್ಪ, ಅಣ್ಣು ಮರ್ನಾಡ್, ಸೋಮಶೇಖರ್ ಮುಂತಾದವರು ಇದ್ದರು.