ಸಿದ್ದಾಪುರ, ಜೂ. 7: ಕಾಡಾನೆಗಳ ಚಲನವಲನಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಬಾಡಗ ಬಾಣಂಗಾಲ ವ್ಯಾಪ್ತಿಯ ಹೆಣ್ಣು ಕಾಡಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಲಾಗಿದೆ.ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು, ದಿನಂಪ್ರತಿ ಕಾಡಾನೆಗಳ ಹಿಂಡಿನ ಚಲನವಲನ ಪತ್ತೆಹಚ್ಚುವ ಉದ್ದೇಶದಿಂದ ಅಂದಾಜು 30 ವರ್ಷ ಪ್ರಾಯದ ಹೆಣ್ಣಾನೆಯೊಂದರ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸಲಾಯಿತು.
ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯ ಹಾಗೂ ಕೃಷ್ಣ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳಗ್ಗೆ 11 ಗಂಟೆಯಿಂದ ಕಾರ್ಯಾ ಚರಣೆ ನಡೆಸಿದರು. (ಮೊದಲ ಪುಟದಿಂದ) ಬಳಿಕ ಅಪರಾಹ್ನ 3 ಗಂಟೆಯ ವೇಳೆಗೆ ಅರವಳಿಕೆ ಮದ್ದು ಬಳಸಿ ಕಾಡಾನೆಯನ್ನು ಸೆರೆ ಹಿಡಿಯಲಾಯಿತು. ಇದೇ ಸಂದರ್ಭ ಕಾಡಾನೆಯು ಸಿಟ್ಟಿನಿಂದ ಘೀಳಿಡುತ್ತಾ, ಸಿಬ್ಬಂದಿಗಳನ್ನು ಓಡಿಸಲು ಪ್ರಯತ್ನಿಸಿತು. ಬಳಿಕ ಶ್ರಮಪಟ್ಟು ಕಾಡಾನೆಯ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸಲಾಯಿತು. ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಒಟ್ಟು 15 ಕಾಡಾನೆಗಳ ಹಿಂಡಿನಿಂದ ಹೆಣ್ಣು ಕಾಡಾನೆಯನ್ನು ಸೆರೆಹಿಡಿಯಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಹರಸಾಹಸಪಟ್ಟರು. ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ರೋಷಿಣಿ, ಆರ್.ಎಫ್.ಓ ಗೋಪಾಲ್, ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಉಪವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಗಣೇಶ್, ಹಾಗೂ ಆರ್.ಆರ್.ಟಿ ತಂಡ ಭಾಗವಹಿಸಿದ್ದರು. -ಎ.ಎನ್ ವಾಸು