ಮಡಿಕೇರಿ, ಜೂ. 6: ಗಂಗಾನದಿಯ ಉಗಮ ಸ್ಥಳ ಗಂಗೋತ್ರಿ ಕ್ಷೇತ್ರವಿರುವ ಉತ್ತರಖಂಡ ರಾಜ್ಯದಿಂದ ದಕ್ಷಿಣ ಗಂಗೆ ಖ್ಯಾತಿಯ ಕಾವೇರಿ ಉಗಮ ಸ್ಥಳ ತಲಕಾವೇರಿಗೆ ಇಂದು ಅಲ್ಲಿನ ಜನಪ್ರತಿನಿಧಿಗಳ ತಂಡ ಅಧ್ಯಯನ ಪ್ರವಾಸ ಕೈಗೊಂಡಿದ್ದರು. ಉತ್ತರಖಂಡ ರಾಜ್ಯದ ಟೆಹರಿಗಡ್ವಾಲ್ ಜಿಲ್ಲೆಯ ಜಿ.ಪಂ. ಅಧ್ಯಕ್ಷ ಸೋನಾಸಜ್ವಾನ್ ಈ ಅಧ್ಯಯನ ಪ್ರವಾಸ ತಂಡದ ನೇತೃತ್ವ ವಹಿಸಿದ್ದರು.
ಇಲ್ಲಿನ ಕೋಟೆ ಹಳೆಯ ವಿಧಾನ ಸಭಾಂಗಣದಲ್ಲಿ ಪ್ರವಾಸಿ ಪ್ರತಿನಿಧಿಗಳೊಂದಿಗೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಉಭಯ ಕುಶಲೋಪರಿ ಸಭೆ ನಡೆಸಲಾಯಿತು.
ಕಾವೇರಿಯ ಉಗಮ ಸ್ಥಳದಿಂದ ಕೂಡಿರುವ ಬೆಟ್ಟಗುಡ್ಡಗಳ ನಡುವಿನ ಭೌಗೋಳಿಕ ಪ್ರದೇಶ ಕೊಡಗು ಜಿಲ್ಲೆಗೂ, ಗಂಗಾನದಿಯ ಮೂಲದ ಗಂಗೋತ್ರಿಯನ್ನು ಒಳಗೊಂಡಿರುವ ಉತ್ತರಖಂಡ ರಾಜ್ಯದ ಪ್ರಾಕೃತಿಕ ಗಿರಿಕಂದರಗಳಿಗೂ ಸಾಮಿಪ್ಯವಿರುವದಾಗಿ ಈ ಸಂದರ್ಭ ನೆನಪಿಸಿಕೊಳ್ಳಲಾಯಿತು.
ಉತ್ತರಾಖಂಡ ಟೆಹರಿಗಡ್ವಾಲ್ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ತಂಡದ ನಿಯೋಗವು ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಭೇಟಿ ಮಾಡಿ ಇಲ್ಲಿನ ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ರಾಜ್ಯದಲ್ಲಿ 1988 ರಲ್ಲಿ ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆ ಆರಂಭವಾಗಿದ್ದು, 1993 ರಲ್ಲಿ ತಿದ್ದುಪಡಿಯಾಗಿ ಪ್ರಸ್ತುತ ಜಿ.ಪಂ.,ತಾ.ಪಂ.ಮತ್ತು ಗ್ರಾ.ಪಂ.ಗಳು ಹೀಗೆ ಮೂರು ಹಂತದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಆಡಳಿತ ವಿಕೇಂದ್ರಿಕರಣದಿಂದ ಗ್ರಾ.ಪಂ.ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದುಮಾಹಿತಿ ನೀಡಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ವಿದ್ಯುತ್ ಬೀದಿ ದೀಪ ಅಳವಡಿಸುವದು, ವಸತಿ, ಶೌಚಾಲಯ ನಿರ್ಮಾಣ, ಸ್ವಚ್ಚ ಭಾರತ್ ಅಭಿಯಾನ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸುವದು, ಘನ ತ್ಯಾಜ್ಯ ಸಮರ್ಪಕ ವಿಲೇವಾರಿ, ಗ್ರಾಮಸಭೆ ಮೂಲಕ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ವಸತಿ ಸೇರಿದಂತೆ ನಾನಾ ಇಲಾಖೆಗಳ ಸೌಲಭ್ಯಗಳನ್ನು ಒದಗಿಸುವದು ಹೀಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯು ಭೂ ವಿಸ್ತೀರ್ಣದಲ್ಲಿ ದೊಡ್ಡದಿದ್ದು, ಜನಸಂಖ್ಯೆಯಲ್ಲಿ ಕಡಿಮೆ ಹೊಂದಿದೆ. ಜಿಲ್ಲೆಯಲ್ಲಿ ಕೃಷಿಯನ್ನು ಅಲವಂಭಿಸಿದ್ದು, ಕಾಫಿ, ಏಲಕ್ಕಿ, ಕರಿಮೆಣಸು, ಕಿತ್ತಳೆ, ಜೊತೆಗೆ ಭತ್ತ ಪ್ರಮುಖ ಬೆಳೆಯಾಗಿದೆ ಎಂದು ಮಾಹಿತಿ ನೀಡಿದರು.
ಕೊಡಗು ಸೇನಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಪವಿತ್ರ ಜೀವನದಿ ಕಾವೇರಿಯು ತಲಕಾವೇರಿಯಲ್ಲಿ ಹುಟ್ಟುತ್ತದೆ. ಜಿಲ್ಲೆಯು ಪ್ರವಾಸೋದ್ಯಮಕ್ಕೆ ತನ್ನದೇ ಆದ ಸ್ಥಾನ ನೀಡಿದೆ ಎಂದು ಅವರು ಮಾಹಿತಿ ನೀಡಿದರು. ಬಳಿಕ ಈ ತಂಡವು ಭಾಗಮಂಡಲ ಗ್ರಾ.ಪಂ. ಆಡಳಿತ ವ್ಯವಸ್ಥೆ ವೀಕ್ಷಣೆಯೊಂದಿಗೆ ತಲಕಾವೇರಿ - ಭಾಗಮಂಡಲ ಕ್ಷೇತ್ರದರ್ಶನ ಕೈಗೊಂಡಿತು.
ಉತ್ತರಾಖಂಡ ರಾಜ್ಯದ ಟೆಚ್ರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸೋನ ಸಜ್ವಾನ್ ಮತ್ತು ಉಪಾಧ್ಯಕ್ಷÀ ಶ್ಯಾಂ ಸಿಂಗ್ ಮತ್ತು ಸದಸ್ಯರು ಜಿ.ಪಂ.ಗೆ ಅನುದಾನ ಬಿಡುಗಡೆ, ಕ್ರಿಯಾಯೋಜನೆ ತಯಾರಿಕೆ, ಆಡಳಿತ ವ್ಯವಸ್ಥೆ ಮತ್ತಿತರ ಬಗ್ಗೆ ಹಲವು ಮಾಹಿತಿ ಪಡೆದರು. ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಉಪ ಕಾರ್ಯದರ್ಶಿ ಬಾಬು, ತಾ.ಪಂ.ಸಹಾಯಕ ನಿರ್ದೇಶಕ ಜೀವನ್ಕುಮಾರ್ ಇತರರು ಇದ್ದರು.