5 ರಾಜ್ಯಗಳಿಗೆ ಪ್ರವಾಹದ ಎಚ್ಚರಿಕೆ

ನವದೆಹಲಿ, ಜೂ. 7: ಕರ್ನಾಟಕ ಕರಾವಳಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರವಾಹದ ಎಚ್ಚರಿಕೆ ನೀಡಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರವಾಹ ಎಚ್ಚರಿಕೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕದ ಕರಾವಳಿ ಮತ್ತು ಕೊಂಕಣ ಗೋವಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಕೊಂಕಣ, ಗೋವಾ ಮತ್ತು ಮಹಾರಾಷ್ಟ್ರದ ಕೇಂದ್ರೀಯ ಪ್ರದೇಶಗಳಲ್ಲಿ ತಾ. 7 ರಿಂದ 12 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಜನಸಂಪನ್ಮೂಲ ಸಚಿವಾಲಯಕ್ಕೆ ಎಚ್ಚರಿಕೆಗಳನ್ನು ನೀಡಿದೆ. ಕರ್ನಾಟಕ ರಾಜ್ಯದಾದ್ಯಂತ ತಾ. 9 ಮತ್ತು ತಾ. 11, ಕೇರಳ ರಾಜ್ಯದಲ್ಲಿ ತಾ. 9 ಮತ್ತು ತಾ. 10 ರಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್

ನಾಗಪುರ, ಜೂ. 7: ಆರ್‍ಎಸ್‍ಎಸ್‍ನ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗಿಯಾಗಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪ್ರಣವ್ ಮುಖರ್ಜಿ ಆರ್‍ಎಸ್‍ಎಸ್ ಸಂಸ್ಥಾಪಕ ಕೇಶವ್ ಬಲಿರಾಂ ಹೆಡಗೆವಾರ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಅಲ್ಲಿನ ಸಂದರ್ಶನ ಪುಸ್ತಕದಲ್ಲಿ ‘ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ನನ್ನ ಗೌರವ ಸಮರ್ಪಿಸಲು ಇಂದು ಇಲ್ಲಿಗೆ ಬಂದಿದ್ದೇನೆ’ ಎಂದು ಬರೆದರು. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್ ವರಿಷ್ಠ ಮೋಹನ್ ಭಾಗವತ್ ಇದ್ದರು.

ದಲಿತ ಪದ ಬಳಕೆ ಮಾಡದಂತೆ ಆದೇಶ

ನಾಗ್ಪುರ, ಜೂ. 7: ಮಾಧ್ಯಮಗಳ ವರದಿಯಲ್ಲಿ “ದಲಿತ” ಎಂಬ ಪದ ಬಳಸದಂತೆ ಸೂಚನೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಆದೇಶಿಸಿದೆ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ದಲಿತ ಎಂಬ ಪದದ ಬದಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸುವ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಮಾರ್ಚ್ 15 ರಂದು ಹೊರಡಿಸಿರುವ ಸುತ್ತೋಲೆಯನ್ನು ಜಾರಿಗೊಳಿಸುವಂತೆ ನ್ಯಾಯಮೂರ್ತಿಗಳಾದ ಭೂಷಣ್ ಧರ್ಮಾಧಿಕಾರಿ ಹಾಗೂ ಜಕ ಹಕ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಕೇಂದ್ರ ಸರ್ಕಾರದ ಸುತ್ತೋಲೆಯ ಆಧಾರದ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಾರಗೊಳಗಾಗಿ ಅಧಿಸೂಚನೆ ಹೊರಡಿಸಲಿದೆ ಎಂದು ಸರ್ಕಾರಿ ಅಭಿಯೋಜಕರು ಕೋರ್ಟ್‍ಗೆ ತಿಳಿಸಿದ್ದಾರೆ.

