ಸೋಮವಾರಪೇಟೆ, ಜೂ. 9: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಐಪಿಡಿಎಸ್ ಯೋಜನೆಯನ್ನು ಇನ್ನೂ ಪ್ರಾರಂಭಗೊಳಿಸದಿರುವ ಸೆಸ್ಕ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಇಲ್ಲಿನ ಉಪ ವಿಭಾಗ ಕಛೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಈ ವಿಷಯವನ್ನು ಪ್ರಸ್ತಾಪಿಸಿ ಅಧಿಕಾರಿಗಳಿಂದ ಮಾಹಿತಿ ಕೇಳಿದರು.

ಪಟ್ಟಣದಲ್ಲಿ ವಿದ್ಯುತ್ ಮಾರ್ಗಗಳನ್ನು ಅಭಿವೃದ್ದಿ ಪಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರÀ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಸೋಮವಾರಪೇಟೆಯಲ್ಲಿ ಈ ಯೋಜನೆಯ ಗುತ್ತಿಗೆಯನ್ನು ಪಡೆದಿದ್ದ ಗುತ್ತಿಗೆದಾರರು ಕಂಬಗಳನ್ನು ನೆಡಲು ಸ್ಥಳ ಗುರುತಿಸಿ ನಂತರ ನಾಪತ್ತೆಯಾಗಿದ್ದಾರೆ. ಇದರ ಬಗ್ಗೆ ಸಮಜಾಯಿಷಿಕೆ ನೀಡಿ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸಿ.ಬಿ.ಸುರೇಶ್ ಶೆಟ್ಟಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈಗಾಗಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ ತಿಳುವಳಿಕೆಯ ನೋಟೀಸು ನೀಡಲಾಗಿದೆ ಎಂದು ಹಾರಿಕೆಯ ಉತ್ತರ ನೀಡಿದರು.

ಕ್ಷೇತ್ರದ ಈಗಿನ ಶಾಸಕರು ಮತ್ತು ಮಾಜಿ ಸಚಿವರ ಮನೆಗಳಿಗೆ ಸಮೀಪವಿರುವ ಕುಂಬೂರು ಜಂಕ್ಷನ್ ಬಳಿ ಪ್ರತಿನಿತ್ಯ ಸಿಂಗಲ್ ಫೇಸ್ ಇರುವದರಿಂದ ಸಮಸ್ಯೆಯಾಗುತ್ತಿದೆ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಕುಂಬೂರು ನಿವಾಸಿ ಬಿ.ಕರುಂಬಯ್ಯ ಆರೋಪಿಸಿದರು.

ಸೋಮವಾರಪೇಟೆ ಪಟ್ಟಣದಲ್ಲಿ ಇಂದಿಗೂ 30ವರ್ಷ ಹಳೆಯ ವಿದ್ಯುತ್ ಮಾರ್ಗಗಳಿದ್ದು ಶಿಥಿಲಗೊಂಡಿರುವ ತಂತಿಗಳನ್ನು ಇದುವರೆಗೂ ಬದಲಾಯಿಸಿಲ್ಲ ಎಂದು ಮಹದೇಶ್ವರ ಬಡಾವಣೆ ನಿವಾಸಿ ಬಿ.ಕೆ.ದೊರೆ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರು.

ಸೋಮವಾರಪೇಟೆ ತಾಲೂಕು ಕೇಂದ್ರವಾಗಿದ್ದರೂ, ಇನ್ನೂ 66ಕೆ.ವಿ. ಸ್ಟೇಷನ್ ಆಗಿ ಮಾರ್ಪಾಡು ಹೊಂದಿಲ್ಲ. ಒಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಬದ್ದತೆಯ ಕೊರತೆಯಿದೆ ಎಂದು ಬೇಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ರೈ ದೂರಿದರು.

ಕಳೆದ 2ಬಾರಿ ಜನ ಸಂಪರ್ಕ ಸಭೆ ನಡೆದರೂ ನಿರ್ಣಯ ಪುಸ್ತಕದಲ್ಲಿರುವ ದೂರುಗಳನ್ನು ಇನ್ನೂ ಕಾರ್ಯಗತಗೊಳಿಸದಿರುವ ಬಗ್ಗೆ ಸಂತೋಷ್ ರೈ ಅಸಮಾಧಾನ ವ್ಯಕ್ತ ಪಡಿಸಿದರು.

ಕೊಡಗು ಮತ್ತು ಚಾಮರಾಜನಗರ ವೃತ್ತದ ಅಧೀಕ್ಷಕ ಅಭಿಯಂತರರಾದ ಎಂ. ಪ್ರತಾಪ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾದ ಎನ್. ತಾರ, ಜಿಲ್ಲೆಯ ಕಾರ್ಯನಿರ್ವಾಹಕ ಅಭಿಯಂತರ ಬಿ. ಸೋಮಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಧನಂಜಯ, ಪಿ.ಎನ್.ದೇವಯ್ಯ, ಲೆಕ್ಕಾಧಿಕಾರಿ ವಿ.ಎಂ. ನಾಗರಾಜು ಉಪಸ್ಥಿತರಿದ್ದರು.