ಮಡಿಕೇರಿ ಜೂ.7 : ಕೊಡಗನ್ನು ಸುಂದರ ಹಾಗೂ ಸ್ವಚ್ಛ ಜಿಲ್ಲೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಅಸೋಸಿಯೇಷನ್ ಇದೇ ಮೊದಲ ಬಾರಿಗೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕರೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ಸ್ವಾಗತಿಸುವದಾಗಿ ತಿಳಿಸಿದರು. ಜಿಲ್ಲಾಡಳಿತದ ಪ್ರಯತ್ನಕ್ಕೆ ಪೂರಕವಾಗಿ ಚೇಂಬರ್ ಆಫ್ ಕಾಮರ್ಸ್ ಮತ್ತು ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಅಸೋಸಿಯೇಷನ್ ಕೂಡ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಲ್ಲಿ ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಿದೆ ಎಂದರು. ಯಾವದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ನೀರು ಸರಬರಾಜು ಮಾಡಲು ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ನಿಷೇಧಿಸಬೇಕು, ಪ್ಲಾಸ್ಟಿಕ್ ತಟ್ಟೆ, ಸ್ಪೂನ್, ಲೋಟಗಳನ್ನು ಬಳಕೆ ಮಾಡದಂತೆ ಸ್ವಯಂ ತೀರ್ಮಾನ ಕೈಗೊಳ್ಳಬೇಕು,

(ಮೊದಲ ಪುಟದಿಂದ) ಜಿಲ್ಲಾಡಳಿತ ಮತ್ತು ವಿಶೇಷವಾಗಿ ಪ್ರವಾಸೋದ್ಯಮ ಇಲಾಖೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಗಮನ ಸೆಳೆಯಲು ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಫಲಕಗಳನ್ನು ಅಳವಡಿಸಬೇಕು, ಹೋಂಸ್ಟೇಗಳು, ಎಲ್ಲಾ ರೀತಿಯ ವಸತಿ ಗೃಹಗಳು ಹಾಗೂ ಹೋಟೆಲ್‍ಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಫಲಕಗಳನ್ನು ಅಳವಡಿಸಬೇಕು, ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳು ಈಗಾಗಲೇ ಜಾರಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ದಾಸ್ತಾನು ಇರಿಸದಂತೆ ನೋಡಿಕೊಳ್ಳಬೇಕು, ಸಾರ್ವಜನಿಕರು ವ್ಯಾಪಾರ ಸಂದರ್ಭಗಳಲ್ಲಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್‍ಗಳನ್ನು ತಿರಸ್ಕರಿಸಬೇಕು, ಅಲ್ಲದೆ ಆಟೋ, ಕಾರು, ಜೀಪು, ಲಾರಿ, ಬಸ್ ಇನ್ನಿತರ ವಾಹನಗಳಲ್ಲಿ “ಕೊಡಗು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ” ಎಂದು ಬರಹವಿರುವ ಸ್ಟಿಕರ್‍ಗಳನ್ನು ಅಳವಡಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ವಾಹನÀ ಸಂಘಟನೆಗಳು ಈ ಕಾರ್ಯದೊಂದಿಗೆ ಕೈಜೋಡಿಸಬೇಕೆಂದರು.

ಸ್ವಚ್ಛ ಭಾರತ ಕಲ್ಪನೆಯಲ್ಲಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ಪರಿಸರ ರಕ್ಷಣೆ, ಸ್ಪಚ್ಛತೆ, ಪ್ಲಾಸ್ಟಿಕ್ ನಿಷೇದ ಇತ್ಯಾದಿ ಸಾಮಾಜಿಕ ಕಳಕಳಿ ಬಗ್ಗೆ ಕಡ್ಡಾಯವಾಗಿ ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಬೇಕು, ತ್ಯಾಜ್ಯ ಪ್ಲಾಸ್ಟಿಕ್‍ಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಡ್ಡಾಯವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ರಸ್ತೆ ನಿರ್ಮಾಣಕ್ಕೆ ಬಳಸುವ ಟಾರ್‍ಗಳಿಗೂ ಇದನ್ನು ಬಳಸುವಲ್ಲಿ ಯೋಜನೆ ರೂಪಿಸಬೇಕು, ತ್ಯಾಜ್ಯ ವಸ್ತುಗಳನ್ನು ಶೇಖರಿಸಿಡಲು ತಾಲೂಕು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಗೋದಾಮು ವ್ಯವಸ್ಥೆ ರೂಪಿಸಬೇಕು, ಜನತೆ ಹೆಚ್ಚಾಗಿ ಸೇರುವ ಪ್ರದೇಶ, ಪ್ರಾರ್ಥನಾ ಸ್ಥಳಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕು, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ನೆರವಿನಿಂದ ಸಂತೆ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭ ಜಾಗೃತಿ ಜಾಥಾಗಳನ್ನು ನಡೆಸಬೇಕು, ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದ ಪರಿಸರ ರಕ್ಷಣಾ ಸಮಿತಿಯೊಂದನ್ನು ರಚಿಸಬೇಕೆಂದು ಬಿ.ಎನ್.ಪ್ರಕಾಶ್ ಸಲಹೆ ನೀಡಿದರು.

