ವೀರಾಜಪೇಟೆ, ಜೂ. 10: ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕೇತ್ರದ ಚುನಾವಣೆಯಲ್ಲಿ ಬಹುತೇಕ ಪದವೀಧರ ಮತದಾರರು ಮತದಾನದಿಂದ ವಂಚಿತರಾಗಿದ್ದಾರೆ. ಮತ ಚಲಾವಣೆಗಾಗಿ ಬಂದವರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಮನೆಗೆ ಹಿಂತಿರುಗಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ತಾಲೂಕು ಕಚೇರಿಯ ಚುನಾವಣಾ ಸಿಬ್ಬಂದಿಯನ್ನು ಕೂಡಲೇ ಅಮಾನತು ಪಡಿಸುವಂತೆ ರಾಜ್ಯದ ಚುನಾವಣಾ ಆಯೋಗಕ್ಕೆ ಸಾಕ್ಷ್ಯಾಧಾರ ಸಮೇತವಾಗಿ ತಕ್ಷಣ ದೂರು ನೀಡಲಾಗುವದು ಎಂದು ವೀರಾಜಪೇಟೆ ವಿಧಾನಸಭಾ ಕೇತ್ರದ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಹೇಳಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಪದವೀಧರ ಶಿಕ್ಷಕರ ಕೇತ್ರದ ಮತದಾರರ ಪಟ್ಟಿಯಲ್ಲಿ 415 ಶಿಕ್ಷಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಕೇವಲ 359 ಮತದಾರರಿದ್ದಾರೆ. ಇದು ಹೇಗೆ ಸಾಧ್ಯ. ಪದವೀಧರ ಕೇತ್ರಕ್ಕೆ ಪದವೀಧರ ಶಿಕ್ಷಕರು ಸೇರಿದಂತೆ ಉಳಿದ ಕೇತ್ರದಲ್ಲಿರುವ ಪದವೀಧರರು ಸೇರ್ಪಡೆಗೊಳ್ಳಬೇಕು. ಬಹುತೇಕ ಪದವೀಧರರು ಚುನಾವಣಾ ಕಚೇರಿಗೆ ಅರ್ಹ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದರೂ ಮನದಾನದಿಂದ ವಂಚಿತರಾಗಿರುವದಕ್ಕೆ ಮತದಾನ ಪಟ್ಟಿ ತಯಾರಿಸಿದ ಚುನಾವಣಾ ಸಿಬ್ಬಂದಿಗಳ ನಿರಾಸಕ್ತಿಯೇ ಕಾರಣವಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಮತದಾರರನ್ನು ನೋಂದಣಿ ಮಾಡಿದರೆ ಬಿಜೆಪಿ ಹೆಚ್ಚು ಮತಗಳಿಸುತ್ತದೆ ಎಂಬ ಉದ್ದೇಶದಿಂದ ಚುನಾವಣಾ ಕಚೇರಿಯಲ್ಲಿರುವ ಸಿಬ್ಬಂದಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ಮತದಾನದಿಂದ ವಂಚಿತರಾದವರು ನನಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಕರ್ತವ್ಯಲೋಪ ಎಸಗಿದ ಸಿಬ್ಬಂದಿಗಳನ್ನು ತಕ್ಷಣ ಅಮಾನತು ಪಡಿಸಬೇಕು ಎಂದು ಅವರು ಒತ್ತಾಯಿಸಿದರು.
.