ಮಡಿಕೇರಿ, ಜೂ. 11 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆಯು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನ್ಯಾಯಾಧೀಶರು ತಮ್ಮ ತಮ್ಮ ಇಲಾಖೆಗಳ ವತಿಯಿಂದ ಆಯೋಜಿಸುವ ಕಾರ್ಯಕ್ರಮ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜೊತೆಗೂಡಿ ಏರ್ಪಡಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ಮಾಡಿದರು.
ತಾ. 23 ರಿಂದ ಜುಲೈ 4 ರವರೆಗೆ ಕಾನೂನು ಸಾಕ್ಷರತಾ ಆಂದೋಲನ ನಡೆಯಲಿದೆ. ಜುಲೈ ತಿಂಗಳಲ್ಲಿ ಮಾದಕ ವಸ್ತು ದುಷ್ಪರಿಣಾಮಗಳ ಜಾಗೃತಿ ಮೂಡಿಸುವ ಬಗ್ಗೆ ಕಾರ್ಯಕ್ರಮ ಆಯೋಜಿಸಬೇಕಿದೆ. ಮಾನವ ಕಳ್ಳ ಸಾಗಾಣಿಕೆ ನಿಯಂತ್ರಣ ಹಾಗೂ ಭ್ರೂಣ ಹತ್ಯೆ ತಡೆ ಬಗ್ಗೆ ವಿಶೇಷ ಕಾರ್ಯಕ್ರಮ ಆಯೋಜಿಸಬೇಕಿದೆ. ಹಾಗೆಯೇ ಬುಡಕಟ್ಟು ಜನರ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕಿದ್ದು, ಈ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೈಜೋಡಿಸುವಂತೆ ಹೇಳಿದರು. ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮ ಜುಲೈ 14 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯಲಿದ್ದು, ಲೋಕಾ ಅದಾಲತ್‍ನ್ನು ಪರಿಣಾಮಕಾರಿಯಾಗಿ ಅಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಕಾರ್ಮಿಕರಿಗೆ ಇರುವ ಕಾನೂನುಗಳು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ತಡೆಯುವದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಶಾಲೆಗೆ ಸೇರ್ಪಡೆ ಮಾಡುವದು, ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸಬೇಕಿದೆ ಎಂದು ನ್ಯಾಯಾಧೀಶರು ವಿವರಿಸಿದರು. ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ. ಪವನೇಶ್ ಮಾತನಾಡಿ, ಜಿಲ್ಲಾಸ್ಪತ್ರೆಯ ವೈದ್ಯರು ಪ್ರತಿವಾರ ಜೈಲಿಗೆ ಹಾಗೂ ಬಾಲಕರ ಮತ್ತು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸಲಹೆ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಮಾತನಾಡಿ, ದೇಶದಲ್ಲಿನ ಪ್ರತಿಯೊಬ್ಬರಿಗೂ ಸಂವಿಧಾನಾತ್ಮಕವಾಗಿ ಹಲವು ಸೌಲಭ್ಯಗಳಿದ್ದು, ಇವುಗಳನ್ನು ಪಡೆಯಲು ಮುಂದಾಗಬೇಕು. ಈ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ನೂರುನ್ನಿಸ ಮಾತನಾಡಿ, ಸಾರ್ವಜನಿಕರಿಗಾಗಿ ಹತ್ತು ಹಲವು ಸೌಲಭ್ಯಗಳಿವೆ. ಆದರೆ ಎಷ್ಟರ ಮಟ್ಟಿಗೆ ತಲಪುತ್ತಿವೆ ಎಂಬದು ಬಹುಮುಖ್ಯ ಎಂದು ಅವರು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಜುಲೈ ತಿಂಗಳಲ್ಲಿ ಹೆಲ್ಮೆಟ್ ಕಡ್ಡಾಯ ಬಗ್ಗೆ ಜಾಥಾ ಏರ್ಪಡಿಸಲಾಗುವದು ಎಂದು ತಿಳಿಸಿದರು. ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಕುಗ್ರಾಮಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಕೈಜೋಡಿಸಿ ಕಾರ್ಯಕ್ರಮ ಆಯೋಜಿಸಲಾಗುವದು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕವನ್, ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ, ಶ್ರೀಧರ ನಾಯರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಜಿಲ್ಲಾ ಸರ್ಜನ್ ಡಾ. ಜಗದೀಶ್, ಪೌರಾಯುಕ್ತೆ ಬಿ. ಶುಭಾ, ಲೋಕೋಪಯೋಗಿ ಇಲಾಖೆಯ ಎಇಇ ನಟೇಶ್, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ಆಶಾ, ಐಟಿಡಿಪಿ ಇಲಾಖೆಯ ರಂಗನಾಥ್, ಕಾರ್ಮಿಕ ಇಲಾಖೆಯ ಸಿರಜ್ ಅಹ್ಮದ್ ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಕಾರ್ಯಕ್ರಮ ಆಯೋಜನೆ ಸಂಬಂಧ ಹಲವು ಮಾಹಿತಿ ನೀಡಿದರು.