ಶ್ರೀಮಂಗಲ, ಜೂ. 8 : ಕೊಡಗು ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ಕಂಡುಬಂದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಸರ್ವೇ ಕಾರ್ಯ ಕೈಗೆತ್ತಿಕೊಂಡಿರುವದು ಬೆಳಕಿಗೆ ಬಂದಿದೆ.
ಈ ಯೋಜನೆಯ ಸರ್ವೆ ಕಾರ್ಯ ದ.ಕೊಡಗಿನ ಕುಟ್ಟ, ಕೆ.ಬಾಡಗ ಮತ್ತು ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಗೆ ಖಾಸಗಿ ಜಾಗದಲ್ಲಿ ಜಾಗದ ಮಾಲೀಕರಿಗೆ ಯಾವದೇ ಮಾಹಿತಿ ನೀಡದೆ ಸರ್ವೆ ಕಾರ್ಯದ ನಡೆಸಲಾಗುತ್ತಿದೆ. ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಈ ಸರ್ವೆ ಕಾರ್ಯಕ್ಕೆ ಅಧಿಕಾರಿ-ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ಈ ತಂಡದಲ್ಲಿ ಸುಮಾರು 8 ಸಿಬ್ಬಂದಿಗಳಿದ್ದು, ಮಹರಾಷ್ಟ್ರ ರಾಜ್ಯದ ನೋಂದಾಯಿತ ವಾಹನದೊಂದಿಗೆ ಜಿಪಿಎಸ್ ಹಾಗೂ ಇತರ ಸರ್ವೆ ಕಾರ್ಯಕ್ಕೆ ಬಳಸುವ ಪರಿಕರದೊಂದಿಗೆ ಸರ್ವೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಕುಟ್ಟ ಮತ್ತು ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯ ಬಾಡಗ ಮತ್ತು ಕುಮಟೂರು ವ್ಯಾಪ್ತಿಯಲ್ಲಿ ಸರ್ವೆ ಕಾರ್ಯವನ್ನು ಕೊಂಕಣ್ ರೈಲ್ವೇ ಕರ್ಪೋರೇಷನ್ ಲಿಮಿಟೆಡ್‍ನ ಗುತ್ತಿಗೆ ಉದ್ಯೋಗಿ ಎಸ್.ಹೆಚ್. ಆದರ್ಶ್‍ಕೌಶಲ್ ಅಗರ್‍ವಾಲ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಕುಟ್ಟ ವ್ಯಾಪ್ತಿ ಹಾಗೂ ಇನ್ನಿತರ ಪ್ರದೇಶದಲ್ಲಿ ಸರ್ವೆ ಕಾರ್ಯ ಮುಗಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ) ಸ್ಥಳೀಯ ರೈತರ ಜಾಗದಲ್ಲಿ ಈ ಸರ್ವೆ ಕಾರ್ಯ ನಡೆಸುತ್ತಿದ್ದ ವೇಳೆÉ ಗ್ರಾಮಸ್ಥರು ವಿಚಾರಿಸಿದಾಗ ರೈಲ್ವೆ ಯೋಜನೆಗಾಗಿ ಮಾರ್ಗ ಗುರುತಿಸುವ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಈ ಸಂದರ್ಭ ಸ್ಥಳೀಯ ರೈತರು ಸರ್ವೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಕೆಲಸ ಮುಂದುವರಿಸದಂತೆ ತಡೆದರು.
