ವಾಷಿಂಗ್ಟನ್, ಜೂ. 6: ಗುಂಪಾಗಿ ಕುಳಿತು ಕಾಫಿ ಸೇವನೆ ಮಾಡುತ್ತಾ ಸಂಭಾಷಣೆ ನಡೆಸಿದರೆ ಅವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಅಮೇರಿಕಾದ ಓಹಿಯೋ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಯಾರು ಕಾಫಿ ಸೇವನೆ ಮಾಡುತ್ತಾ ಗುಂಪು ಚರ್ಚೆ ನಡೆಸುವರೋ ಅವರು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದು ತಿಳಿದುಬಂದಿದ್ದು ಕೆಫಿನ್ ಯುಕ್ತ ಕಾಫಿ ಸೇವನೆಯು ಅವರನ್ನು ಹೆಚ್ಚು ಜಾಗರೂಕರನ್ನಾಗಿಸಲಿದೆ ಎನ್ನಲಾಗಿದೆ. ಕೆಫಿನ್ ಯುಕ್ತ ಕಾಫಿ ಸೇವಿಸಿದ ಜನರು ಹೆಚ್ಚಿನ ಜಾಗರೂಕತೆಯಿಂದಾಗಿ ತಂಡದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು ಎಂದು ತಾವು ಕಂಡುಕೊಂಡಿದ್ದೇವೆ ಎನ್ನುವದಾಗಿ ಲೇಖಕ ಅಮಿತ್ ಸಿಂಗ್ ಹೇಳಿದ್ದಾರೆ. ಕೆಫಿನ್ ಮಾನವನನ್ನು ಹೇಗೆ ಜಾಗರೂಕನನ್ನಾಗಿಸುತ್ತದೆ ಎನ್ನುವದನ್ನು ಇದುವರೆಗೆ ಅನೇಕ ಹಲವು ಅಧ್ಯಯನದಲ್ಲಿ ನೋಡಿದ್ದೇವೆ. ಆದರೆ ಇದು ತಂಡವೊಂದರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎನ್ನುವದನ್ನು ಬಹುರಂಗಪಡಿಸಿದ ಮೊದಲ ವರದಿ ಇದು ಎಂದು ಸಿಂಗ್ ಹೇಳಿದ್ದಾರೆ. ಸಿಂಗ್ ಜತೆಗೆ ವಾಸು ಉನ್ನಾವ ಹಾಗೂ ಹೆಚ್. ರಾವ್ ಉನ್ನಾವ ಎನ್ನುವವರು ಸೇರಿ ಈ ವರದಿಯನ್ನು ತಯಾರಿಸಿದ್ದಾರೆ.
ಲೈಂಗಿಕ ಹಗರಣ : 10 ವರ್ಷ ಜೈಲು
ಚಂಡೀಘರ, ಜೂ. 6: 2006 ರ ಜಮ್ಮು ಮತ್ತು ಕಾಶ್ಮೀರ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಡೆಪ್ಯುಟಿ ಇನ್ಸ್ಪೆಕ್ಟರ್ ಸೇರಿದಂತೆ ಐವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಚಂಡಿಘರದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಗಗನ್ ಜಿತ್ ಕೌರ್ ಈ ತೀರ್ಪು ಪ್ರಕಟಿಸಿದ್ದಾರೆ. ಮಾಜಿ ಬಿಎಸ್ಎಫ್ ಡೆಪ್ಯುಟಿ ಇನ್ಸ್ ಪೆಕ್ಟರ್ ಕೆ.ಸಿ. ಪಂಡಿ, ಜಮ್ಮು ಕಾಶ್ಮೀರದ ಮಾಜಿ ಉಪ ಪೆÇಲೀಸ್ ಅಧೀಕ್ಷಕ ಮೊಹಮ್ಮದ್ ಅಶ್ರಫ್ ಮಿರ್ ಹಾಗೂ ಮೂವರು ಇತರರು ಶಿಕ್ಷೆಗೆ ಗುರಿಯಾಗಿದ್ದಾರೆ. ಪಂಡಿ ಹಾಗೂ ಅಶ್ರಫ್ ಮಿರ್ ಅವರುಗಳಿಗೆ ಶಿಕ್ಷೆ ಜತೆಗೆ ತಲಾ ರೂ. 1 ಲಕ್ಷ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ದಂಡ ಕಟ್ಟಲು ವಿಫಲವಾದಲ್ಲಿ ಅವರು ಮತ್ತೆ ಒಂದು ವರ್ಷಗಳ ಹೆಚ್ಚುವರಿ ಜೈಲು ವಾಸ ಶಿಕ್ಷೆಗೆ ಒಳಗಾಗಬೇಕಾಗುವುದು. ಇತರೆ ಮೂವರೂ ಸಹ ರೂ. 50,000 ದಂಡ ಪಾವತಿ ಮಾಡಬೇಕಿದ್ದು ಅವರು ದಂಡ ಕಟ್ಟಿಲ್ಲವಾದರೆ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಹೇಳಿದೆ.
