ವೀರಾಜಪೇಟೆ, ಜೂ. 8 : ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳತನವೆಸಗಿರುವ ಘಟನೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಟ್ಟಂಗಾಲ ಪಂಚಾಯಿತಿಯ ವಿ. ಬಾಡಗ ಗ್ರಾಮದ ನಿವಾಸಿ ದಿ. ಎನ್. ಅಯ್ಯಪ್ಪ ಅವರ ಪುತ್ರ ಎನ್.ಎ. ತಿಮ್ಮಯ್ಯ ಅಂಬಟ್ಟಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ತಿಮ್ಮಯ್ಯ ವ್ಯಾಪಾರಸ್ಥರಾಗಿದ್ದು, ಬೆಂಗಳೂರಿನಲ್ಲಿ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ತಾ. 3 ರಂದು ಬೆಂಗಳೂರಿನಲ್ಲಿ ಸಂಬಂಧಿಕರ ಮದುವೆಗೆಂದು ಸಂಸಾರ ಸಮೇತರಾಗಿ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಬೀರುವಿನಲ್ಲಿದ್ದ ರೂ. 36,000 ನಗದು ಸೇರಿದಂತೆ 53.5 ಗ್ರಾಂ ಚಿನ್ನದ ನೆಕ್ಲೇಸ್ ಸೇರಿದಂತೆ ಒಟ್ಟು 2 ಲಕ್ಷದ 18 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ತಾ. 6ರಂದು ರಾತ್ರಿ ಹಿಂದಿರುಗಿದ ತಿಮ್ಮಯ್ಯ ಮತ್ತು ಕುಟುಂಬದವರಿಗೆ ಮನೆಯ ಬಾಗಿಲಿನ ಬೀಗ ಒಡೆದಿರುವದು ಗೋಚರಿಸಿದೆ. ಮನೆಯ ಎಲ್ಲಾ ಪದಾರ್ಥಗಳ ಕೆದಡಿದ್ದಾರೆ. ತಾ. 7 ರಂದು ಗ್ರಾಮಾಂತರ ಪೊಲೀಸ್ ಠಾಣೆಗೆ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಶೋಧ ಕಾರ್ಯ ಮುಂದುವರಿಸಿದ್ದಾರೆ.