ಸೋಮವಾರಪೇಟೆ, ಜೂ. 11 : ಈ ಭಾಗದ ವಿದ್ಯಾದಾನಿ, ಹರಪಳ್ಳಿ ರವೀಂದ್ರ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರವೀಂದ್ರ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳಿಗೆ ತಮ್ಮ ಸ್ವಂತ ವಾಹನದಲ್ಲಿ ತೆರಳಿ ಅಲ್ಲಿನ ಮಕ್ಕಳಿಗೆ ಪ್ರತಿ ವರ್ಷ ಪುಸ್ತಕಗಳನ್ನು ವಿತರಿಸುತ್ತಾ ಬರುತ್ತಿದ್ದು, ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಇಲ್ಲಿನ ತ್ರಿಷಾ ಚಿತ್ರ ಮಂದಿರದಲ್ಲಿ ಉಚಿತ ಪುಸ್ತಕ ವಿತರಿಸಿದರು. ಸಾವಿರಾರು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ಪುಸ್ತಕಗಳನ್ನು ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಹರಪಳ್ಳಿ ರವೀಂದ್ರ ಸಮಾಜದಲ್ಲಿ ಯಾವೊಬ್ಬ ಮಗುವೂ ವಿದ್ಯಾಭ್ಯಾಸದಿಂದ ಹಿಂದುಳಿಯಬಾರದು ಎಂಬ ಸದುದ್ದೇಶದಿಂದ ಈ ಕಾರ್ಯವನ್ನು ಮಾಡುತ್ತಿರುವದಾಗಿ ತಿಳಿಸಿದರು.
ಗ್ರಾಮೀಣ ಭಾಗದಲ್ಲಿರುವ ಬಡ ಮಂದಿ ಇಂದಿಗೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡತನದಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಕನಸು ಹೊಂದಿದ್ದಾರೆ. ತಾನೂ ಸಹ ಇಂತಹದೇ ಸಂಕಷ್ಟವನ್ನು ಅನುಭವಿಸಿದ್ದು, ಬಡ ಮಕ್ಕಳ ಪೋಷಕರಿಗೆ ಕೊಂಚ ನೆರವಾಗುವ ದೃಷ್ಟಿಯಿಂದ ಪುಸ್ತಕ ವಿತರಿಸುತ್ತಿದ್ದೇನೆ ಎಂದರು.
ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ, ಎಎಸ್‍ಐ ರವೀಂದ್ರನಾಥ್, ಹರಪಳ್ಳಿ ರವೀಂದ್ರ ಅವರ ಕುಟುಂಬ ಸದಸ್ಯರಾದ ಅಚಲ್ ರವೀಂದ್ರ, ಜಲ, ವೆಂಕಟೇಶ್, ಜಗದೀಶ್, ಸುಷ್ಮಾ ಜಗದೀಶ್, ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ತೋಳೂರುಶೆಟ್ಟಳ್ಳಿ ಘಟಕದ ಅಧ್ಯಕ್ಷ ಶಿವಪ್ಪ, ಪ್ರಕಾಶ್, ರವಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾರೀ ಮಳೆಯ ನಡುವೆಯೂ ವಿದ್ಯಾರ್ಥಿಗಳು ಹಾಗೂ ಪೋಷಕರು ಸರತಿ ಸಾಲಿನಲ್ಲಿ ನಿಂತು ಪುಸ್ತಕಗಳನ್ನು ಸ್ವೀಕರಿಸಿದರು. ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಸಾಲನ್ನು ನಿಯಂತ್ರಿಸಿದರು.