ಮಡಿಕೇರಿ, ಜೂ. 6: ಕಳೆದ ಕೆಲವು ದಿನಗಳ ಹಿಂದೆ ಹಲವು ದಿನ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯಿತು. ಇದರ ಮುಂದುವರಿದ ಭಾಗ ಜೂ.18 ಮತ್ತು 19 ರಂದು ಮತ್ತೆ ತಲಕಾವೇರಿಯಲ್ಲಿ ನಡೆಯಲಿದೆ. ಈ ನಡುವೆ ತಲಕಾವೇರಿಯ ಬ್ರಹ್ಮಗಿರಿ ಶಿಖರ ಏರಿಕೆಗೆ ಪ್ರವೇಶ ಕುರಿತು ಇತ್ತೀಚೆಗೆ ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರವಾಯಿತು. ಜ್ಯೋತಿಷಿ ನಾರಾಯಣ ಪೊದುವಾಳ್ ,ಚೋದ್ಯರಾದ ಶ್ಯಾಂ ಸುಂದರ್ ಶಾಸ್ತ್ರಿ, ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಇವರುಗಳ ಸಮ್ಮುಖದಲ್ಲಿ ವಿಷಯ ಚರ್ಚೆಗೆ ಬಂದಿತ್ತು. ಪ್ರಶ್ನೆಯಲ್ಲಿ ಬ್ರಹ್ಮಗಿರಿಗೆ ಯಾರೂ ತೆರಳಬಾರದು ಎನ್ನುವ ನಿಷಿದ್ಧ ಕೇಳಿಬಂದಿತು . ಈ ಬಗ್ಗೆ ಮರು ಪ್ರಶ್ನೆ ಕೇಳಿದಾಗ ಶುದ್ಧತೆ, ಸದಾಚಾರದಲ್ಲಿರುವ ಪುರುಷರು ತೆರಳಬಹುದು ಎನ್ನುವ ಮಾರ್ಗದರ್ಶನ ದೊರಕಿತು. ಆದರೆ, ಮಹಿಳೆಯರಿಗೆ ಸಂಪೂರ್ಣ ನಿಷಿದ್ಧ ಎಂದು ಕೇಳಿಬಂದಿತು. ಮತ್ತೆ ಈ ಕುರಿತು ಕೇಳಿದ ಮರು ಪ್ರಶ್ನೆಗೆ ಕನ್ಯೆಯರು, ವೃದ್ಧ ಮಹಿಳೆಯರು ಮಾತ್ರ ತೆರಳಬಹುದು ಎನ್ನುವ ಉತ್ತರ ದೊರಕಿತು. ಅಗಸ್ತ್ಯರ ಸ್ಥಳವಾದುದರಿಂದ ಬ್ರಹ್ಮಗಿರಿಗೆ ಯುವತಿಯರು ತೆರಳುವಂತಿಲ್ಲ ಎನ್ನುವ ಸೂಚನೆ ದೊರಕಿತು. ಬಳಿಕ ಪುರುಷರೂ ಕೂಡ ಕೇವಲ ಅಕ್ಟೋಬರ್ 17 ರ ತುಲಾ ಸಂಕ್ರಮಣದಿಂದ ಮೇ 15 ರ ವೃಷಭ (ಮೊದಲ ಪುಟದಿಂದ) ಸಂಕ್ರಮಣದವರೆÀಗೆ ಶುದ್ಧಮುದ್ರಿಕೆ ಯಲ್ಲಿ ತೆರಳುವಂತೆ ಜ್ಯೋತಿಷಿಗಳು ನಿರ್ದೇಶನವಿತ್ತರು.

ಈ ವಿಚಾರದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡವು. ಪತ್ರಿಕೆಯೊಂದರಲ್ಲಿ ಬ್ರಹ್ಮಗಿರಿಗೆ ನಿಷಿದ್ಧ ಹೇರಿರುವ ಕುರಿತು ವರದಿ ಪ್ರಕಟಗೊಂಡಿತು. ಈ ವರದಿಯನ್ನು ಆಧರಿಸಿ ರಾಜ್ಯ ಮಾನವ ಹಕ್ಕು ಆಯೋಗವು ಸ್ವಯಂಪ್ರೇರಿತ ಕ್ರಮ ಅನುಸರಿಸಿ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೋಟೀಸ್ ಕಳುಹಿಸಿದೆ.