ಸಾಲ ಮನ್ನಾ ಪ್ರಕ್ರಿಯೆ ಆರಂಭ : ಸಿಎಂ
ಬೆಂಗಳೂರು, ಜೂ. 6: ರೈತರ ಸಾಲ ಮನ್ನಾಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ. ಸಾಲ ಮನ್ನಾಗಾಗಿ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚೆ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇಂದು ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಸಚಿವ ಸಂಪುಟ ವಿಸ್ತರಣೆ ತಡವಾಗಿದ್ದಕ್ಕೆ ಹಲವರು ಕಟುವಾಗಿ ಟೀಕಿಸಿದ್ದಾರೆ. ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಸಂಪುಟ ವಿಸ್ತರಣೆ ವೇಳೆ ಭಿನ್ನಮತ ಇದ್ದೆ ಇರುತ್ತೆ ಎಂದರು. ಸ್ಥಿರ ಸರ್ಕಾರ ನೀಡಲು ಎರಡೂ ಪಕ್ಷಗಳು ಬದ್ಧವಾಗಿವೆ. ತಮ್ಮ ಸರ್ಕಾರ ಐದು ವರ್ಷ ಬಾಳಿಕೆ ಬರುವ ಬಗ್ಗೆ ಯಾವ ಅನುಮಾನವನ್ನೂ ಇಟ್ಟುಕೊಳ್ಳಬೇಡಿ. ಮುಂದಿನ ಅವಧಿಗೂ ನಮ್ಮ ಸಮ್ಮಿಶ್ರ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಅನ್ನಭಾಗ್ಯ ಸೇರಿದಂತೆ ಹಿಂದಿನ ಸರ್ಕಾರ ಆರಂಭಿಸಿರುವ ಉಪಯುಕ್ತ ಯೋಜನೆಯಗಳನ್ನು ಮುಂದುವರೆಸುತ್ತೇವೆ. ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವದು ತಮ್ಮ ಆದ್ಯತೆ ಎಂದರು.
ಆರ್ಬಿಐ ರೆಪೋ ದರ ಏರಿಕೆ
ಮುಂಬೈ, ಜೂ. 6: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೆÇೀ ದರವನ್ನು ಶೇ. 6 ರಿಂದ ಶೇ. 6.25 ಕ್ಕೆ ಏರಿಕೆ ಮಾಡಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೆಪೆÇೀ ದರ ಏರಿಕೆ ಮಾಡಿರುವ ಆರ್ಬಿಐ, ರಿವರ್ಸ್ ರೆಪೆÇೀ ದರವನ್ನು ಶೇ. 0.25 ರಷ್ಟು ಏರಿಸಿ ಶೇ. 6 ಕ್ಕೆ ನಿಗದಿಪಡಿಸಿದೆ. ಇದರಿಂದ ಬ್ಯಾಂಕ್ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಹಾಗೂ ಹಣದುಬ್ಬರ ಏರಿಕೆ ಮತ್ತಿತ್ತರ ಸಂಕಿರ್ಣ ಸಂದಿಗ್ಧಸ್ಥಿತಿಯಲ್ಲಿ ಆರ್ಬಿಐ ರೆಪೆÇೀ ದರ ಏರಿಸಿದ್ದು, ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ. ಇಂದು ಆರ್ಬಿಐನ ಹಣಕಾಸು ನೀತಿ ನಿರೂಪಣೆ ಸಮಿತಿಯ ಎಲ್ಲ ಆರು ಸದಸ್ಯರು ಪ್ರಮುಖ ಬಡ್ಡಿ ದರಗಳನ್ನು ಏರಿಸುವ ಸರ್ವಾನುಮತದ ನಿರ್ಧಾರ ಕೈಗೊಂಡಿದ್ದು, ದೇಶದ ಹಾಲಿ ಸ್ಥೂಲ ಆರ್ಥಿಕ ಸ್ಥಿತಿಗತಿಯನ್ನು ಅನುಲಕ್ಷಿಸಿ ಬಡ್ಡಿ ದರ ಏರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2018-19ರ ಸಾಲಿನಲ್ಲಿ ಏಪ್ರಿಲ್ನಲ್ಲಿ ನಡೆದಿದ್ದ ಆರ್ಬಿಐ ಮೊದಲ ದ್ವೆಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಸಂದರ್ಭ ಈ ವರ್ಷದ ಮೊದಲರ್ಧದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇ. 4.7 ರಿಂದ ಶೇ. 5.1 ರ ನಡುವೆ ಇರುವದೆಂದು ಅಂದಾಜಿಸಲಾಗಿತ್ತು. ಆದೇ ರೀತಿಯ ವರ್ಷದ ದ್ವಿತೀಯಾರ್ಧದಲ್ಲಿ ಶೇ. 4.4 ರ ಹಣದುಬ್ಬರ ಇರುವದೆಂದು ಅಂದಾಜಿಸಿದೆ.