ಊಟಿ ಮಾದರಿಯಲ್ಲಿ ಪ್ಲಾಸ್ಟಿಕ್ ತರುವ ಪ್ರವಾಸಿಗರ ಮೇಲೆ ದೂರು ದಾಖಲಿಸುವಂತಹ ಕಠಿಣ ಕ್ರಮ ಕೈಗೊಂಡರೆ ಕೊಡಗಿನಲ್ಲು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬಹುದಾಗಿದೆ. ಕಠಿಣ ಕಾನೂನು ಕ್ರಮದಿಂದ ಮಾತ್ರ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವದೇ ಅಡ್ಡಿ ಆತಂಕಗಳು ಎದುರಾಗದಂತೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಮ್ಮ ಸಂಘಟನೆ ಮಾಡಲಿದೆ ಎಂದರು. ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಟ್ಟು, ಜಾಗೃತಿ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಯಲಿದೆ. ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಹೋಂಸ್ಟೇ ಸೇರಿದಂತೆ ಪ್ರವಾಸಿಗರು ತಂಗಬಹುದಾದ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಲಾಗುವದು. ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಎಫ್‍ಕೆಸಿಸಿ ಪದಾಧಿಕಾರಿ ಕೆ.ಬಿ. ಗಿರೀಶ್ ಗಣಪತಿ ಮಾತನಾಡಿ, ತಲಕಾವೇರಿ ಹಾಗೂ ಭಾಗಮಂಡಲ ಪುಣ್ಯ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧವಾಗಬೇಕೆಂದು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿಗಳು ತಕ್ಷಣ ಈ ಕ್ಷೇತ್ರ್ರಗಳಿಗೆ ಭೇಟಿ ನೀಡಿ, ಪ್ರವಾಸಿಗರು ಅಡುಗೆ ಮಾಡಿ ನದಿ ಮೂಲ ಮತ್ತು ಸುತ್ತಲ ಪ್ರದೇಶವನ್ನು ಕಲುಷಿತಗೊಳಿಸುತ್ತಿರುವದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ಪ್ರವಾಸಿಗರಿಗೆ ಭಾಗಮಂಡಲದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ತಲಕಾವೇರಿಯನ್ನು ತಲುಪಲು ಸರ್ಕಾರಿ ವಾಹನವನ್ನು ನಿಯೋಜಿಸಬೇಕೆಂದು ಸಲಹೆ ನೀಡಿದರು. ಮಾಂದಲ್ ಪಟ್ಟಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಹೊಟೇಲ್‍ಗಳಲ್ಲಿ ಆಹಾರ ತಿನಿಸುಗಳನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ಬಳಸದಂತೆ ನಿರ್ದೇಶನ ನೀಡಬೇಕು. ಮನೆ ಮನೆಗಳಿಂದ ಕಸ ಸಂಗ್ರಹಿಸುವ ಸಂದರ್ಭ ಸಾರ್ವಜನಿಕರು ಕಸವನ್ನು ವಿಂಗಡಿಸಿ ವಿಲೇವಾರಿ ಮಾಡುವ ಮೂಲಕ ಮಾಲಿನ್ಯವನ್ನು ತಡೆÉಗಟ್ಟಬೇಕೆಂದು ಅವರು ತಿಳಿಸಿದರು.

ಹಸಿ ಕಸದಿಂದ ಗೊಬ್ಬರ ತಯಾರಿಸುವ ವಿಧಾನವನ್ನು ಆಸಕ್ತರಿಗೆ ತಾವು ತಿಳಿಸಿಕೊಡುವದಾಗಿ ಇದೇ ಸಂದರ್ಭ ತಿಳಿಸಿದ ಮೋಂತಿ ಗಣೇಶ್, ತಮ್ಮ ಮೊಬೈಲ್ ಸಂಖ್ಯೆ 9243393234ಗೆ ಕರೆ ಮಾಡಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಹನೀಫ್ ಹಾಗೂ ಖಜಾಂಚಿ ರವಿ ಉತ್ತಪ್ಪ ಉಪಸ್ಥಿತರಿದ್ದರು. ಚೇಂಬರ್ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಹೊಟೇಲ್ ಅಸೋಸಿಯೇಶನ್ ಪದಾಧಿಕಾರಿಗಳಾದ ಭಾಸ್ಕರ್, ಸಿದ್ದು, ಆಸಿಫ್, ಕೋಟಿ, ಜಾಹೀರ ಇವರುಗಳು ಪಾಲ್ಗೊಂಡಿದ್ದರು.