ಆಲೂರು-ಸಿದ್ದಾಪುರ, ಜೂ. 10: ಪಟ್ಟಣ, ನಗರ ಮತ್ತು ಪ್ರದೇಶಗಳಲ್ಲಿಂದು ಖಾಸಗಿ ಶಾಲೆಗಳು ನಾಯಿಕೊಡೆಯಂತೆ ಆಕ್ರಮಿಸುತ್ತಿರುವ ಭರದಲ್ಲಿ ಒಂದು ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಜ್ಞಾನಾರ್ಜನೆಯ ದೇಗುಲವಾಗಿದ್ದ ಸರಕಾರಿ ಶಾಲೆಗಳು ಅವನತಿಯ ಹಾದಿ ಹಿಡಿದಿವೆ. ಸರಕಾರ ಮತ್ತು ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳ ಹಾಜರಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವದರ ಜೊತೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಆದರೆ ಪೋಷಕರಲ್ಲಿ ಖಾಸಗಿ ಶಾಲೆಗಳೆಂಬ ಪ್ರತಿಷ್ಠೆಯಿಂದ ತಮ್ಮ ಮಕ್ಕಳನ್ನು ಅಧಿಕ ಡೊನೆಶನ್ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವದ್ದರಿಂದ ಸರಕಾರಿ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ.
ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡಕೊಳತ್ತೂರು ಗ್ರಾಮದಲ್ಲಿ 1971 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು. 1 ರಿಂದ 5ನೇ ತರಗತಿಯ ತನಕ ಇರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2000 ನೇಯ ಇಸವಿ ತನಕ ಪ್ರತಿ ವರ್ಷದ ಶೈಕ್ಷಣಿಕ ಸಾಲಿನಲ್ಲಿ 90 ವಿದ್ಯಾರ್ಥಿಗಳಿರುತ್ತಿದ್ದರು. ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ, ಇಲ್ಲಿ ಶಿಕ್ಷಣ ಪಡೆದ ಹಿಂದಿನ ವಿದ್ಯಾರ್ಥಿಗಳಿಂದು ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ 2004 ರಿಂದ ದೊಡ್ಡಕೊಳತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಕಮ್ಮಿಯಾಗತೊಡಗಿತು. 2006 ರವರೆಗೆ ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು ಆದರೆ ಆಗ ಈ ಶಾಲೆಯಲ್ಲಿ ಕೇವಲ 9 ಮಂದಿ ವಿದ್ಯಾರ್ಥಿಗಳಿದ್ದರು. ಬಳಿಕ ಶಿಕ್ಷಣ ಇಲಾಖೆ ಈ ಶಾಲೆಯನ್ನು ಏಕೋಪಧ್ಯಾಯ ಶಾಲೆಯಾಗಿ ಘೋಷಣೆ ಮಾಡಿತ್ತು. 2007 ರಿಂದ 2009 ಶೈಕ್ಷಣಿಕ ಸಾಲಿನಲ್ಲಿ 2 ವರ್ಷ ಈ ಶಾಲೆಯಲ್ಲಿ ಕೇವಲ 3 ವಿದ್ಯಾರ್ಥಿಗಳಿದ್ದ ಹಿನ್ನೆಲೆ ಈ ಶಾಲೆಯನ್ನು ಮುಚ್ಚಲಾಗಿತ್ತು. 2010 ರಿಂದ ಮತ್ತೆ ಈ ಶಾಲೆಯನ್ನು ಪುನರಾರಂಭ ಮಾಡಲಾಗಿದೆ. 2011 ರಿಂದ 2017 ರವರೆಗೆ ಶಾಲೆಯಲ್ಲಿ 5 ಮಂದಿ ವಿದ್ಯಾರ್ಥಿಗಳಿದ್ದರು. 2017 ರಿಂದ ಈಗ 2018ನೇ ಶೈಕ್ಷಣಿಕ ಶಾಲೆಯಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳಿದ್ದಾರೆ. 1 ಮತ್ತು 2ನೇ ತರಗತಿಯಲ್ಲಿ ಯಾವದೇ ಒಬ್ಬ ವಿದ್ಯಾರ್ಥಿಗಳಿಲ್ಲ, 3ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿನಿ ಸೇರಿದಂತೆ 4 ಮತ್ತು 5ನೇ ತರಗತಿಗೆ ತಲಾ ಇಬ್ಬರು ವಿದ್ಯಾರ್ಥಿನಿಯರಿದ್ದಾರೆ. 2018ನೇ ಶೈಕ್ಷಣಿಕ ಸಾಲಿನಲ್ಲಿ 6 ಮಂದಿಯೂ ಬಾಲಕಿಯರಾಗಿರುವದು ವಿಶೇಷವಾಗಿದೆ.
ಕೇವಲ 6 ಮಂದಿ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಸೌಲಭ್ಯವಿದೆ, ಇದರ ಜೊತೆಯಲ್ಲಿ ನಲಿಕಲಿ ವಿಶೇóಷ ತರಗತಿಯ ವ್ಯವಸ್ಥೆಯೂ ಸಹ ಇದೆ. ಆದರೆ ಶಾಲೆಯಲ್ಲಿ ಹಾಜರಾತಿ ಪ್ರಮಾಣ ಕಮ್ಮಿಯಾಗುತ್ತಿರುವದ್ದರಿಂದ ಈ ಶಾಲೆಯ ವಿದ್ಯಾರ್ಥಿಗಳನ್ನು ಪಕ್ಕದ ದುಂಡಳ್ಳಿ ಅಥವಾ ತ್ಯಾಗರಾಜ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಳಿಸಿದರೆ ಒಳಿತಾಗುತ್ತದೆ ಎಂಬದು ಈ ಶಾಲೆಯ ಶಿಕ್ಷಕರ ಅಭಿಪ್ರಾಯವಾಗಿದೆ.
- ದಿನೇಶ್ ಮಾಲಂಬಿ