ಕಾಶಿ ದೇವಾಲಯ ಸ್ಫೋಟ ಬೆದರಿಕೆ
ಉತ್ತರಪ್ರದೇಶ, ಜೂ. 6: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕೃಷ್ಣ ಜನ್ಮಭೂಮಿ ಸ್ಫೋಟಿಸುವದಾಗಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಬೆದರಿಕೆ ಹಾಕಿರುವದಾಗಿ ಉತ್ತರಪ್ರದೇಶ ಪೆÇಲೀಸರು ರಾಜ್ಯಾದ್ಯಂತ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡೆರ್ ಮೌಲಾನಾ ಅಂಬು ಶೇಖ್ ಕಳೆದ ತಿಂಗಳು ನೈರುತ್ಯ ರೈಲ್ವೇಗೆ ಪತ್ರ ರವಾನಿಸಿದ್ದು ಈ ಸಂಬಂಧ ಉತ್ತರಪ್ರದೇಶ ಪೆÇಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಮೇ 29 ರಂದು ದೆಹಲಿಯ ನೈರುತ್ಯ ರೈಲ್ವೆ ಈ ಪತ್ರವನ್ನು ಸ್ವಿಕರೀಸಿದ್ದು ಪತ್ರದಲ್ಲಿ ಶಹಾನಪುರ ಮತ್ತು ಹಪುರ್ ಸೇರಿದಂತೆ ಹಲವು ರೈಲು ನಿಲ್ದಾಣಗಳನ್ನು ಸ್ಫೋಟಿಸುವದಾಗಿ ಬೆದರಿಕೆ ಹಾಕಿದೆ. ತಾ. 8-10 ರಂದು ಕೃಷ್ಣ ಜನ್ಮಭೂಮಿ ಮಥುರಾ ಮತ್ತು ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನವನ್ನು ಸ್ಫೋಟಿಸುವದಾಗಿ ಬೆದರಿಕೆ ಹಾಕಿದ್ದು ಈ ಹಿನ್ನೆಲೆ ರಾಜ್ಯದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಹ್ಲಿ ಮೇಣದ ಪ್ರತಿಮೆ ಅನಾವರಣ
ನವದೆಹಲಿ, ಜೂ. 6: ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಈಗಗಾಲೇ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರ ಮೇಣದ ಪ್ರತಿಮೆಗಳಿದ್ದು, ಈಗ ವಿರಾಟ್ ಕೊಹ್ಲಿ ಪ್ರತಿಮೆ ಕೂಡ ಸೇರ್ಪಡೆಯಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ‘ತನ್ನ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿರುವದು ದೊಡ್ಡ ಗೌರವ. ಜೀವಮಾನದ ನೆನಪಿಗಾಗಿ ಮ್ಯಾಡಮ್ ಟುಸ್ಸಾಡ್ಸ್ಗೆ ಕೃತಜ್ಞತೆಗಳು,’ ಎಂದಿದ್ದಾರೆ. ಇತ್ತೀಚಿಗೆ ಲಂಡನ್ನಿಂದ ದೆಹಲಿ ಆಗಮಿಸಿದ್ದ ಪರಿಣತ ಕಲಾವಿದರ ತಂಡ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ನಿರ್ಮಿಸಿದೆ. ಇದಕ್ಕಾಗಿ ವಿರಾಟ್ ಅವರ ದೇಹದ 200 ನಿರ್ದಿಷ್ಟ ಅಳತೆಗಳು ಹಾಗೂ ಚಿತ್ರಗಳನ್ನು ಅವರು ಪಡೆದಿದ್ದರು.