ಮಡಿಕೇರಿ, ಜೂ. 9: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಪ್ರವೇಶಿಸುವದರೊಂದಿಗೆ ಚರಂಡಿಗಳ ಅವ್ಯವಸ್ಥೆ ಹಾಗೂ ರಸ್ತೆ ಬದಿ ಬೆಳೆದಿರುವ ಕಾಡು ಗಿಡಗಂಟಿಗಳಿಂದ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಲೋಕೋಪಯೋಗಿ ಹಾಗೂ ಜಿ.ಪಂ. ಇಂಜಿನಿಯರ್‍ಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದ್ದಾರೆ.
ರಸ್ತೆಬದಿ ಚರಂಡಿಗಳು ನಿರ್ವಹಣೆಯಿಲ್ಲದೆ, ಮಳೆ ನೀರು ಮಾರ್ಗದಲ್ಲೇ ಹರಿಯುವಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಬೊಟ್ಟು ಮಾಡಿರುವ ಅವರು, ಗ್ರಾಮೀಣ ರಸ್ತೆಗಳೊಂದಿಗೆ ನಗರ ಪ್ರದೇಶಗಳಲ್ಲಿ ಕೂಡ ಸಂಬಂಧಪಟ್ಟವರು ಕೂಡಲೇ ಇತ್ತ ಕಾಳಜಿ ವಹಿಸುವದರೊಂದಿಗೆ ಮೈಕೊಡವಿ ಕಾರ್ಯೋನ್ಮುಖರಾಗುವಂತೆ ತಿಳಿಹೇಳಿದ್ದಾರೆ. ಅಧಿಕಾರಿಗಳು ಈ ಬಗ್ಗೆ ತಮ್ಮ ಜಡತ್ವ ಬಿಡದಿದ್ದರೆ ಇರುವ ರಸ್ತೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುವ ಮೂಲಕ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದು ನೆನಪಿಸಿದ್ದಾರೆ.
ರಸ್ತೆಗಳಲ್ಲಿ ಹರಿಯುವ ನೀರಿನಿಂದ ಗುಂಡಿಗಳು ಗೋಚರಿಸದೆ ಚಾಲಕರು ಬವಣೆ ಪಡುತ್ತಿದ್ದರೆ, ರಸ್ತೆ ಬದಿಯ ಕಾಡುಗಳನ್ನು ಇನ್ನೂ ಕಡಿಯದಿರುವ ಕಾರಣ ಇತರ ಚಾಲಕರಿಗೆ ಕಾಣದೆ ಅಪಘಾತಗಳು ಸಂಭವಿಸುವ ಅಪಾಯ ವಿರುವದಾಗಿ ಶಾಸಕರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.