ಕಮಾಂಡೋ ಪಡೆಯ ಯೋಧ ಹುತಾತ್ಮ

ರಾಂಚಿ, ಜೂ. 7: ಜಾರ್ಖಂಡ್‍ನಲ್ಲಿ ನಕ್ಸಲರು ನಡೆಸಿದ ಧಾಳಿಯಲ್ಲಿ ಓರ್ವ ಕೋಬ್ರಾ ಕಮಾಂಡೋ ಪಡೆಯ ಯೋಧ ಹುತಾತ್ಮನಾಗಿದ್ದು, ಓರ್ವ ಪೆÇಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಜಾರ್ಖಂಡ್‍ನ ಸರೈಕೆಲಾ ಜಿಲ್ಲೆಯ ಕುಂತಿ ಗಡಿಯ ಕಾರು ಕುಚೈ ಎಂಬ ಪ್ರದೇಶದಲ್ಲಿ ನಕ್ಸಲರು ಬೀಡು ಬಿಟ್ಟಿರುವ ಕುರಿತು ಮಾಹಿತಿ ಪಡೆದ ಸಿಆರ್‍ಪಿಎಫ್‍ನ ಕೋಬ್ರಾ ಕಮಾಂಡೋ ಪಡೆ ಮತ್ತು ಸ್ಥಳೀಯ ಪೆÇಲೀಸ್ ಅಧಿಕಾರಿಗಳು ಧಾಳಿ ನಡೆಸಿದ್ದು, ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಕೋಬ್ರಾ ಕಮಾಂಡೋ ಪಡೆಯ ಯೋಧನಿಗೆ ಗುಂಡೇಟು ತಗುಲಿ ಹುತಾತ್ಮನಾಗಿದ್ದು, ಅಂತೆಯೇ ಸ್ಥಳೀಯ ಎಸಿಪಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎನ್‍ಕೌಂಟರ್ ಪ್ರಗತಿಯಲ್ಲಿದ್ದು, ಘಟನಾ ಪ್ರದೇಶವನ್ನು ಸೈನಿಕರು ಸುತ್ತುವರೆದಿದ್ದಾರೆ. ಘಟನಾ ಸ್ಥಳಕ್ಕೆ ತುರ್ತಾಗಿ ಒಂದು ಆಂಬುಲೆನ್ಸ್ ಮತ್ತು ಹೆಲಿಕಾಪ್ಟರ್ ರವಾನೆ ಮಾಡಲಾಗಿದ್ದು, ಗಾಯಾಳು ಸೈನಿಕರನ್ನು ಏರ್‍ಲಿಫ್ಟ್ ಮಾಡಲಾಗುತ್ತಿದೆ.

ಕಾಲಾ ಚಿತ್ರ ಬಿಡುಗಡೆಗೆ ಅಡ್ಡಿ

ಬೆಂಗಳೂರು, ಜೂ. 7: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ತಡೆಯೊಡ್ಡಿವೆ. ರಾಜ್ಯಾದ್ಯಂತ ಭಾರೀ ವಿರೋಧ ಕಂಡುಬಂದ ಹಿನ್ನೆಲೆ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳಿಗೆ ಪೆÇಲೀಸ್ ಭದ್ರತೆಯನ್ನು ಒದಗಿಸಿದರೂ ಕೂಡ ರಾಜ್ಯದ ಥಿಯೇಟರ್‍ಗಳಲ್ಲಿ ಚಿತ್ರ ಬಿಡುಗಡೆಯಾಗಲಿಲ್ಲ. ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನಗರದ ಹಲವು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳ ಮುಂದೆ ಕಾಲಾ ಚಿತ್ರ ಬಿಡುಗಡೆಯಾಗದಂತೆ ತಡೆದರು. ಬೆಂಗಳೂರಿನಲ್ಲಿ ಯಾವದೇ ಥಿಯೇಟರ್‍ನಲ್ಲಿ ಇಂದು ಕಾಲಾ ಚಿತ್ರ ಪ್ರದರ್ಶನವಾಗಲಿಲ್ಲ. ಮಲ್ಟಿಪ್ಲೆಕ್ಸ್‍ಗಳಿಗೆ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ನುಗ್ಗಲು ಪ್ರಯತ್ನಿಸಿದರು. ಆದರೆ ಮೊದಲೇ ನಿಯೋಜನೆಗೊಂಡಿದ್ದ ಪೆÇಲೀಸರು ಮಲ್ಲೇಶ್ವರದ ಮಂತ್ರಿ ಮಾಲ್, ಯಶವಂತಪುರದ ಒರಯಾನ್ ಮಾಲ್ ಮತ್ತು ಲಿಡೊ ಮಾಲ್‍ಗಳಲ್ಲಿ ಪ್ರತಿಭಟನಾಕಾರರನ್ನು ತಡೆಯೊಡ್ಡಿ ಕಸ್ಟಡಿಗೆ ಕರೆದೊಯ್ದರು.

ಕೊಹ್ಲಿಗೆ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿ

ನವದೆಹಲಿ, ಜೂ. 7: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ತೋರಿದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಹಿನ್ನೆಲೆ ಬಿಸಿಸಿಐ ವರ್ಷದ ಕ್ರಿಕೆಟಿಗರಿಗೆ ನೀಡಲಾಗುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳಾ ವಿಶ್ವಕಪ್ ತಾರೆಯರಾದ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಅವರಿಗೆ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಲಿದೆ. 2016-17 ಹಾಗೂ 2017-18 ವರ್ಷದಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ತಾ. 14 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ ಎಂದು ಬಿಸಿಸಿಐ ಪ್ರಕಟಣೆ ಹೇಳಿದೆ. 2016-17ನೇ ಸಾಲಿನಲ್ಲಿ ಕೊಹ್ಲಿ 13 ಟೆಸ್ಟ್ ಪಂದ್ಯಗಳಲ್ಲಿ 74ರ ಸರಾಸರಿಯಲ್ಲಿ 1332 ರನ್, 27 ಏಕದಿನಗಳಲ್ಲಿ 84.22ರ ಸರಾಸರಿಯಲ್ಲಿ 1516 ರನ್, 2017-18ರ ಸಾಲಿನಲ್ಲಿ 89.6ರ ಸರಾಸರಿಯಲ್ಲಿ 896 ರನ್ ಗಳಿಸಿದ್ದಾರೆ.