ಮಹಿಳೆಯರಿಂದ ಕ್ಷೇತ್ರ ಅಪವಿತ್ರವಾಗುತ್ತದೆ, ಬ್ರಹ್ಮಗಿರಿಗೆ ಹತ್ತಬಾರದು ಎನ್ನುವ ಜ್ಯೋತಿಷಿಗಳ ಸೂಚನೆಯನ್ನು ಸಮಿತಿ ಪಾಲಿಸುವದರಿಂದ ಸಮಾಜದಲ್ಲಿ ಮಹಿಳೆÉಯರ ಸಮಾನಾಂತರ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ರೂಪಿಣಿ ದೇವತೆಯಾದ ಕಾವೇರಿಯನ್ನು ಪೂಜಿಸುವ ಎಲ್ಲ ಹಕ್ಕು ಮಹಿಳೆಯರಿಗಿದೆ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಪುರುಷ- ಮಹಿಳಾ ತಾರತಮ್ಯದ ಬಗ್ಗೆ ಆಯೋಗವು ಮನಗಂಡಿದ್ದು ಈ ಕುರಿತು ತಾ. 22 ರ ಒಳಗೆ ಸಮಜಾಯಿಷಿಕೆ ನೀಡುವಂತೆ ತಲಕಾವೇರಿ ಸಮಿತಿಗೆ ಮಾನವ ಹಕ್ಕು ಆಯೋಗ ಸೂಚಿಸಿದೆ. ಅಲ್ಲದೆ ಈ ಪ್ರಕರಣದ ವಿಚಾರಣೆಯನ್ನು ಜೂ.25 ಕ್ಕೆ ನಿಗದಿಪಡಿಸಿದೆ. ಸಮಿತಿಯಿಂದ ಉತ್ತರ ಈ ನೋಟೀಸ್‍ಗೆ ತಲಕಾವೇರಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಉತ್ತರಿಸಿದ್ದು ಅದರ ಮುಖ್ಯಾಂಶ ಈ ಕೆಳಗಿನಂತಿದೆ.ತಲಕಾವೇರಿ ಸಮಿತಿಯಂದ ಬ್ರಹ್ಮಗಿರಿ ಏರಲು ಮಹಿಳೆಯರಿಗೆ ನಿಷಿದ್ಧ ಹೇರಿಲ್ಲ. ಇಂತಹ ತೀರ್ಮಾನವನ್ನು ಸಮಿತಿ ಕೈಗೊಂಡಿಲ್ಲ. ಅಷ್ಟಮಂಗಲ ಪ್ರಶ್ನೆ ಇತ್ತೀಚೆಗೆ ನಡೆದಿದ್ದು ಇನ್ನೂ ಮುಕ್ತಾಯಗೊಂಡಿಲ್ಲ ಮತ್ತೆ ಮುಂದುವರಿಯುತ್ತದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬರುವ ಅಂಶಗಳನ್ನು ಪ್ರಶ್ನೆ ಮುಕ್ತಾಯಗೊಂಡ ಬಳಿಕ ಜ್ಯೋತಿಷಿಗಳು ನೀಡುವ ಸಲಹಾ ಮಾಹಿತಿಯ ಕುರಿತು ಜಿಲ್ಲೆಯ ಹಿರಿಯ ಅಧಿಕಾರಿ ಗಳೊಂದಿಗೆ ಹಾಗೂ ಕ್ಷೇತ್ರ ತಂತ್ರಿಯವರೊಂದಿಗೆ ಚರ್ಚಿಸಲಾಗು ವದು. ಬಳಿಕವಷ್ಟೆ ಸಮಿತಿಯು ಮುಂದಿನ ತೀರ್ಮಾನ ಕೈಗೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗವು ತಮ್ಮ ಮೇಲಿನ ಈ ಪ್ರಕರಣವನ್ನು ಕೈ ಬಿಡುವಂತೆ ದೇವಾಲಯ ಸಮಿತಿ ಅಧ್ಯಕ್ಷ ತಮ್ಮಯ್ಯ ತಮ್ಮ ಉತ್ತರದಲ್ಲಿ ಕೋರಿದ್ದಾರೆ.