ಈ ಸಿಬ್ಬಂದಿ ಹೊಂದಿರುವ ಸರ್ವೆ ಮಾಹಿತಿಯ ನಕಾಶೆಯಂತೆ ಈಗಾಗಲೇ ಯೋಜನೆಯ ಮಾರ್ಗವನ್ನು ಗುರುತಿಸಲಾಗಿದ್ದು, ಜಿಲ್ಲೆಯ ತಿತಿಮತಿ ಮೂಲಕ ಜಿಲ್ಲೆಗೆ ಪ್ರವೇಶಿಸುವ ಈ ಮಾರ್ಗವು ಹಲವೆಡೆ ಸುರಂಗಗಳ ಮೂಲಕ ಹಾದು ಹೋಗುವದನ್ನು ಗುರುತಿಸಲಾಗಿದ್ದು, ಜಿಲ್ಲೆಯ ಕುಟ್ಟದ ಮೂಲಕ ಕೇರಳದ ಕಾಟಿಕೊಳವನ್ನು ಸಂಪರ್ಕಿಸುವದನ್ನು ಗುರುತಿಸಲಾಗಿದೆ.
ಈಗಾಗಲೇ ಸರ್ವೆ ಕಾರ್ಯದಲ್ಲಿ ಕುಟ್ಟ ಸ್ಟೇಷನ್ 137.75 ಕಿ.ಮೀ, ಕಾನೂರು ರೋಡ್ ಸ್ಟೇಷನ್ 147 ಕಿ.ಮೀ, ಕಾಟಿಕೊಳಂ ರೋಡ್ ಸ್ಟೇಷನ್ 116.17 ಕಿ.ಮೀ, ಎಂದು ಸರ್ವೆ ನಡೆಸಿ ಗುರುತಿಸಿರುವ ದಾಖಲೆ ದೊರೆತಿದೆ.
ದ.ಕೊಡಗಿನ ಮೂಲಕ ರೈಲ್ವೆ ಯೋಜನೆಗೆ ಅವಕಾಶ ನೀಡಿದರೆ ಜಿಲ್ಲೆಯ ಅಸ್ಥಿತ್ವ ಹಾಗೂ ಕಾಫಿ ಪ್ಲಾಂಟೇಷನ್, ಜಿಲ್ಲೆಯ ಜನಜೀವನಕ್ಕೆ ಅಭದ್ರತೆ, ಸೇರಿದಂತೆ ಜಿಲ್ಲೆಯ ಪರಿಸರಕ್ಕೆ ಧಕ್ಕಿಸಿಕೊಳ್ಳದಷ್ಟು ನಷ್ಟ ಉಂಟಾಗಲಿದೆ ಎಂದು ಈ ಯೋಜನೆಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿ ಮೈಸೂರಿನಲ್ಲಿ ಫೆ.18 ರಂದು ಬೃಹತ್ ಪ್ರತಿಭಟನೆಗೆ ಜಿಲ್ಲೆಯ ಬಹಳಷ್ಟು ಸಂಘ ಸಂಸ್ಥೆಗಳು ಬೆಂಬಲ ನೀಡಿ ಈ ಮಾರಕ ಯೋಜನೆಯನ್ನು ತಡೆಯುವಂತೆ ಒತ್ತಾಯಿಸಿದ್ದವು. ಆದರೆ, ಸಂಸದರು ಹಾಗೂ ಶಾಸಕರು ಇಂತಹ ಯಾವದೇ ಯೋಜನೆಯ ಪ್ರಸ್ತಾವನೆ ಇಲ್ಲ ಹಾಗೂ ಇಂತಹ ಯಾವದೇ ಯೋಜನೆಗೆ ಅವಕಾಶ ನೀಡುವದಿಲ್ಲ ಎಂದು ಹಲವಾರು ಬಾರಿ ತಮ್ಮ ಹೇಳಿಕೆ ನೀಡುತ್ತಾ ಬಂದಿದ್ದು, ಆದರೆ ಗೌಪ್ಯವಾಗಿ ಈ ಯೋಜನೆಗೆ ಸವೆ ್ಕಾರ್ಯವನ್ನು ಕೈಗೆತ್ತಿಕೊಂಡಿರುವದು ಇದೀಗ ಜನರಲ್ಲಿ ಆತಂಕಕ್ಕೀಡುಮಾಡಿದೆ.