ಮಡಿಕೇರಿ, ಜೂ. 6: ಕೊಡಗು ಜಿಲ್ಲೆಯಾದ್ಯಂತ ತಾ. 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಅಲ್ಲಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರಕೃತಿಯ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು. ಶಾಲಾ - ಕಾಲೇಜುಗಳು ಸೇರಿದಂತೆ ಸಂಘ- ಸಂಸ್ಥೆಗಳು ಭಾಗಿಯಾಗಿದ್ದವು.

ಬ್ಯಾಂಕ್ ಬ್ಯಾಲೆನ್ಸ್‍ಗಿಂತ ಪರಿಸರ ಸಂರಕ್ಷಣೆಯತ್ತ ಆಸಕ್ತಿ ತೋರುವದು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ನಾಗರಿಕತೆಯ ಅಭಿವೃದ್ಧಿ ಜೊತೆಗೆ ಪರಿಸರ ಸಮತೋಲನ ಕಾಪಾಡುವದು ಅತ್ಯಗತ್ಯ. ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶ ಮಾಡುವದು ಸರಿಯಲ್ಲ ಎಂದು ಅವರು ಹೇಳಿದರು.

ಬಳಿಕ ‘ಪರಿಸರ ಜಾಗೃತಿ ಜಾಥಾ’ಗೆ ಚಾಲನೆ ನೀಡಿದರು. ಜಾಥಾದಲ್ಲಿ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ನಗರಸಭೆಯಿಂದ ನಿರ್ಮಿಸಲಾಗಿದ್ದ ವಸ್ತು ಪ್ರದರ್ಶನ ವಾಹನ ಗಮನ ಸೆಳೆಯಿತು.

ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ‘ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ’ ಘೋಷ ವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಎಂ.ಎಂ.ಜಯ, ಪೌರಾಯುಕೆÀ್ತ ಬಿ.ಶುಭಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೆಂಚಪ್ಪ ಇತರರು ಇದ್ದರು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ‘ಕಾಲ್ನಡಿಗೆ ಜಾಥಾ’ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೋಂಸ್ಟೇ ಅಸೋಸಿಯೇಷನ್ ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಪರಿಸರ ಜಾಥಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಪರಿಸರ ಘೋಷಣೆಯ ಪ್ಲೇ ಕಾರ್ಡ್‍ಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ಕರಿಕೆ: ಇಲ್ಲಿನ ಗ್ರಾ.ಪಂ. ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಗಿಡ ನೆಡುವದರ ಮೂಲಕ ಪರಿಸರ ದಿನಾಚರಣೆ ಆಚರಿಸಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರ ಬಿಪಿನ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.ಗೋಣಿಕೊಪ್ಪಲು : ಪರಿಸರವನ್ನು ಸಂರಕ್ಷಿಸಿದರೆ ಮನುಷ್ಯನ ಆರೋಗ್ಯವನ್ನೂ ಉತ್ತಮಗೊಳ್ಳಲಿದೆ. ಮನುಷ್ಯ ಪರಿಸರದ ಜೀವಿಯಾದ್ದರಿಂದ ಆತನ ಆರೋಗ್ಯಕರ ಬದುಕು ಪರಿಸರವನ್ನು ಅವಲಂಬಿಸಿದೆ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವಪರಿಸರ ದಿನಾಚರಣೆಯಲ್ಲಿ ಗಿಡನೆಟ್ಟು ಮಾತನಾಡಿದ ಅವರು ಆಧುನಿಕತೆಯ ಅಭಿವದ್ಧಿಗೆ ಸಿಲುಕಿದ ಪರಿಸರ ಇಂದು ತೀವ್ರವಾಗಿ ಕಲುಷಿತಗೊಳ್ಳುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ವಾಯುಮಾಲಿನ್ಯ ಉಂಟಾಗಿ ಜೀವಜಂತುಗಳ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ಬಯಲಿನ ಪ್ರದೇಶಗಳಲ್ಲಿ ಗಿಡಮರಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.

