ಗುಡ್ಡೆಹೊಸೂರು, ಜೂ. 8: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ವಿಭಾಗದ ಜೀಪ್ ಮಾಲೀಕರು ಮತ್ತು ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ದುಬಾರೆ ಸಾಕಾನೆ ಶಿಬಿರದ ಆನೆಗಳಿಗೆ ಆಹಾರ ವಿತರಿಸಲಾಯಿತು. ಅಲ್ಲದೆ ಅಲ್ಲಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಮತ್ತು ಗುತ್ತಿಗೆ ಮಠ ಹಾಗೂ ಅಲ್ಲಿನ ಮದರಸಕ್ಕೆ ಧನಸಹಾಯ ಮಾಡಲಾಯಿತು.
ಕಳೆದ 3 ತಿಂಗಳ ಹಿಂದೆ ಅಲ್ಲಿನ ದುಬಾರೆ ಆನೆ ಶಿಬಿರಕ್ಕೆ ತೆರಳುವ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಮಾಡುವ ಕಾಮಗಾರಿ ನಡೆಯುತ್ತಿದ್ದರಿಂದ ಈ ಮಾರ್ಗದಲ್ಲಿ ಯಾವದೇ ವಾಹನಗಳು ತೆರಳದಂತೆ ನಿರ್ಭಂಧವಿದ್ದ ಕಾರಣ ಅಲ್ಲಿನ ವಾಹನ ಮಾಲೀಕರು ತಮ್ಮ ತಮ್ಮ ಜೀಪ್ಗಳಲ್ಲಿ ಬದಲಿ ರಸ್ತೆಯ ಮೂಲಕ ಪ್ರವಾಸಿಗರನ್ನು ನದಿಯಂಚಿಗೆ ಬಿಡುವ ಕಾರ್ಯ ಮಾಡುತ್ತಿದ್ದರು. ಇದೀಗ ದುಬಾರೆ ರಸ್ತೆ ಪ್ರವಾಸಿಗರ ಸಂಚಾರಕ್ಕೆ ಮುಕ್ತವಾಗಿದೆ. ನಂಜರಾಯಪಟ್ಟಣದ ವಾಹನ ಚಾಲಕರ ಸಂಘದಲ್ಲಿದ್ದ ಉಳಿಕೆ ಹಣವನ್ನು ದೇವಸ್ಥಾನಗಳಿಗೆ ಮದರಸಗಳಿಗೆ ಮತ್ತು ಅಲ್ಲಿನ ಅಂಗವಿಕಲರಿಗೆ ದಾನ ಮಾಡಿ ಮಾನವೀಯತೆ ಮೆರೆÀದಿದ್ದಾರೆ. ಈ ಸಂದರ್ಭ ಸಂಘದ ಅಧ್ಯಕ್ಷ ಜನಾರ್ಧನ (ವಸಂತ), ಉಪಾಧ್ಯಕ್ಷ ಎಸ್.ಕೆ. ತಿಮ್ಮಯ್ಯ (ರಾಜ), ಕಾರ್ಯದರ್ಶಿ ಮುತ್ತಪ್ಪ, ತಾ.ಪಂ. ಸದಸ್ಯ ವಿಜುಚಂಗಪ್ಪ, ಗ್ರಾ.ಪಂ. ಸದಸ್ಯ ಟಿ.ಕೆ. ಸುಮೇಶ್ ಗ್ರಾ.ಪಂ. ಸದಸ್ಯ ಕೋಟುಮಾಡ ನವೀನ್ (ವಿಜು) ಮತ್ತು 25 ಮಂದಿ ಸದಸ್ಯರು, ಉಪಅರಣ್ಯ ಸಂರಕ್ಷಣಾಧಿಕಾರಿ ರಂಜನ್ ಮುಂತಾದವರು ಹಾಜರಿದ್ದು ಆನೆಗಳಿಗೆ ಭತ್ತದ ಹುಲ್ಲು, ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲವನ್ನು ನೀಡಲಾಯಿತು.