ಮಡಿಕೇರಿ, ಜೂ. 6: ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ 2018ರ ಸಂಬಂಧ ತಾ.8 ರಂದು ಮಡಿಕೇರಿ ನಗರಸಭೆ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯತ್ ಹಾಗೂ ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಮತದಾನ ದಿನದ 48 ಗಂಟೆ ಪೂರ್ವದಿಂದ ಅನ್ವಯಿಸುವಂತೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಯಾವದೇ ನಿಯಮಬಾಹಿರ ರಾಜಕೀಯ ಸಭೆ-ಸಮಾರಂಭ, ಮೆರವಣಿಗೆ ನಡೆಸುವದು ಅಥವಾ ಇತರೆ ರೀತಿಯ ಉಪಕರಣಗಳ ಮೂಲಕ ಯಾವದೇ ಚುನಾವಣಾ ವಿಷಯಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದು ಮುಂತಾದವುಗಳಿಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 126ರಡಿ ನಿರ್ಬಂಧವಿರುತ್ತದೆ.
ಅದರಂತೆ ಪಾರದರ್ಶಕ, ಅಕ್ರಮ ರಹಿತ ಹಾಗೂ ಮತದಾನ ಸಮಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ 2018ರ ಮತದಾನ ಸಂಬಂಧ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ಮತ್ತು 144(ಎ)ರಡಿ ದತ್ತವಾದ ಅಧಿಕಾರದಂತೆ ತಾ. 7 ರ ಬೆಳಿಗ್ಗೆ 6 ಗಂಟೆಯಿಂದ ತಾ. 8 ರಾತ್ರಿ 8 ಗಂಟೆವರೆಗೆ ಮತಗಟ್ಟೆ ಸುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ‘ನಿರ್ಬಂಧಿತ ಪ್ರದೇಶ’ವೆಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.
ನಿರ್ಭಂಧಿತ 200 ಮೀಟರ್ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವದು, ಸಂಚರಿಸುವದು, ಖಾಸಗಿ ವ್ಯಕ್ತಿಗಳು ಧ್ವನಿವರ್ಧಕ ಬಳಸುವದು, ಬಂದೂಕು ಮುಂತಾದ ಮಾರಕ ಆಯುಧಗಳನ್ನು ಹೊಂದಿರುವದು ಅಥವಾ ಹಿಡಿದು ಓಡಾಡುವದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಆದೇಶವು ಸರ್ಕಾರಿ ಕರ್ತವ್ಯದ ನಿಮಿತ್ತ ಹಾಗೂ ಮತಗಟ್ಟೆಯ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯುಧ/ಬಂದೂಕುಗಳನ್ನು ಹೊಂದಿರುವದಕ್ಕೆ ಅಥವಾ ಬಳಸುವದಕ್ಕೆ ಅನ್ವಯಿಸುವದಿಲ್ಲ.