ಬಾಳೆಲೆ ಮುಖ್ಯ ರಸ್ತೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರು ಮೆರವಣಿಗೆ ನಡೆಸಿದರು. ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಸಹಕಾರ್ಯದರ್ಶಿ ಪೋಡಮಾಡ ಮೋಹನ್, ನಿರ್ದೇಶಕ ಮೇಚಂಡ ಪೆಮ್ಮಯ್ಯ, ಪ್ರಾಂಶುಪಾಲರಾದ ಕೆ.ಪಿ. ಪೊನ್ನಮ್ಮ, ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್, ಬೋಧಕರಾದ ಡಾ.ಜೆ. ಸೋಮಣ್ಣ, ಎಂ.ಪಿ. ರಾಘವೇಂದ್ರ ಹಾಜರಿದ್ದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ವಿವಿಧ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಶಾಲೆ ಮೈದಾನ, ರುದ್ರಭೂಮಿ, ಸಮುದಾಯ ಆರೋಗ್ಯ ಕೇಂದ್ರ ಮತ್ತು ವಿವಿಧ ಬಡಾವಣೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಪರಿಸರ ದಿನಾಚರಣೆ ಅಂಗವಾಗಿ ಪಂಚಾಯಿತಿ ವತಿಯಿಂದ ಒಂದು ವಾರಗಳ ಕಾ¯ ನಿರಂತರವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಚಂದ್ರಮೌಳಿ ಹೇಳಿದರು.

ಮನುಷ್ಯನ ಬದುಕಿಗೆ ಬೇಕಾದ ಶುದ್ಧ ಗಾಳಿ ಮತ್ತು ಆರೋಗ್ಯಕ್ಕಾಗಿ ಮರಗಳನ್ನು ಬೆಳೆಸುವದು ಪ್ರತಿಯೊಬ್ಬನ ಹಕ್ಕು. ಕೇಕ್ ಕತ್ತರಿಸಿ, ಮೇಣದ ಬತ್ತಿ ಹಚ್ಚುವ ಮೂಲಕ ಜನ್ಮ ದಿನಾಚರಣೆಗಳನ್ನು ಆಚರಿಸುವ ಬದಲು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ನುಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ನೂರೇರ ರತಿ ಅಚ್ಚಪ್ಪ, ಖಲೀಂವುಲ್ಲಾ, ಕಾಟಿ ಮುರುಗ, ಮುಖ್ಯೋಪಾಧ್ಯಾಯಿನಿ ಶಾಂತಿ, ಶಿಕ್ಷಕಿ ಕಾವೇರಮ್ಮ, ಗ್ರಾಮ ಪಂಚಾಯಿತಿ ನೌಕರರಾದ ರಾಜು, ನವೀನ್ ಇದ್ದರು.

ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿಯೂ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾವೇರಿ ಕಾಲೇಜಿನಲ್ಲಿ

ಇಲ್ಲಿನ ಕಾವೇರಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾವೇರಿ ಎಜುಕೇಷನ್ ಸೊಸೈಟಿಯ ಎಂ.ಕೆ. ಮೊಣ್ಣಪ್ಪ ಕಾಲೇಜು ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪ್ರಾಂಶುಪಾಲರಾದ ಪ್ರೊ. ಎಸ್. ಆರ್. ಉಷಾಲತ, ಅಧೀಕ್ಷಕಿ ಹೆಚ್. ಕೆ. ಸೀತಾಲಕ್ಷ್ಮಿ, ಆಲ್ಬರ್ಟ್ ಪಾಯಿಸ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿ ಪರ ರೈತ ಕೃಷ್ಣೇಗೌಡ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರನ್ನು ರಕ್ಷಿಸುತ್ತಿರುವ ಪರಿಸರವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವದು ಕರ್ತವ್ಯ ಎಂದರು.

ಶಾಲೆಯ ಪ್ರಭಾರ ಪ್ರಾಂಶುಪಾಲ ಚಿದಂಬರ ಮಾತನಾಡಿ, ಪ್ಲಾಸ್ಟಿಕ್ ಕ್ಯಾನ್ಸರ್ ರೋಗ ಇದ್ದಂತೆ. ಅದನ್ನು ಮಣ್ಣಿನೊಂದಿಗೆ ಸುಡುವದು ಸಹ ಅಪಾಯಕಾರಿ ಮತ್ತು ಪರಿಸರಕ್ಕೆ ಮಾರಕ ಎಂದು ಹೇಳಿದರು.

