ಮಡಿಕೇರಿ ಜೂ. 10: ಕೊಡಗು ಜಿಲ್ಲೆಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸರಕಾರದ ಸಿಗ ಬೇಕಾದ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಗರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ನಗರ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕದಡಿ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಬೀದಿ ಬದಿ ವ್ಯಾಪಾರಿಗಳಿಗೆ ವಸತಿ, ಕುಡಿಯುವ ನೀರು, ಗೋದಾಮು, ಶೌಚಾಲಯ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಜಾರಿಗೆ ತಂದಿರುವ ಸಮೃದ್ಧಿ ಯೋಜನೆಯಡಿ ಬೀದಿ ಬದಿಯ ಮಹಿಳಾ ವ್ಯಾಪಾರಿಗಳಿಗೆ ಪುನರ್ವಸತಿ ಯೋಜನೆಯಡಿ ರೂ. 10 ಸಾವಿರಗಳ ಸಹಾಯಧನ ವಿತರಿಸಬೇಕು.
ನಗರಸಭೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ (ಡೇ-ನಲ್ಮ್)ಯಡಿ ಟೆಂಡರ್ ಇಲ್ಲದೆಯೇ ಶೇ. 20 ರಷ್ಟು ಮಳಿಗೆಗಳನ್ನು ವಿತರಿಸಬೇಕು.
ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ವ್ಯಾಪ್ತಿಯಲ್ಲಿ ಟೌನ್ ವೆಂಡಿಂಗ್ ಕಮಿಟಿಯನ್ನು ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಿಗಳು ಸುಮಾರು 40-50 ವರ್ಷಗಳಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇಂದಿನ ದುಬಾರಿ ದಿನಗಳಲ್ಲಿ ಇವರು ಜೀವನ ಸಾಗಿಸುವದು ಕಷ್ಟ ಸಾಧ್ಯವಾಗಿದ್ದು, ಈ ಹಿನ್ನೆಲೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿ ಅದರ ಸವಲತ್ತು ಗಳನ್ನು ಒದಗಿಸುವಂತಾಗಬೇಕು ಎಂದು ಅವರುಗಳು ತಿಳಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ಜಗದೀಶ್ ಹಾಗೂ ಮಾಧ್ಯಮ ಸಲಹೆಗಾರ ಕೆ.ಟಿ. ಶ್ರೀನಿವಾಸ್ ಅವರುಗಳು, ಕೊಡಗು ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಲ್ಲಿ ಮಹಿಳೆಯರೇ ಅಧಿಕವಿದ್ದು, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ಇವರಿಗಾಗಿ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು.
ಅಲ್ಲದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬೆಳಿಗ್ಗೆ 8 ರಿಂದ ರಾತ್ರಿ 11 ಗಂಟೆವರೆಗೆ ವ್ಯಾಪಾರ ನಡೆಸಲು ಪಂಚಾಯಿತಿ ವತಿಯಿಂದ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಸರಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಿಗುವ ಸವಲತ್ತುಗಳಾದ ಪರಿಕರ, ಯಂತ್ರೋಪಕರಣಗಳು, ಅಳತೆ ಮಾಪನಗಳನ್ನು ಒದಗಿಸಿಕೊಡಲು ಪಟ್ಟಣ ಪಂಚಾಯಿತಿ, ನಗರಸಭೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದೂ ಆಗ್ರಹಿಸಿದರು.
ಇದೇ ಸಂದರ್ಭ ಬೀದಿ ಬದಿ ವ್ಯಾಪಾರಿಗಳು ಕೂಡಾ ಕೊಡಗಿನ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರುಗಳು, ವ್ಯಾಪಾರಿಗಳು ವ್ಯಾಪಾರ ಮಾಡಿ ಉಳಿಕೆಯಾದ ಹಣ್ಣು, ತರಕಾರಿ ಮುಂತಾದವುಗಳನ್ನು ಅದಕ್ಕಾಗಿ ಮೀಸಲಿಟ್ಟಿರುವ ಕಸದ ತೊಟ್ಟಿಗಳಲ್ಲೇ ಸುರಿಯುವ ಮೂಲಕ ಸಹಕರಿಸಬೇಕು ಮತ್ತು ಪ್ಲಾಸಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಮೂರು ತಾಲೂಕು ಹಾಗೂ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಯನ್ನು ರಚಿಸುವದ ರೊಂದಿಗೆ ಶೀಘ್ರದಲ್ಲೇ ಬೀದಿ ಬದಿ ವ್ಯಾಪಾರಿಗಳ ಜಿಲ್ಲಾಮಟ್ಟದ ಸಮಾವೇಶ ಆಯೋಜಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವದು ಎಂದು ಅವರುಗಳು ತಿಳಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆರ್. ಸತೀಶ್, ಸಹ ಕಾರ್ಯದರ್ಶಿ ಮಂಜು ಹಾಗೂ ಜಿಲ್ಲಾ ಉಸ್ತುವಾರಿ ಕೆ.ರವಿ ಉಪಸ್ಥಿತರಿದ್ದರು.