ಮಡಿಕೇರಿ, ಜೂ. 8: ವಿವಿಧ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ನೂತನ ಸಿ.ಎಂ. ಕುಮಾರ ಸ್ವಾಮಿ ಹಾಗೂ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಉಪಾಸಿ. ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ನ ಪ್ರತಿನಿಧಿಗಳು, ಶ್ರೀ ಬಿ.ಎಸ್.ಜೈರಾಂ, ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಒಕ್ಕೂಟ ಬಿ.ಎ.ಜಗನ್ನಾಥ್, ಮಾಜಿ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಗೂ ತೋ.ಚ. ಅನಂತಸುಬ್ಬರಾಯ್ ಉಪಾಧ್ಯಕ್ಷರು, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಇವರ ನೇತೃತ್ವದಲ್ಲಿ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ, ರೈತರ ಸಾಲ ಮನ್ನಾದಡಿ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ ಸಾಲವನ್ನು ಮನ್ನಾ ಮಾಡುವಂತೆ ವಿನಂತಿಸಿದೆ. ಇತ್ತೀಚಿನ ದಿನಗಳಲ್ಲಿ ವಿದೇಶದಿಂದ ಕಾಳುಮೆಣಸು ಆಮದಾಗುತ್ತಿದ್ದು, ಇಲ್ಲಿನ ಮೆಣಸಿನ ಬೆಲೆ ಕುಸಿದಿರುವದರಿಂದ ಸಂಕಷ್ಟದಿಂದ ಪಾರು ಮಾಡಬೇಕಾಗಿ ಮನವಿ ಮಾಡಲಾಯಿತು. ಜೊತೆಗೆ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಲಾಯಿತು. ಸಾಲವiನ್ನಾ ವಿಚಾರವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆವರಿಗೆ ತಿಳಿಸುವದಾಗಿ ಹೇಳಿದ ದೇವೇಗೌಡ ಅವರು ನೂತನ ಕಂದಾಯ ಸಚಿವರ ನೇಮಕದ ನಂತರ ಒತ್ತುವರಿ ಕುರಿತು ಚರ್ಚಿಸುವದಾಗಿ ಹೇಳಿದರು.
ನಂತರ ನಿಯೋಗವು ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿತು. ಕಾಫಿ ಬೆಳೆಗಾರ ಸಂಘಟನೆಯ ಸಭೆ ಕರೆದು ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವದಾಗಿ ಅವರು ಭರವಸೆ ನೀಡಿದರು ಹಾಗೂ ಮುಖ್ಯಮಂತ್ರಿಯವರೊಂದಿಗೆ ಮಾತನಾಡುವದಾಗಿಯೂ ತಿಳಿಸಿರುತ್ತಾರೆ. ಸಾಲಮನ್ನಾದ ವಿಚಾರವನ್ನು ಸದ್ಯದಲ್ಲೇ ಕ್ರಮಕೈಗೊಳ್ಳುವದಾಗಿ ತಿಳಿಸಿರುವದಾಗಿ ಬೆಳೆಗಾರರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ನಂತರ ನಿಯೋಗವು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಒತ್ತುವರಿ ಸಮಸ್ಯೆ ಮತ್ತು ಸಾಲಮನ್ನಾ ವಿಚಾರವಾಗಿ ಪ್ರಸ್ತಾಪಿಸಿದಾಗ ಕಾಫಿ ಬೆಳೆಗಾರ ಸಂಘಟನೆಗಳನ್ನೊಳಗೊಂಡಂತೆ, ಸಭೆ ಕರೆದು ಬೆಳೆಗಾರರ ಎಲ್ಲಾ ಸಮಸ್ಯೆಗಳ ಬಗ್ಗೆಯೂ ಚರ್ಚಿಸುವದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಯವರ ಭೇಟಿಯ ನೇತೃತ್ವವನ್ನು ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್ ವಹಿಸಿದ್ದರು.
ಈ ನಿಯೋಗದಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕೆ.ಕೆ. ವಿಶ್ವನಾಥ್, ಹೆಚ್.ಎಂ. ವಿಶ್ವನಾಥ್, ಎಂ.ಬಿ. ಲಕ್ಷ್ಮಣ್, ಕೆ.ಎಂ.ಹರೀಶ್, ಡಿ.ಎಸ್. ರಘು, ಹೆಚ್.ಕೆ. ಪ್ರಮೋದ್, ಡಾ. ಚಂಗಪ್ಪ ಇದ್ದರು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥ ಮಲ್ಲೇಶ್ ತಿಳಿಸಿದ್ದಾರೆ.