ಶಾಲೆಯ ಶಿಕ್ಷಕರುಗಳಾದ ನಾಗೇಂದ್ರ, ದಿನೇಶಾಚಾರಿ, ದೊಡ್ಡಯ್ಯ, ದರ್ಶಿನಿ, ಸುಜಾತ ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆ ಹಾಗೂ ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಸಂಸ್ಥೆಯ ಪದಾಧಿಕಾರಿಗಳು, ಪ್ರಾಂಶುಪಾಲರು ಮೆರವಣಿಗೆಯಲ್ಲಿ ತೆರಳಿದರು. ಮೂರ್ನಾಡು ಬಸ್ ನಿಲ್ದಾಣದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ದಿನದ ವಿಶೇಷತೆಯನ್ನು ಕುರಿತು ಮಾತನಾಡಿದರು. ಮಾರುತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು ಅವರ ನೇತೃತ್ವದಲ್ಲಿ ಮೂರ್ನಾಡಿನಿಂದ ಅರಮೇರಿಯ ಎಸ್.ಎಂ.ಎಸ್. ವಿದ್ಯಾಪೀಠದವರೆಗೆ 35 ವಿದ್ಯಾರ್ಥಿಗಳ ತಂಡದಿಂದ ಸೈಕಲ್ ರ್ಯಾಲಿ ನಡೆಸಲಾಯಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕುಸುಮ, ಸ್ವಾಮೀಜಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಪ್ಲಾಸ್ಟಿಕ್ ಮುಕ್ತ ಸಮಾಜ ಮತ್ತು ಹಸಿರು ಸಂಪತ್ತನ್ನು ರಕ್ಷಿಸುವ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ಅತಿಥಿಗಳು ಮಾತನಾಡಿದರು. ಮಾರುತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಸಪ್ನ ಸುಬ್ಬಯ್ಯ, ದೈಹಿಕ ಶಿಕ್ಷಕಿ ಸುಶೀಲ್, ಶಿಕ್ಷಕಿ ಪ್ರತಿಮಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಸಿದ್ದಾಪುರ : ಪರಿಸರ ದಿನಾವರಣೆಯ ಅಂಗವಾಗಿ ಶ್ರೀ ಮತ್ತಪ್ಪ ಯುವ ಕಲಾ ಸಮಿತಿ ಹಾಗೂ ಡೋಮಿನೋಸ್ ಕ್ಲಬ್ ನೆಲ್ಯಹುದಿಕೇರಿಯಲ್ಲಿ ನೂರಾರು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಶ್ರೀ ಮುತ್ತಪ್ಪ ಯುವ ಕಲಾ ಸಮಿತಿಯು ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ನಿರಂತರವಾಗಿ ಕಸವಿಲೇವಾರಿ ಮಾಡುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ತಮ್ಮದೇ ಸ್ವಂತ ಹಣದಿಂದ ಸುಸಜ್ಜಿತವಾದ ಬಸ್ ತಂಗುದಾಣವನ್ನು ನಿರ್ಮಿಸಿದ್ದು, ಪರಿಸರ ದಿನಾಚರಣೆಯ ಪ್ರಯುಕ್ತ ನೂತನ ಬಸ್ ತಂಗುದಾಣವನ್ನು ಸಮಿತಿಯ ಅಧ್ಯಕ್ಷರು ಉದ್ಘಾಟಿಸಿದರು. ಇದೇ ಸಂದರ್ಭ ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡೋಮಿನೋಸ್ ಕ್ಲಬ್ ಸ್ಥಳೀಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಘೋಷಣೆಗಳನ್ನು ಹಾಕುತ್ತಾ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ನಂತರ ಕಾವೇರಿ ಸೇತುವೆ ಬಳಿಯಲ್ಲಿ ಕ್ಲಬ್‍ನ ಸದಸ್ಯರು ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದÀರ್ಭ ಶ್ರೀ ಮುತ್ತಪ್ಪ ಯುವ ಕಲಾ ಸಮಿತಿಯ ಅಧ್ಯಕ್ಷ ಸುಂದರ್, ಡೋಮಿನೋಸ್ ಕ್ಲಬ್ ಅಧ್ಯಕ್ಷ ಶೌಕತ್ ಅಲಿ,ಕೊಡಗು ವೆಲ್ ನೆಸ್ ಅಸೋಷಿಯೇಶನ್ ಸದಸ್ಯೆ ರಮ್ಯಾ ಬೋಪಯ್ಯ, ಸ್ಥಳೀಯ ಕಾಫಿ ಬೆಳೆಗಾರರಾದ ಸಿ.ಕೆ.ಚುಮ್ಮಿ ಪೂವಯ್ಯ ಹಾಗೂ ಸಂಘಟನೆಗಳ ಪದಾಧಿಕಾರಿಗಳಾದ ಪದ್ಮನಾಬ್, ನೌಫಲ್, ಅನೀಶ್, ಶರಣ್ ಮತ್ತಿತರರು ಹಾಜರಿದ್ದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರದ ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮಗಳು ನಡೆಯಿತು. ಪಟ್ಟಣ ಪಂಚಾಯ್ತಿ ಆಶ್ರಯದಲ್ಲಿ ಗುಂಡುರಾವ್ ಬಡಾವಣೆ, ಜೂನಿಯರ್ ಕಾಲೇಜು ಆವರಣ ಸೇರಿದಂತೆ ಗಣಪತಿ ದೇವಾಲಯ ಬಳಿ ಗಿಡಗಳನ್ನು ನೆಡಲಾಯಿತು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಜೂನಿಯರ್ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ, ಪ್ರಮುಖ ಅಮೃತ್‍ರಾಜ್, ಪಂಚಾಯ್ತಿ ಸದಸ್ಯ ಮಧುಸೂದನ್, ಭಾಸ್ಕರ್ ನಾಯಕ್, ವೈಶಾಖ್ ಮತ್ತಿತರರು ಇದ್ದರು.ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ವಿದ್ಯಾರ್ಥಿಗಳು ಘೋಷ ವಾಕ್ಯಗಳ ಫಲಕವನ್ನು ಹಿಡಿದು ಘೋಷಣೆಗಳನ್ನು ಕೂಗಿದರಲ್ಲದೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾಗೃತಿ ಮೂಡಿಸಿದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿಗಳು ಪಟ್ಟಣದ ಇಕ್ಕೆಲೆಗಳಲ್ಲಿ ಇದ್ದ ಪ್ಲಾಸ್ಟಿಕ್ ಕಸಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಚತೆಗೆ ಆಧ್ಯತೆ ನೀಡಿದರು.

ಕನ್ನಡ ವೃತ್ತದಲ್ಲಿ ಕಾಲೇಜಿನ ಪ್ರಾಂಶುಪಾಲ ಸೋಮಚಂದ್ರ ಮಾತನಾಡಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ನುಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಪಿಡಿಓ ಮೇದಪ್ಪ, ಸಿಬ್ಬಂದಿಗಳು, ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸೋಮವಾರಪೇಟೆ : ಐಗೂರು ಸರಕಾರಿ ಪ್ರೌಢಶಾಲೆಯ ಭುವನಕ್ಕೊಂದು ಸದನ ಇಕೋ ಕ್ಲಬ್ ಹಾಗೂ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಕಾರದೊಂದಿಗೆ ವಿಶ್ವಪರಿಸರ ದಿನಾಚರಣೆ ನಡೆಯಿತು.

ದಿನದ ಅಂಗವಾಗಿ ಶಾಲಾ ಆವರಣದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಪರಿಸರ ರಕ್ಷಣೆಯ ಕುರಿತು ಜಾಗೃತಿ ಜಾಥಾ ನಡೆಯಿತು. “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ವಿಶ್ವಪರಿಸರ ದಿನ-ದಿನವೂ ಪರಿಸರ ದಿನ” ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಶಾಲಾ ಆವರಣದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕ ಯಶವಂತ್ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.*ಗೋಣಿಕೊಪ್ಪಲು : ತಿತಿಮತಿ ಆನೆಚೌಕೂರು ನಡುವಿನ ನಾಗರಹೊಳೆ ಅರಣ್ಯದ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶುಚಿಗೊಳಿಸಿದರು.

ವಿಶ್ವಪರಿಸರ ದಿನಾಚರಣೆ ಅಂಗವಾಗಿ ಮತ್ತಿಗೋಡು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಯಾಣಿಕರು ವಾಹನದಲ್ಲಿ ತೆರಳುವಾಗ ತಾವು ತಿಂದ ಬಿಸ್ಕೆಟ್, ನೀರಿನ ಬಾಟಲ್ ಮತ್ತಿತರ ತಿನಿಸು ಹಾಗೂ ಪಾನೀಯಗಳ ಪ್ಲಾಸ್ಟಿಕ್ ಪ್ಯಾಕ್‍ಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಪರಿಸರದ ಗಿಡಮರಗಳಿಗೆ ಹಾನಿಯಾಗುವದೇ ಅಲ್ಲದೆ ವನ್ಯ ಜೀವಿಗಳಿಗೂ ತೊಂದರೆಯಾಗುತ್ತಿದೆ.

ಇದನ್ನು ಮನಗಂಡ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಕರೆದುಕೊಂಡು ತ್ಯಾಜ್ಯವನ್ನೆಲ್ಲ ತೆಗೆದು ಚೀಲಕ್ಕೆ ತುಂಬಿಸಿ ಒಂದೆಡೆ ಹಾಕಿದರು. ಹಚ್ಚಹಸಿರಿನ ಗಿಡಮರಗಳಿಂದ ಕೂಡಿದ ಪರಿಸರ ಸ್ವಚ್ಛವಾಗಿದೆ. ಪರಿಸರದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಪರಿಸರ ಸ್ವಚ್ಛತೆ ಬಗ್ಗೆ ನಾಮಫಲಕ ಹಾಕಿದ್ದರೂ ಅದನ್ನು ಗಮನಿಸುತ್ತಿಲ್ಲ ಎಂದು ಆರ್‍ಎಫ್‍ಒ ಕಿರಣ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್, ಶಿಕ್ಷಕಿ ರಾಣಿ ಪಾಲ್ಗೊಂಡಿದ್ದರು.ಇಲ್ಲಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕುಶಾಲನಗರ ಮಕ್ಕಳ ಸಹಾಯ ವಾಣಿ ಕೇಂದ್ರ, ಕಾರ್ಡ್ ಸಂಸ್ಥೆ ಹಾಗೂ ಹೆಬ್ಬಾಲೆ ಗ್ರಾ.ಪಂ.ಸಂಯುಕ್ತಾಶ್ರಯಲ್ಲಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಸಸಿ ನೆಟ್ಟು ನೀರು ಹಾಕಿದರು.

ಮಕ್ಕಳ ಸಹಾಯವಾಣಿ ಕೇಂದ್ರದ ಬಿ.ಕೆ.ಕುಮಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಮೇಶ್, ಚೈಲ್ಡ್ ಲೈನ್‍ನ ಕುಸುಮಾ, ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಶಾಲಾ ಶಿಕ್ಷಕರು, ಚೈಲ್ಡ್ ಲೈನ್ ಸಿಬ್ಬಂದಿಗಳು ಹಾಗೂ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ವಿಶ್ವ ಪರಿಸರ ದಿನ ಅಂಗವಾಗಿ ಇಂದು ನಗರದಲ್ಲಿ ವಿವಿಧÀ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪರಿಸರ ಜಾಥಾ ಹಮ್ಮಿಕೊಳ್ಳುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಎನ್.ಎಸ್,ಎಸ್ ವಿಭಾಗ, ಯುಕೊ ಕ್ಲಬ್, ಸರ್ಕಾರಿ ಪ್ರೌಢಶಾಲೆ, ಮತ್ತು ಎಂಬಾರ್ಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವದರ ಮೂಲಕ ಆಚರಿಸಲಾಯಿತು. ಪರಿಸರಕ್ಕೆ ಸಂಬಂಧಿಸಿದಂತೆ ಹಲವು ಉಪಯುಕ್ತ ಮಾಹಿತಿಗಳ ಫಲಕಗಳನ್ನು ಹಿಡಿದು ಸಾಗಿದ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಮಾಹಿತಿಯನ್ನು ಒದಗಿಸಿದರು. ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯು ವಿತರಿಸಿದ ವಿವಿಧ ತಳಿಯ ಸಸಿಗಳನ್ನು ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಮತ್ತು ಎಂಬಾರ್ಕ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನೆಟ್ಟರು. ಈ ಸಂದÀರ್ಭದಲ್ಲಿ ಮಾತನಾಡಿದ ಎನ್.ಕೆ. ಜ್ಯೋತಿ ಪರಿಸರವು ಹಲವು ಬಗೆಯಲ್ಲಿ ಮಾನವ ಉಪಯುಕ್ತವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್,ಎಸ್ ವಿಭಾಗದ ಅಧಿಕಾರಿ ದಿನೇಶ್, ಕಾಲೇಜಿನ ಉಪ ಪ್ರಾಂಶುಪಾಲೆ ಕೆ.ಕೆ. ಅಂಬುಜ ಉಪನ್ಯಾಸಕ ಚಾಲ್ಸ್ ಡಿಸೋಜ, ಎಂಬಾರ್ಕ್ ಸಂಸ್ಥೆಯ ದಿವಾಕರ್ ಶೆಟ್ಟಿ, ಶ್ರೀಕಾಂತ್ ಟಿ.ಎಸ್, ಮನ್ಸೂರ್ ಅಹಮ್ಮದ್, ಮತ್ತು ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.